ಸರಕಾರದ ಪ್ರಕರಣಗಳಲ್ಲಿ ಸಮರ್ಥ ವಾದ ಮಂಡನೆಗೆ ಒತ್ತು; ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೂಚನೆ

ಬೆಂಗಳೂರು : ನ್ಯಾಯಾಲಯಗಳಲ್ಲಿ ಸರಕಾರದ ಪರವಾಗಿ ನಡೆಯುವ ವಿವಿಧ ಮೊಕದ್ದಮೆಗಳಲ್ಲಿ ಸರಕಾರದ ನಿಲುವು ಹಾಗೂ ಹಿತಾಸಕ್ತಿಯನ್ನು ಸಮರ್ಥವಾಗಿ ಬಿಂಬಿಸುವ ನಿಟ್ಟಿನಲ್ಲಿ ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆ ಇನ್ನಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕು ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸೂಚಿಸಿದ್ದಾರೆ.
ಶುಕ್ರವಾರ ನಗರದಲ್ಲಿ ನಡೆದ ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸರಕಾರದ ಪ್ರಕರಣಗಳು ಕೇವಲ ನ್ಯಾಯಾಲಯದಲ್ಲಿ ವಾದ ಮಂಡಿಸುವ ಹಂತಕ್ಕೆ ಸೀಮಿತವಾಗದೆ, ಪ್ರಕರಣದ ಆರಂಭಿಕ ಹಂತದಿಂದಲೇ ಸಂಬಂಧಿಸಿದ ಇಲಾಖೆಗಳು, ತನಿಖಾಧಿಕಾರಿಗಳು ಹಾಗೂ ಸರಕಾರಿ ವಕೀಲರ ನಡುವೆ ಸಮನ್ವಯ ಇರಬೇಕು ಎಂದರು.
ವ್ಯವಸ್ಥೆಯಲ್ಲಿನ ಲೋಪಗಳು, ಅಗತ್ಯ ಮಾಹಿತಿಯ ಕೊರತೆ ಅಥವಾ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಯಾವುದೇ ಸರಕಾರದ ಪ್ರಕರಣ ದುರ್ಬಲವಾಗಬಾರದು. ನ್ಯಾಯಾಲಯದಲ್ಲಿ ಸರಕಾರದ ಪರವಾಗಿ ವಾದ ಮಂಡಿಸುವ ಸರಕಾರಿ ವಕೀಲರಿಗೆ ಪ್ರಕರಣದ ಸಂಪೂರ್ಣ ಹಿನ್ನೆಲೆ, ಅಗತ್ಯ ದಾಖಲೆಗಳು ಹಾಗೂ ವಾಸ್ತವಾಂಶಗಳು ಸಮಯಕ್ಕೆ ಸರಿಯಾಗಿ ಲಭ್ಯವಾಗುವಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಕ್ರಮವಹಿಸಬೇಕು ಎಂದು ಅವರು ಹೇಳಿದರು.
ವಿವಿಧ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖೆಗೆ ಸಂಬಂಧಿಸಿದ ನ್ಯಾಯಾಲಯದ ಪ್ರಕರಣಗಳ ಕುರಿತು ಸಮರ್ಪಕ ಹಾಗೂ ಸಂಪೂರ್ಣ ಮಾಹಿತಿಯನ್ನು ಅಭಿಯೋಗ ಮತ್ತು ಸರಕಾರಿ ವ್ಯಾಜ್ಯಗಳ ಇಲಾಖೆಗೆ ಕಾಲಮಿತಿಯಲ್ಲಿ ಸಲ್ಲಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು, ಆದೇಶಗಳು, ಇಲಾಖೆಯ ನಿಲುವು ಹಾಗೂ ಅಗತ್ಯ ಕಾನೂನು ಮಾಹಿತಿ ಲಭ್ಯವಿದ್ದಾಗ ಮಾತ್ರ ನ್ಯಾಯಾಲಯದಲ್ಲಿ ಸರಕಾರದ ಪರ ವಾದವನ್ನು ಪರಿಣಾಮಕಾರಿಯಾಗಿ ಮಂಡಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.
ಪ್ರಕರಣಗಳ ಮಾಹಿತಿ, ದಾಖಲೆಗಳ ನಿರ್ವಹಣೆ, ಪ್ರಕರಣಗಳ ಪ್ರಗತಿ ಹಾಗೂ ನ್ಯಾಯಾಲಯದ ಆದೇಶಗಳು ಸೇರಿದಂತೆ ಅಗತ್ಯ ಮಾಹಿತಿಯನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಮೂಲಕ ಸರಕಾರಿ ವಕೀಲರಿಗೆ ಪ್ರಕರಣದ ಸಂಪೂರ್ಣ ಮಾಹಿತಿ ತ್ವರಿತವಾಗಿ ಲಭ್ಯವಾಗುವಂತೆ ವ್ಯವಸ್ಥೆಯನ್ನು ಬಲಪಡಿಸಬೇಕು. ತಂತ್ರಜ್ಞಾನ ಆಧಾರಿತ ಪ್ರಕರಣ ನಿರ್ವಹಣೆಯಿಂದ ಪ್ರಕರಣಗಳ ಮೇಲ್ವಿಚಾರಣೆ ಹಾಗೂ ಇಲಾಖೆಗಳ ನಡುವಿನ ಸಮನ್ವಯವನ್ನು ಮತ್ತಷ್ಟು ಸುಧಾರಿಸಬಹುದು ಎಂದು ಅವರು ಹೇಳಿದರು.
ಇಲಾಖೆಯ ಕಾನೂನು ಅಧಿಕಾರಿ ಹಿರಿಯ) ಹುದ್ದೆಗಳು ರಾಜ್ಯದ 8 ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ದಕ್ಷಿಣ ಕನ್ನಡ, ದಾವಣಗೆರೆ, ಬೆಳಗಾವಿ, ಕಲಬುರಗಿ ಹಾಗೂ ಬಳ್ಳಾರಿ ವಿಭಾಗಗಳ ವ್ಯಾಪ್ತಿಯಲ್ಲಿ ವಿವಿಧ ಜಿಲ್ಲೆಗಳನ್ನು ಒಳಗೊಂಡು ಇಲಾಖೆಯ ಕಾರ್ಯನಿರ್ವಹಣೆ ನಡೆಯುತ್ತಿದೆ. 416 ಪ್ರಕರಣಗಳಿಗೆ ವಿಶೇಷ ಸರಕಾರಿ ಅಭಿಯೋಜಕರನ್ನು ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದರು.
ಸಭೆಯಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಕೆ.ಎಸ್.ಪೊನ್ನಣ್ಣ, ರಾಜ್ಯದ ಅಡ್ವೋಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ, ಸರಕಾರದ ಅಪರ ಮುಖ್ಯ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯ, ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ. ಎಂ.ಎ. ಸಲೀಂ ಹಾಗೂ ಹಿರಿಯ ಸರಕಾರಿ ವಕೀಲರು ಇದ್ದರು.






