ಪೊಲೀಸ್ ಕಾನ್‍ಸ್ಟೆಬಲ್ ನೇಮಕಾತಿ; ಪ್ರಕೃತಿ ವಿಕೋಪದಿಂದ ಪರೀಕ್ಷೆಗೆ ಗೈರಾಗಿದ್ದರೆ, ಅಂತಹ ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸುವ ಬಗ್ಗೆ ಪರಿಶೀಲಿಸಿ ಕ್ರಮ : ಪ್ರಿಯಾಂಕ್ ಖರ್ಗೆ

ಬೆಂಗಳೂರು, ಪ್ರಕೃತಿ ವಿಕೋಪದಿಂದಾಗಿ ಪೊಲೀಸ್ ಕಾನ್‍ಸ್ಟೆಬಲ್ ನೇಮಕಾತಿ ಪರೀಕ್ಷೆಗೆ ಗೈರಾಗಿದ್ದರೆ, ಅಂತಹ ಅಭ್ಯರ್ಥಿಗಳಿಗೆ ಮರುಪರೀಕ್ಷೆ ನಡೆಸುವ ಬಗ್ಗೆ ಪರಿಶೀಲಿಸಿ ಕ್ರಮ ವಹಿಸಲಾಗುತ್ತದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕೃತಿ ವಿಕೋಪದಿಂದಾಗಿ ಯಾವ ಅಭ್ಯರ್ಥಿಯು ಪರೀಕ್ಷೆಗೆ ಗೈರಾಗಿರುವುದಿಲ್ಲ. ಒಂದು ವೇಳೆ ಅಂತಹ ಅಭ್ಯರ್ಥಿಗಳಿದ್ದರೆ, ಅವರಿಗೆ ಮರುಪರೀಕ್ಷೆ ನಡೆಸುವ ಬಗ್ಗೆ ಸರಕಾರದ ಮಟ್ಟದ ಪರಿಶೀಲನೆ ಮಾಡಿ ಕ್ರಮ ವಹಿಸಲಾಗುವುದು. ಇನ್ನು ವಿಜಯಪುರದಲ್ಲಿ ನಡೆದ ಘಟನೆಯ ಬಗ್ಗೆ ವರದಿಯನ್ನು ಕೇಳಿದ್ದೇನೆ. ವರದಿಯನ್ನು ಪರಿಶೀಲಿಸಿ ಕ್ರಮ ವಹಿಸಲಾಗುತ್ತದೆ ಎಂದರು.
ಬಿಜೆಪಿ ಸರಕಾರದಲ್ಲಿ ಪಿಎಸ್‍ಐ ನೇಮಕಾತಿ ಹಗರಣ ನಡೆದಾಗ ಯಾರಾದರೂ ರಾಜೀನಾಮೆ ಕೊಟ್ಟಿದ್ದರೇ? ಐಜಿಪಿ ಮಟ್ಟದ ಅಧಿಕಾರಿಯನ್ನು ಜೈಲಿಗೆ ಹಾಕಿದಾಗ ಯಾರು ರಾಜೀನಾಮೆ ನೀಡಿದ್ದರು? ಈಗ ಯಾವುದೇ ಲೋಪವಾಗಿಲ್ಲ. ಆದರೆ ಲೋಪವಾಗಿದೆ ಎಂದು ಬಿಜೆಪಿಯವರು ಆರೋಪಿಸುತ್ತಿದ್ದಾರೆ. ಲೋಪ ಏನಾಗಿದೆ ಎಂದು ತೋರಿಸಲಿ. ಲಕ್ಷಾಂತರ ಜನರು ಪರೀಕ್ಷೆಯನ್ನು ಬರೆದಿದ್ದಾರೆ. ಅಲ್ಲಿ ಲೋಪ ಬರಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದರು.
ನೇಮಕಾತಿ ಕುರಿತಾಗಿ ಮುಖ್ಯಮಂತ್ರಿಗಳು, ಪೊಲೀಸ್ ಅಧಿಕಾರಿಗಳು ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಅಧಿಕಾರಿಗಳೊಂದಿಗೆ ಮೂರು ಗಂಟೆಗಳ ಕಾಲ ಉನ್ನತಮಟ್ಟದ ಸಭೆಯನ್ನು ಮಾಡಲಾಗಿದೆ. ಅಭ್ಯರ್ಥಿಗಳಿಗೆ ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮದ ಮೂಲಕ ಮಾಹಿತಿಯನ್ನು ನೀಡಲಾಗಿದೆ. ಬಿಜೆಪಿ ಸರಕಾರದಲ್ಲಿ ಯಾವ ಮಂತ್ರಿಗಳು ಇಂತಹ ಕ್ರಮವನ್ನು ತೆಗೆದುಕೊಂಡಿದ್ದರು ಎಂದು ತೋರಿಸಲಿ. ಪರೀಕ್ಷೆಗಳನ್ನು ಹೇಗೆ ನಡಸಬೇಕು ಎಂದು ಬಿಜೆಪಿಯವರಿಂದ ಕಲಿಯಬೇಕಿಲ್ಲ ಎಂದು ಅವರು ಹೇಳಿದರು.






