ತಂತ್ರಜ್ಞಾನ ಮೂಲಕ ಪೊಲೀಸ್ ಪಡೆಯನ್ನು ಭವಿಷ್ಯದ ಸವಾಲುಗಳಿಗೆ ಸನ್ನದ್ಧಗೊಳಿಸಿ : ಸಚಿವ ಪ್ರಿಯಾಂಕ್ ಖರ್ಗೆ

ಬೆಂಗಳೂರು : ಹೊಸ ರೀತಿಯ ಅಪರಾಧಗಳಿಗೆ ಹಳೆಯ ವಿಧಾನಗಳಿಂದ ಪ್ರತಿಕ್ರಿಯಿಸಲು ಸಾಧ್ಯವಿಲ್ಲ. ಹೀಗಾಗಿ ಹೊಸ ಜ್ಞಾನ, ಆಧುನಿಕ ತಂತ್ರಜ್ಞಾನ ಹಾಗೂ ನಿರಂತರ ತರಬೇತಿಯ ಮೂಲಕ ಪೊಲೀಸ್ ಪಡೆಯನ್ನು ಭವಿಷ್ಯದ ಸವಾಲುಗಳಿಗೆ ಸನ್ನದ್ಧಗೊಳಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕರೆ ನೀಡಿದ್ದಾರೆ.
ಶುಕ್ರವಾರ ಇಲ್ಲಿನ ಮಾಣಿಕ್ ಶಾ ಮೈದಾನದಲ್ಲಿ ರಾಷಟ್ರೀಯ ಭದ್ರತಾ ಪಡೆ(ಎನ್‍ಎಸ್‍ಜಿ) ವತಿಯಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯ ಪೊಲೀಸರಿಗಾಗಿ ಸಮಗ್ರ ಸಾಮಥ್ರ್ಯ ವೃದ್ದಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂದಿನ ಬದಲಾಗುತ್ತಿರುವ ಅಪರಾಧ ಮತ್ತು ಭದ್ರತಾ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು ಪೊಲೀಸ್ ಪಡೆ ನಿರಂತರವಾಗಿ ತನ್ನ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದರು.
ಎನ್‍ಎಸ್‍ಜಿಯಂತಹ ದೇಶದ ಅತ್ಯುನ್ನತ ಭದ್ರತಾ ಸಂಸ್ಥೆಯ ಸಹಯೋಗದೊಂದಿಗೆ ನಡೆದ ಇಂತಹ ತರಬೇತಿ ಕಾರ್ಯಕ್ರಮವು ಕೇವಲ ಒಂದು ತರಬೇತಿ ಕಾರ್ಯಕ್ರಮವಲ್ಲ. ಇದು ರಾಜ್ಯದ ಭದ್ರತಾ ವ್ಯವಸ್ಥೆಯನ್ನು ಭವಿಷ್ಯದ ಸವಾಲುಗಳಿಗೆ ಸಿದ್ಧಗೊಳಿಸುವ ಮಹತ್ವದ ಹೆಜ್ಜೆಯಾಗಿದೆ ಎಂದು ಅವರು ತಿಳಿಸಿದರು.
ಭಯೋತ್ಪಾದನೆಯಂತಹ ದೊಡ್ಡ ಭದ್ರತಾ ಸವಾಲುಗಳನ್ನು ಯಾವುದೇ ಒಂದು ಸಂಸ್ಥೆಯಿಂದ ಮಾತ್ರ ಎದುರಿಸಲು ಸಾಧ್ಯವಿಲ್ಲ. ಗುಪ್ತಚರ ಸಂಸ್ಥೆಗಳು, ಪೊಲೀಸ್, ವಿಶೇಷ ಪಡೆಗಳು, ಫೋರೆನ್ಸಿಕ್ ಸಂಸ್ಥೆಗಳು, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ವೈದ್ಯಕೀಯ ಸೇವೆಗಳು ಹಾಗೂ ನಾಗರಿಕ ಆಡಳಿತ ಸೇರಿದಂತೆ ಎಲ್ಲ ಸಂಬಂಧಿತ ಸಂಸ್ಥೆಗಳು ಒಂದೇ ಗುರಿಯೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಬೇಕಾಗುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ ಪೊಲೀಸ್ ಇಲಾಖೆಯನ್ನು ಆಧುನಿಕಗೊಳಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ನಿರಂತರವಾಗಿ ಹೆಚ್ಚಿನ ಒತ್ತು ನೀಡುತ್ತಿದೆ. ಫೊರೆನ್ಸಿಕ್ ಸಾಮಥ್ರ್ಯ, ಸೈಬರ್ ತನಿಖೆ, ದತ್ತಾಂಶ ಆಧಾರಿತ ಪೊಲೀಸ್ ವ್ಯವಸ್ಥೆ, ತ್ವರಿತ ಪ್ರತಿಕ್ರಿಯೆ ಹಾಗೂ ವಿಶೇಷ ಕಾರ್ಯಾಚರಣೆಗಳ ಸಾಮಥ್ರ್ಯವನ್ನು ಮತ್ತಷ್ಟು ಹೆಚ್ಚಿಸುವ ಅಗತ್ಯವಿದೆ. ಪೊಲೀಸ್ ಪಡೆ ತನ್ನ ಕಾರ್ಯಾಚರಣಾ ಸಾಮಥ್ರ್ಯವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳುವ ಮೂಲಕ ಹೊಸ ರೀತಿಯ ಅಪರಾಧಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸುವಂತಾಗಬೇಕು ಎಂದು ಅವರು ತಿಳಿಸಿದರು.
ಪೊಲೀಸ್ ಪಡೆಯ ಪ್ರತಿಯೊಬ್ಬ ಸಿಬ್ಬಂದಿಯೂ ತನ್ನ ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕತೆ ಮತ್ತು ವೃತ್ತಿಪರತೆಯಿಂದ ನಿರ್ವಹಿಸಿದಾಗ ಮಾತ್ರ ಸುರಕ್ಷಿತ ಹಾಗೂ ಸಮೃದ್ಧ ಕರ್ನಾಟಕವನ್ನು ನಿರ್ಮಿಸಲು ಸಾಧ್ಯ. ಪೊಲೀಸ್ ಸಿಬ್ಬಂದಿಯ ವೃತ್ತಿಪರ ಸಾಮಥ್ರ್ಯವನ್ನು ಹೆಚ್ಚಿಸುವ ಇಂತಹ ತರಬೇತಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು. ಎನ್‍ಎಸ್‍ಜಿ ಸಹಯೋಗದಲ್ಲಿ ನಡೆದ ಈ ಸಮಗ್ರ ಸಾಮಥ್ರ್ಯವೃದ್ಧಿ ತರಬೇತಿ ಕಾರ್ಯಕ್ರಮವು ಪೊಲೀಸ್ ಪಡೆಯ ವೃತ್ತಿಪರ ಸಾಮಥ್ರ್ಯವನ್ನು ಮತ್ತಷ್ಟು ಹೆಚ್ಚಿಸುವುದರೊಂದಿಗೆ, ಭವಿಷ್ಯದ ಭದ್ರತಾ ಸವಾಲುಗಳನ್ನು ಎದುರಿಸಲು ಅಗತ್ಯವಾದ ಆತ್ಮವಿಶ್ವಾಸ ಮತ್ತು ಸನ್ನದ್ಧತೆಯನ್ನು ಹೆಚ್ಚಿಸಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.






