ಸೈಬರ್ ವಂಚನೆ ತಡೆಗೆ ಬಿಗಿ ಕ್ರಮ; ಬ್ಯಾಂಕುಗಳಲ್ಲಿ 436 ಕೋಟಿ ರೂ.ತಡೆಹಿಡಿಯುವ ಮೂಲಕ ಕರ್ನಾಟಕ ಸಾಧನೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ರಾಜ್ಯ ಸರಕಾರವು ಸೈಬರ್ ವಂಚನೆ ತಡೆಗೆ ಬಿಗಿ ಕ್ರಮ ಕೈಗೊಳ್ಳುತ್ತಿದ್ದು, ಸೈಬರ್ ವಂಚನೆಗೆ ಒಳಗಾದ ಹಣವನ್ನು ಬ್ಯಾಂಕುಗಳಲ್ಲಿ ಹಣವನ್ನು ತಡೆಹಿಡಿಯುವ ಪ್ರಕ್ರಿಯೆಯಲ್ಲಿ ಕರ್ನಾಟಕ ಅತ್ಯುನ್ನತ ಸಾಧನೆ ಮಾಡಿದೆ. ಬ್ಯಾಂಕುಗಳಲ್ಲಿ 436 ಕೋಟಿ ರೂ.ತಡೆಹಿಡಿಯುವ ಮೂಲಕ ದೇಶದಲ್ಲೇ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಶುಕ್ರವಾರ ಇಲ್ಲಿನ ಎಂ.ಜಿ.ರಸ್ತೆಯಲ್ಲಿರುವ ‘ಪೊಲೀಸ್ ವೈರ್‍ಲೆಸ್ ಕೇಂದ್ರ ಕಚೇರಿ’ಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ವಂಚನೆಗೊಳಗಾದ ಸಾರ್ವಜನಿಕರ ಹಣವನ್ನು ಬ್ಯಾಂಕುಗಳಲ್ಲೇ ತಡೆಹಿಡಿಯುವಲ್ಲಿ ಕರ್ನಾಟಕ ಪೊಲೀಸರು ಗಮನಾರ್ಹ ಯಶಸ್ಸು ಸಾಧಿಸಿದ್ದಾರೆ. ಮಹಾರಾಷ್ಟ್ರ ರಾಜ್ಯದಲ್ಲಿ ವರದಿಯಾದ 3,203 ಕೋಟಿ ರೂ.ಗಳಲ್ಲಿ 548 ಕೋಟಿ ರೂ. (ಶೇ.17) ಹಣವನ್ನು ತಡೆ ಹಿಡಿದಿದ್ದರೆ, ಕರ್ನಾಟಕದಲ್ಲಿ ವರದಿಯಾದ 2,640 ಕೋಟಿ ರೂ.ಗಳಲ್ಲಿ 436 ಕೋಟಿ ರೂ. (ಶೇ.17) ಹಣವನ್ನು ಯಶಸ್ವಿಯಾಗಿ ತಡೆಹಿಡಿಯುವ ಮೂಲಕ ಸಾರ್ವಜನಿಕರ ಹಣವನ್ನು ರಕ್ಷಿಸಿದೆ ಎಂದರು.
2025ರಲ್ಲಿ ವೆಬ್ ಮೂಲಕ ಹಾಗೂ 2026ರಲ್ಲಿ ವಾಟ್ಸಪ್ ಚಾಟ್ ಮೂಲಕ ದೂರು ನೀಡುವ ಸೌಲಭ್ಯವನ್ನು ನೀಡಿದ ನಂತರ, ವೈರ್‍ಲೆಸ್ ಘಟಕಕ್ಕೆ ದೂರು ನೀಡುವ ಸಾರ್ವಜನಿಕರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದೆ. 2026ರ (ಜನವರಿಯಿಂದ ಮೇ ವರೆಗೆ 10,33,352 ಕರೆಗಳು ಬಂದಿದ್ದು, 90,225 ದೂರುಗಳು ದಾಖಲಾಗಿವೆ. ಈ ಅವಧಿಯಲ್ಲಿ 807 ಕೋಟಿ ರೂ. ವಂಚನೆಯಾಗಿದ್ದು, ಅದರಲ್ಲಿ ಈಗಾಗಲೇ 216 ಕೋಟಿ ರೂ. ಶೇ.27 ಹಣವನ್ನು ತಡೆ ಹಿಡಿಯುವ ಮೂಲಕ ದಾಖಲೆ ಬರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸಾರ್ವಜನಿಕರಿಗೆ ದೂರು ನೀಡಲು ಸುಲಭವಾಗುವಂತೆ ಮತ್ತು ಪ್ರಕ್ರಿಯೆಯನ್ನು ಸ್ವಯಂಚಾಲಿತಗೊಳಿಸಲು ಇಲಾಖೆಯು ಇತ್ತೀಚೆಗೆ ಹಲವು ತಾಂತ್ರಿಕ ಸುಧಾರಣೆಗಳನ್ನು ತಂದಿದೆ. 2025ರಲ್ಲಿ ವೆಬ್-ಆಧಾರಿತ ಕಂಪ್ಲೇಂಟ್ ಬಾಟ್ ಮತ್ತು 2026 ರಲ್ಲಿ ವಾಟ್ಸಾಪ್ ಕಂಪ್ಲೇಂಟ್ ಬಾಟ್ ಪರಿಚಯಿಸಲಾಗಿದೆ. ದೂರುಗಳ ಆದ್ಯತೆಯ ಮೇರೆಗೆ ಕರೆಗಳನ್ನು ವಿಂಗಡಿಸಲು ಮತ್ತು ಸ್ವಯಂಚಾಲಿತವಾಗಿ ನಿರ್ವಹಿಸಲು ತಂತ್ರಜ್ಞಾನ ಬಳಸಲಾಗುತ್ತಿದೆ. ಸಾರ್ವಜನಿಕರು ಕರೆ ಮಾಡಿದಾಗ ಕಡಿತಗೊಂಡ ಕರೆಗಳಿಗೆ(ಡ್ರೋಪ್ ಕಾಲ್ಸ್) ದೂರುಗಳನ್ನು ಅಪ್‍ಲೋಡ್ ಮಾಡಲು ಸ್ವಯಂಚಾಲಿತ ಬಾಟ್ ಲಿಂಕ್ ಕಳುಹಿಸಲಾಗುತ್ತಿದೆ ಎಂದು ಅವರು ಹೇಳಿದರು.
ಐ4ಸಿ ಪ್ಲಾಟ್‍ಫಾರ್ಮ್‍ನಲ್ಲಿ ಬ್ಯಾಂಕ್ ವಹಿವಾಟುಗಳನ್ನು ವೇಗವಾಗಿ ನಿಬರ್ಂಧಿಸಲು 51 ಪಿಎಸ್‍ಐ ಮತ್ತು ಹೆಡ್ ಕಾನ್‍ಸ್ಟೆಬಲ್‍ಗಳನ್ನು ನಿಯೋಜಿಸಲಾಗಿದೆ. ಒಟ್ಟಾರೆಯಾಗಿ, ತಂತ್ರಜ್ಞಾನ ಮತ್ತು ದಕ್ಷ ಅಧಿಕಾರಿಗಳ ಸಮಯೋಚಿತ ಕ್ರಮದಿಂದಾಗಿ ಕರ್ನಾಟಕವು ಸೈಬರ್ ವಂಚಕರ ಜಾಲವನ್ನು ಭೇದಿಸುವಲ್ಲಿ ಮತ್ತು ಸಾರ್ವಜನಿಕರ ಕಷ್ಟದ ಹಣವನ್ನು ರಕ್ಷಿಸುವಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿ ನಿಂತಿದೆ. ರಾಜ್ಯದ ಪೊಲೀಸರು ಬಳಸುತ್ತಿರುವ ವೈರ್‍ಲೆಸ್ ವ್ಯವಸ್ಥೆಯನ್ನು ಆಧುನಿಕ ತಂತ್ರಜ್ಞಾನದೊಂದಿಗೆ ಮತ್ತಷ್ಟು ಸದೃಢಗೊಳಿಸುವ ಅವಶ್ಯಕತೆಯಿದೆ ಎಂದು ಎಂದು ಸಚಿವರು ಹೇಳಿದ್ದಾರೆ.
ಸಭೆಯಲ್ಲಿ ರಾಜ್ಯ ಪೊಲೀಸ್ ಮಹಾನಿದೇರ್ಶಶಕ ಡಾ. ಎಂ.ಎ. ಸಲೀಂ, ಕರ್ನಾಟಕ ಸಂವಹನ, ಲಾಜಿಸ್ಟಿಕ್ಸ್ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಸ್. ಮುರುಗನ್ ಮತ್ತಿತರ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
‘ಸೈಬರ್ ಅಪರಾಧಗಳ ತನಿಖೆ ಮತ್ತು ಹಣ ಮರುಪಡೆಯುವಿಕೆಯನ್ನು ವೇಗಗೊಳಿಸಲು ಪೊಲೀಸ್ ಇಲಾಖೆ ಹಲವು ಪ್ರಮುಖ ಹೆಜ್ಜೆಗಳನ್ನು ಇಟ್ಟಿದೆ. ಬ್ಯಾಂಕುಗಳಲ್ಲಿ ಸೈಬರ್ ವಂಚನೆ ಹಣವನ್ನು ತಕ್ಷಣವೇ ಸ್ಥಗಿತಗೊಳಿಸಲು ಬ್ಯಾಂಕ್ ಫಾಲೋ-ಅಪ್ ಟೀಮ್ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದೆ, ಇಲಾಖೆಯ ವೈರ್‍ಲೆಸ್ ಸಿಬ್ಬಂದಿಗೆ ಸೈಬರ್ ಅಪರಾಧ, ಸಿಸ್ಟಮ್ ಅಡ್ಮಿನ್ ಮತ್ತು ಐ4ಸಿ(ಇಂಡಿಯನ್ ಸೈಬರ್ ಕ್ರೈಮ್ ಕೋ-ಅರ್ಡಿನೇಷನ್ ಸೆಂಟರ್) ಪ್ಲಾಟ್‍ಫಾರ್ಮ್ ಬಳಕೆಯ ಬಗ್ಗೆ ವಿಶೇಷ ತರಬೇತಿ ನೀಡಲಾಗಿದೆ. ಎಫ್‍ಐಆರ್ ದಾಖಲಿಸಲು ವಿಶೇಷ ಸಂಪರ್ಕ ಅಧಿಕಾರಿಗಳನ್ನು ಬಳಸಿಕೊಳ್ಳಲಾಗುತ್ತಿದೆ’
-ಪ್ರಿಯಾಂಕ್ ಖರ್ಗೆ, ಗೃಹ ಸಚಿವ






