ಡೀಪ್ಟೆಕ್ ನಾವೀನ್ಯತೆ ಪರಿಸರ ವ್ಯವಸ್ಥೆಗೆ ಮತ್ತಷ್ಟು ಬಲ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಸಂಶೋಧನೆ, ಉದ್ಯಮಶೀಲತೆ ಮತ್ತು ಸುಧಾರಿತ ತಂತ್ರಜ್ಞಾನ ಅಭಿವೃದ್ಧಿಗೆ ನಿರಂತರ ಬೆಂಬಲ ನೀಡುವ ಮೂಲಕ ಕರ್ನಾಟಕವು ಡೀಪ್ಟೆಕ್ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯ ಬೆಂಬಲಿತ ಶ್ರೇಷ್ಠತಾ ಕೇಂದ್ರವಾದ ಆರ್ಟ್ಪಾರ್ಕ್(ಎಐ ಅಂಡ್ ರೊಬೋಟಿಕ್ಸ್ ಟೆಕ್ನೋಲಾಜಿ ಪಾರ್ಕ್) ತಂಡದೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಡೀಪ್ಟೆಕ್ ಕ್ಷೇತ್ರಗಳಲ್ಲಿ ಉದ್ದೇಶಿತ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಹೆಚ್ಚಿನ ಮೌಲ್ಯ ಸೃಷ್ಟಿಸಬೇಕಾಗಿದೆ ಎಂದರು.
ಭಾರತ ಸರಕಾರದ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆ ನಿಧಿ ಅಡಿಯಲ್ಲಿ ಆಯ್ಕೆಯಾಗಿರುವ ಐದು ಫೋಕಸ್ಡ್ ರಿಸರ್ಚ್ ಆರ್ಗನೈಸೇಷನ್ಗಳಲ್ಲಿ ಆರ್ಟ್ಪಾರ್ಕ್ ಒಂದಾಗಿದೆ. ಈ ಆಯ್ಕೆಯಡಿ 500 ಕೋಟಿ ರೂ. ಮೊತ್ತದ ಹಂಚಿಕೆ ದೊರೆತಿದೆ ಎಂದು ಅವರು ಹೇಳಿದರು.
ಆರಂಭದಿಂದಲೂ ಆರ್ಟ್ಪಾರ್ಕ್ಗೆ ರಾಜ್ಯ ಸರಕಾರದಿಂದ 62 ಕೋಟಿ ರೂ.ಗೂ ಅಧಿಕ ನೆರವು ದೊರೆತಿದೆ. ಸಂಸ್ಥೆಯು ಇದುವರೆಗೆ 36 ಡೀಪ್ಟೆಕ್ ಕಂಪೆನಿಗಳನ್ನು ಇನ್ಕ್ಯುಬೇಟ್ ಮಾಡಿದ್ದು, ಇನ್ನೂ 18 ಕಂಪೆನಿಗಳು ಮುಂದಿನ ಹಂತದಲ್ಲಿವೆ. ಆರ್ಟ್ಪಾರ್ಕ್ನಿಂದ ಇನ್ಕ್ಯುಬೇಟ್ ಆಗಿರುವ ಸ್ಟಾರ್ಟ್ಅಪ್ಗಳ ಒಟ್ಟು ಮೌಲ್ಯ 1,700 ಕೋಟಿ ರೂ.ಗೂ ಅಧಿಕವಾಗಿದೆ ಎಂದು ಅವರು ತಿಳಿಸಿದರು.
ಬ್ರೈನ್ಜ್(ಬೆಂಗಳೂರು ರೋಬೋಟಿಕ್ಸ್ ಅಂಡ್ ಎಐ ಇನ್ನೋವೇಷನ್ ಜೋನ್) ಮೂಲಕ ರೋಬೋಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ನಾವೀನ್ಯತೆ, ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವ ಗುರಿ ಹೊಂದಲಾಗಿದೆ. ಆವಿಷ್ಕಾರಗಳನ್ನು ಪ್ರಾಯೋಗಿಕ ತಂತ್ರಜ್ಞಾನಗಳಾಗಿ ಪರಿವರ್ತಿಸಲು ಅಗತ್ಯವಿರುವ ಫ್ರೊಟೋಟೈಪಿಂಗ್, ಉತ್ಪಾದನಾ ಸಾಮಥ್ರ್ಯ ಹಾಗೂ ಹಂಚಿಕೆಯ ಸಂಶೋಧನೆ ಮತ್ತು ಅಭಿವೃದ್ಧಿ ಸೌಲಭ್ಯಗಳನ್ನು ಮತ್ತಷ್ಟು ಬಲಪಡಿಸಲಾಗುವುದು ಎಂದು ಅವರು ಹೇಳಿದರು.
ಮೂಲಭೂತ ಡೀಪ್ಟೆಕ್ ಕ್ಷೇತ್ರಗಳಲ್ಲಿ ನಿರ್ದಿಷ್ಟ ಗುರಿಗಳೊಂದಿಗೆ ಯೋಜನೆಗಳನ್ನು ಕೈಗೆತ್ತಿಕೊಂಡು, ಸಂಶೋಧನಾ ಸಾಮಥ್ರ್ಯವನ್ನು ವಿಸ್ತರಿಸಲಾಗುವುದು. ಈ ಉಪಕ್ರಮಗಳ ಮೂಲಕ ಬೆಂಗಳೂರಿನಲ್ಲಿ ಸಂಶೋಧನೆ, ತಂತ್ರಜ್ಞಾನ ನಾವೀನ್ಯತೆ ಮತ್ತು ಡೀಪ್ಟೆಕ್ ಉದ್ಯಮಶೀಲತೆಗೆ ಮತ್ತಷ್ಟು ಬಲ ದೊರೆಯಲಿದೆ ಎಂದು ಅವರು ತಿಳಿಸಿದರು.






