ನೀರು ಸರಬರಾಜಿಗೂ ಮುನ್ನ ಮಾಲಿನ್ಯ ಪತ್ತೆ ಮಾಡುವ ತಂತ್ರಜ್ಞಾನದ ಬಗ್ಗೆ ಪ್ರಿಯಾಂಕ್ ಖರ್ಗೆ ಆಸಕ್ತಿ

ಬೆಂಗಳೂರು : ಕುಡಿಯುವ ನೀರಿನ ಮಾಲಿನ್ಯವನ್ನು ಸರಬರಾಜಿಗೂ ಮುನ್ನ ಪತ್ತೆಹಚ್ಚಲು, ಜೈವಿಕ ಮೇಲ್ವಿಚಾರಣೆಯ ಮೇಲೆ ಕೇಂದ್ರೀಕರಿಸಿದ ಸುಧಾರಿತ ನೀರಿನ ತಂತ್ರಜ್ಞಾನ ಪರಿಹಾರಗಳ ಮೇಲೆ ಕೆಲಸ ಮಾಡುವ ಸಿಂಗಾಪುರ ಮೂಲದ ಜ್ವೆಕ್ ತಂಡವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ಭೇಟಿಯಾಗಿ ಸಮಾಲೋಚನೆ ನಡೆಸಿದರು.
ನೀರಿನ ಸುರಕ್ಷತೆ ಮತ್ತು ಪರಿಸರ ಮೇಲ್ವಿಚಾರಣೆಯನ್ನು ಬಲಪಡಿಸಲು ಸ್ವಯಂಚಾಲಿತ ಮತ್ತು ಆಧುನಿಕ ತಂತ್ರಜ್ಞಾನ ವ್ಯವಸ್ಥೆಗಳನ್ನು ಬಳಸುವುದರ ಮೇಲೆ ಈ ವಿಧಾನವು ಕೇಂದ್ರೀಕರಿಸುತ್ತದೆ. ಕರ್ನಾಟಕದ ಗ್ರಾಮೀಣ ಕುಡಿಯುವ ನೀರಿನ ವ್ಯವಸ್ಥೆಗೆ ಸಿಂಗಾಪುರ ತಂತ್ರಜ್ಞಾನ ಹೇಗೆ ಪ್ರಸ್ತುತವಾಗಬಹುದು ಎಂಬುದನ್ನು ಸಂಸ್ಥೆಯ ಸದಸ್ಯರು ವಿವರಿಸಿದರು.
ಈ ಪರಿಹಾರಗಳನ್ನು ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಸಹಭಾಗಿತ್ವದಲ್ಲಿ ವಿವರವಾಗಿ ಮೌಲ್ಯಮಾಪನ ಮಾಡಲಾಗುವುದು ಮತ್ತು ಈ ತಂತ್ರಜ್ಞಾನದ ಬಗ್ಗೆ ಅಧ್ಯಯನ ಮಾಡಲು ಮಾದರಿ ಯೋಜನೆಯನ್ನು ಅಳವಡಿಸಿಕೊಳ್ಳಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಗ್ರಾಮ ಪಂಚಾಯತಿ ಮಟ್ಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಜಲ ಸುರಕ್ಷತೆಯ ದೃಷ್ಟಿಯಿಂದ ಸಾರ್ವಜನಿಕರಿಗೆ ಉತ್ತಮ ಗುಣಮಟ್ಟದ ನೀರು ಸರಬರಾಜು ಮಾಡಲು ಬದ್ಧವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು ಎಂದು ಪ್ರಕಟಣೆ ತಿಳಿಸಿದೆ.







