ಬಿಹಾರ ಚುನಾವಣೆ ಒತ್ತಡಕ್ಕೆ ಮಣಿದು ಜಾತಿಗಣತಿ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಕೇಂದ್ರ ಸರಕಾರವು ಬಿಹಾರ ವಿಧಾನಸಭೆ ಚುನಾವಣೆಯ ಒತ್ತಡಕ್ಕೆ ಮಣಿದು ಜನತೆಯ ದಿಕ್ಕು ತಪ್ಪಿಸುವ ಉದ್ದೇಶದಿಂದ ಜಾತಿಗಣತಿ ವಿಷಯವನ್ನು ಚರ್ಚೆ ಮುನ್ನಲೆಗೆ ತಂದಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಜಾತಿಗಣತಿ ಚುನಾವಣಾ ಗಿಮಿಕ್ ಆಗಿದೆ. ಬಿಹಾರ ಚುನಾವಣೆಯ ಜತೆಗೆ ಪುಹಲ್ಗಾಮ್ ದಾಳಿಯ ಒತ್ತಡಕ್ಕೆ ಸಿಲುಕಿದೆ. ಇದರಿಂದ ಜನತೆಯ ಗಮನವನ್ನು ಬೇರೆಡೆ ಸೆಳೆಯಲು ಜಾತಿಗಣತಿ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ. ನಿಜವಾಗಲು ಬದ್ಧತೆ ಇದ್ದರೆ ಜಾತಿಗಣತಿಗೆ ಅನುದಾನ ಮೀಸಲಿಡಬೇಕು ಮತ್ತು ನಿರ್ದಿಷ್ಟಅವಧಿಯನ್ನು ಪ್ರಕಟಿಸಬೇಕು ಎಂದು ಆಗ್ರಹಿಸಿದರು.
ರಾಜ್ಯ ಸರಕಾರ ಜಾತಿಗಣತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಮತ್ತು ರಾಜ್ಯ ಬಿಜೆಪಿ ನಾಯಕರು ತೀವ್ರವಾಗಿ ಟೀಕಿಸಿದ್ದರು. ಇದೀಗ ಕೇಂದ್ರವೇ ಜಾತಿಗಣತಿಗೆ ತೀರ್ಮಾನಿಸಿದೆ. ಈಗ ಬಿಜೆಪಿ ನಾಯಕರು ತಮ್ಮ ಹೇಳಿಕೆಗಳಿಗೆ ಸ್ಪಷ್ಟನೆ ನೀಡಬೇಕು. ತಮ್ಮ ಹೇಳಿಕೆಗಳಿಗೆ ಯೂಟರ್ನ್ ಹೊಡೆಯುತ್ತಿದ್ದಾರೆ ಎಂದು ಅವರು ಹೇಳಿದರು.
ಒಳಮೀಸಲಾತಿ ಸೇರಿದಂತೆ ಯಾವುದೇ ಮೀಸಲಾತಿ ಕಲ್ಪಿಸಬೇಕಾದರೂ ನಿಖರವಾದ ದತ್ತಾಂಶ ಇರಬೇಕು ಎಂಬುದನ್ನು ಸುಪ್ರೀಂಕೋರ್ಟ್ ಹೇಳುತ್ತದೆ. ಆ ದತ್ತಾಂಶವು ಗಣತಿಯಿಂದ ಮಾತ್ರ ಲಭ್ಯವಾಗುತ್ತದೆ. ಅದನ್ನೇ ಕಾಂಗ್ರೆಸ್ ಸರಕಾರ ಮಾಡಿದೆ. ಸಮೀಕ್ಷೆಯಲ್ಲಿ ನಮಗೆ ಬದ್ಧತೆ ಇದೆ. ಆದರೆ, ಕೇಂದ್ರ ಸರಕಾರ ಜಾತಿ ಗಣತಿ ಮಾಡುವುದರ ಬಗ್ಗೆಯೇ ಅನುಮಾನ ಇದೆ ಎಂದು ಅವರು ನುಡಿದರು.







