ಗ್ರಾಮೀಣಾಭಿವೃದ್ಧಿ ಇಲಾಖೆಯ ಸಿಬ್ಬಂದಿ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗಿ ಆರೋಪ; ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದ ಪ್ರಿಯಾಂಕ್ ಖರ್ಗೆ

ಪ್ರಿಯಾಂಕ್ ಖರ್ಗೆ (Photo: PTI)
ಬೆಂಗಳೂರು : ಗ್ರಾಮೀಣಾಭಿವೃದ್ಧಿ ಇಲಾಖೆಯ ಕೆಲ ಸಿಬ್ಬಂದಿ ಆರೆಸ್ಸೆಸ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆನ್ನುವ ಆರೋಪ ಸಂಬಂಧ ವರದಿ ಕೇಳಿದ್ದು, ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಗುರವಾರ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರಿ ನೌಕರರು ಕೆಲಸ ಮಾಡುತ್ತಾರೆ ಅಂದುಕೊಂಡಿದ್ದೇವೆ. ಆದರೆ, ಅವರು ನಮಗಿಂತಲೂ ಹೆಚ್ಚು ರಾಜಕೀಯದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಸರಕಾರಿ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಷಣ ಮಾಡುವುದಲ್ಲದೆ, ಬೇರೆ ರೀತಿಯಲ್ಲೂ ಪಾಲ್ಗೊಂಡಿದ್ದಾರೆ. ಇದರಲ್ಲಿ ನಮ್ಮ ಇಲಾಖೆಯ ಕೆಲವರಿದ್ದಾರೆ. ಈ ಸಂಬಂಧ ವರದಿ ತರಿಸಿಕೊಳ್ಳುತ್ತಿದ್ದು, ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಅವರು ತಿಳಿಸಿದರು.
2013ರಲ್ಲಿ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದಾಗ ಸರಕಾರಿ ಶಾಲೆಗಳಲ್ಲಿ ಖಾಸಗಿ ಕಾರ್ಯಕ್ರಮ ನಡೆಸಬಾರದು ಎಂಬ ಸುತ್ತೋಲೆ ಹೊರಡಿಸಿದ್ದರು. ಹಲವು ಇಲಾಖೆಗಳು ಈ ಹಿಂದೆ ಈ ನಿಟ್ಟಿನಲ್ಲಿ ಆದೇಶಗಳು ಮಾಡಿವೆ ಎಂದ ಅವರು, ರಾಜಕೀಯಕ್ಕಾಗಿ ಹಿಂದುತ್ವ ಹುಟ್ಟು ಹಾಕಲಾಗಿದೆ ಹೊರತು ನಿಜವಾದ ಧರ್ಮ ಆಚರಣೆ ಇದರಲ್ಲಿ ಇಲ್ಲ ಎಂದು ಅವರು ನುಡಿದರು.





