ಕಾರಾಗೃಹದ ಯಾವುದೇ ಕೈದಿಗಳಿಗೆ ವಿವಿಐಪಿ ಸೌಲಭ್ಯ ನೀಡಿಲ್ಲ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ರಾಜ್ಯದ ಕಾರಾಗೃಹಗಳಲ್ಲಿರುವ ಬಂಧಿಗಳನ್ನು ಭದ್ರತೆ ಮತ್ತು ಆಡಳಿತಾತ್ಮಕ ದೃಷ್ಟಿಯಿಂದ, ಎಲ್ಲ ವಿಚಾರಣಾ ಹಾಗೂ ಸಜಾ ಬಂಧಿಗಳನ್ನು ವರ್ಣಮಾಲೆ ಮಾದರಿಯಲ್ಲಿ ವಿಂಗಡಣೆ ಮಾಡಲಾಗಿದೆಯೇ ಹೊರತು, ವಿವಿಐಪಿ ಬಂಧಿಗಳು ಹಾಗೂ ಸಾಮಾನ್ಯ ಬಂಧಿಗಳೆಂದು ಪ್ರತ್ಯೇಕಿಸಲಾಗಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಮಂಗಳವಾರ ವಿಧಾನಸಭೆಯ ಶೂನ್ಯವೇಳೆಯಲ್ಲಿ ಬಿಜೆಪಿ ಉಚ್ಛಾಟಿತ ಸದಸ್ಯ ಎಸ್.ಟಿ.ಸೋಮಶೇಖರ್ ಪ್ರಸ್ತಾವಿಸಿದ ವಿಷಯಕ್ಕೆ ಉತ್ತರಿಸಿದ ಅವರು, ಆ.11ರಂದು ಬೆಂಗಳೂರು ಕೇಂದ್ರ ಕಾರಾಗೃಹಕ್ಕೆ ನಗರ ಅಪರಾಧ ವಿಭಾಗ(ಸಿಸಿಬಿ)ದವರು ಕೆಲವು ವಿಭಾಗಗಳಲ್ಲಿ ಅನಿರೀಕ್ಷಿತ ತಪಾಸಣೆ ಕೈಗೊಂಡಿದ್ದರು. ಆಗ ಶಿಕ್ಷಾ ಬಂಧಿ ಪ್ರಜ್ವಲ್ ರೇವಣ್ಣ ಬಳಿ ಒಂದು ಸ್ಮಾರ್ಟ್ ಫೋನ್(ಸಿಮ್ ಸಹಿತ), ಮೊಬೈಲ್ ಚಾರ್ಜರ್, ಸಂಖ್ಯೆ ಡೈರಿ, ಕಪ್ಪುಬಣ್ಣದ ಸ್ಯಾನ್‍ಡಿಸ್ಕ್ ಪೆನ್‍ಡ್ರೈವ್ ದೊರೆತಿದೆ ಎಂದು ಹೇಳಿದ್ದಾರೆ.
ಈ ಕುರಿತು ಪ್ರಜ್ವಲ್ ರೇವಣ್ಣ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಜ್ವಲ್ ರೇವಣ್ಣ ಸೇರಿದಂತೆ ಕಾರಾಗೃಹದ ಯಾವುದೆ ಬಂಧಿಗಳಿಗೆ ವಿವಿಐಪಿ ಸೌಲಭ್ಯ ನೀಡಿಲ್ಲ. ರಾಜ್ಯದ ಕಾರಾಗೃಹ ಮತ್ತು ಸುಧಾರಣಾ ಸೇವಾ ಕೈಪಿಡಿ, ಕಾರಾಗೃಹಗಳ ನಿಯಮಗಳು ಮತ್ತು ಕಾರಾಗೃಹ ಕಾಯ್ದೆಯಂತೆ ಬಂಧಿಗಳಿಗೆ ನಿಯಮಾನಸಾರ ಕ್ರಮ ವಹಿಸಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಪ್ರಜ್ವಲ್ ರೇವಣ್ಣ ಕೊಠಡಿಯಲ್ಲಿ ತಪಾಸಣೆ ವೇಳೆ ವಶಪಡಿಸಿಕೊಳ್ಳಲಾದ ಮೊಬೈಲ್ ಹಾಗೂ ಇನ್ನಿತರೆ ವಸ್ತುಗಳು ಪೊಲೀಸ್ ವಶದಲ್ಲಿದ್ದು, ಅದರಲ್ಲಿ ಏನಿತ್ತು ಎಂಬುದರ ಬಗ್ಗೆ ಪರಿಶೀಲನೆ ಮಾಡಿಲ್ಲ. ಸಿಸಿಬಿಯವರು ತಪಾಸಣೆ ಕೈಗೊಂಡ ಸಂದರ್ಭದಲ್ಲಿ ನಿಷೇಧಿತ ವಸ್ತುಗಳು ಪತ್ತೆಯಾದ ಪ್ರಕರಣದಲ್ಲಿ ಕರ್ತವ್ಯಲೋಪ ಎಸಗಿದ ಸಹಾಯಕ ಅಧೀಕ್ಷಕ ಈರಣ್ಣ ರಂಗಾಪೂರ, ಜೈಲರ್ ರಾಜೇಶ್ ಧರ್ಮಟ್ಟಿ ಹಾಗೂ ವೀಕ್ಷಕ ಮಹೇಶ್ ಸಜ್ಜನ್ ಅವರನ್ನು ಕರ್ತವ್ಯದಿಂದ ಅಮಾನತ್ತುಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ನಿಷೇಧಿತ ವಸ್ತುಗಳು ದೊರೆತ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ, ಸಮಗ್ರ ವರದಿಯನ್ನು ಸಲ್ಲಿಸುವಂತೆ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಇಲಾಖೆಯ ಪೊಲೀಸ್ ಉಪ ಮಹಾನಿರೀಕ್ಷಕ ಜಿನೇಂದ್ರ ಖನಗಾವಿ ಅವರಿಗೆ ಸೂಚಿಸಲಾಗಿದ್ದು, ವಿಚಾರಣಾ ವರದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.






