ನಾಗರಿಕ ಸೇವೆಗಳನ್ನು ಸ್ಥಳೀಯ ಭಾಷೆಗಳಲ್ಲಿ ನೀಡಲು ‘ಭಾಷಿಣಿ' ತಂತ್ರಜ್ಞಾನದ ಸದ್ಬಳಕೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ರಾಜ್ಯ ಸರಕಾರದ ಡಿಜಿಟಲ್ ಆಡಳಿತ ಮತ್ತು ನಾಗರಿಕ ಸೇವೆಗಳನ್ನು ಪ್ರತಿಯೊಬ್ಬರಿಗೂ ಮಾತೃಭಾಷೆಯಲ್ಲೇ ತಲುಪಿಸುವ ನಿಟ್ಟಿನಲ್ಲಿ ‘ಭಾಷಿಣಿ' ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುವುದು ಎಂದು ಗೃಹ ಹಾಗೂ ಐಟಿ-ಬಿಟಿ ಮತ್ತು ಇ-ಆಡಳಿತ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಗಾಗಿ ಏರ್ಪಡಿಸಿದ್ದ ‘ಭಾಷಿಣಿ' ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತದಂತಹ ವೈವಿಧ್ಯಮಯ ದೇಶದಲ್ಲಿ 22ಕ್ಕೂ ಹೆಚ್ಚು ಭಾಷೆಗಳಲ್ಲಿ ಧ್ವನಿ ಆಧಾರಿತ ಮತ್ತು ಭಾಷಾಂತರ ತಂತ್ರಜ್ಞಾನಗಳನ್ನು ತಂದಿರುವ ‘ಭಾಷಿಣಿ' ತಂಡದ ಸಾಧನೆಯನ್ನು ಮೆಚ್ಚುವಂತಹದ್ದು ಎಂದರು.
ಕರ್ನಾಟಕವು ‘ಒಂದು ರಾಜ್ಯ, ಹಲವು ಜಗತ್ತು’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪ್ರತಿ 150 ಕಿಲೋಮೀಟರ್ ಗೆ ಭಾಷಾ ವೈವಿಧ್ಯತೆ, ಉಪಭಾಷೆಗಳು ಮತ್ತು ಸಂಸ್ಕೃ ತಿ ಬದಲಾಗುತ್ತದೆ. ಕಲ್ಯಾಣ ಕರ್ನಾಟಕ, ಕರಾವಳಿ, ಮಲೆನಾಡು, ಮೈಸೂರು ಹಾಗೂ ಬಯಲು ಸೀಮೆ ಭಾಗಗಳಲ್ಲಿ ಕನ್ನಡದ ಜೊತೆಗೆ ತಮಿಳು, ತೆಲುಗು, ಮರಾಠಿ, ಉರ್ದು, ತುಳು, ಬ್ಯಾರಿ ಮುಂತಾದ ಭಾಷೆಗಳ ಪ್ರಭಾವವಿದೆ. ಈ ಎಲ್ಲ ಭಾಗಗಳ ಜನರಿಗೆ ಅವರದ್ದೇ ಭಾಷೆ-ಉಪಭಾಷೆಯಲ್ಲಿ ಸರಕಾರಿ ಸೇವೆಗಳನ್ನು ತಲುಪಿಸುವುದು ಅತ್ಯಂತ ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇಂದಿನ ದಿನಗಳಲ್ಲಿ ಸಾರ್ವಜನಿಕರು ವೆಬ್ ಫಾರ್ಮ್‍ಗಳನ್ನು ಭರ್ತಿ ಮಾಡುವುದಕ್ಕಿಂತ ಧ್ವನಿ, ವಾಟ್ಸಾಪ್, ಚಾಟ್‍ಬಾಟ್ ಮುಂತಾದ ಸರಳ ಮಾಧ್ಯಮಗಳನ್ನು ಬಯಸುತ್ತಾರೆ. ಈ ನಿಟ್ಟಿನಲ್ಲಿ, ರಾಜ್ಯ ಸರಕಾರದ 700ಕ್ಕೂ ಹೆಚ್ಚು ನಾಗರಿಕ ಸೇವೆಗಳನ್ನು 'ಪ್ರಜಾ ಸೇವೆ' ಮತ್ತು 'ಇ-ಆಡಳಿತ' ವಿಭಾಗಗಳ ಮೂಲಕ ಭಾಷಿಣಿ ಎಐ ತಂತ್ರಜ್ಞಾನ ಬಳಸಿ ಇನ್ನಷ್ಟು ಸರಳಗೊಳಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ರಾಜ್ಯದಲ್ಲಿ ಈಗಾಗಲೇ 18,000ಕ್ಕೂ ಹೆಚ್ಚು ನೋಂದಾಯಿತ ನವೋದ್ಯಮಗಳಿದ್ದು, 1,500ಕ್ಕೂ ಹೆಚ್ಚು ನವೋದ್ಯಮಗಳಿಗೆ ಸರಕಾರ ಧನಸಹಾಯ ನೀಡಿದೆ. ಇತ್ತೀಚೆಗೆ ಜಾರಿಗೆ ತರಲಾದ 'ಗವರ್ನ್‍ಮೆಂಟ್ ಫಸ್ಟ್ ಪಾಲಿಸಿ' ಮೂಲಕ ನವೋದ್ಯಮಿಗಳಿಗೆ ಸರಕಾರವೇ ಮೊದಲ ಗ್ರಾಹಕನಾಗಿ ಬೆಂಬಲ ನೀಡಲಿದೆ. ಅಲ್ಲದೆ ಡೀಪ್ ಟೆಕ್ ಹಾಗೂ ಎಐ ನಾವೀನ್ಯತೆಗಳಿಗೆ ಒಂದು ಕೋಟಿ ರೂ.ಗಳವರೆಗೆ ಅನುದಾನ ಒದಗಿಸಲಾಗುತ್ತಿದೆ ಎಂದು ಅವರು ಹೇಳಿದರು.
ಪ್ರಜಾಸೇವೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ, ಕೇಂದ್ರ ಸರಕಾರದ ಡಿಜಿಟಲ್ ಇಂಡಿಯಾ ವಿಭಾಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಬ್ ನಾಗ್, ಇ-ಆಡಳಿತ ಇಲಾಖೆಯ ಪ್ರಧಾನ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಕಾರ್ಯದರ್ಶಿ ಜೆ. ಮಂಜುನಾಥ್, ಭೋಯರ್ ಹರ್ಷಲ್ ನಾರಾಯಣರಾವ್ ಹಾಗೂ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು.






