‘ಗೌರವ ಡಾಕ್ಟರೇಟ್, ನಾಡೋಜ’ವನ್ನು ಹೆಸರಿನ ಮುಂದೆ ಹಾಕಿಕೊಳ್ಳುವ ಪ್ರವೃತ್ತಿಗೆ ನಿಯಮಾವಳಿ ರೂಪಿಸುವುದು ಅಗತ್ಯ : ಪ್ರೊ.ಬರಗೂರು ರಾಮಚಂದ್ರಪ್ಪ

ಬೆಂಗಳೂರು : ಗೌರವ ಡಾಕ್ಟರೇಟ್ ಹಾಗೂ ನಾಡೋಜ ಗೌರವವನ್ನು ತಮ್ಮ ಹೆಸರಿನ ಮುಂದೆ ಹಾಕಿಕೊಳ್ಳುವ ಕೆಟ್ಟ ಪ್ರವೃತ್ತಿ ಹೆಚ್ಚಾಗುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಿಯಮಾವಳಿ ರೂಪಿಸುವ ಅಗತ್ಯವಿದೆ ಎಂದು ಹಿರಿಯ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಹೇಳಿದ್ದಾರೆ.
ರವಿವಾರ ನಗರದಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕುವೆಂಪು ಸಭಾಂಗಣದಲ್ಲಿ ಕನ್ನಡ ಸಂಘರ್ಷ ಸಮಿತಿ ಆಯೋಜಿಸಿದ್ದ ‘ರಾಷ್ಟ್ರಕವಿ ಕುವೆಂಪು, ದ.ರಾ.ಬೇಂದ್ರೆ ಹುಟ್ಟುಹಬ್ಬ ಸಮಾರಂಭ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗೌರವ ಡಾಕ್ಟರೇಟ್ ಹಾಗೂ ನಾಡೋಜ ಗೌರವ ನೀಡುವ ಬಗ್ಗೆ ಸರಕಾರ ಸೂಕ್ತ ಕಾನೂನು ತಂದು, ಪೂರಕ ನಿಯಮಾವಳಿ ರಚಿಸುವ ಅಗತ್ಯವಿದೆ. ಹಾಗೆಯೇ ಗೌರವಕ್ಕೆ ಪಾತ್ರರಾದವರು ಪದವನ್ನು ತಮ್ಮ ಹೆಸರಿನ ಮುಂದೆ ನಮೂದಿಸಿಕೊಳ್ಳುವ ಕೆಟ್ಟ ಪ್ರವೃತ್ತಿಗೆ ಕಡಿವಾಣ ಹಾಕುವ ನಿಯಮಾವಳಿ ರೂಪಿಸುವ ಅಗತ್ಯವಿದೆ. ಏಕೆಂದರೆ ಅನಧಿಕೃತ ಸಂಸ್ಥೆಗಳು ಗೌರವ ಡಾಕ್ಟರೇಟ್ ಕೊಟ್ಟು ಜನರನ್ನು ಭ್ರಮೆಗೆ ಒಳಪಡಿಸುತ್ತಿವೆ ಎಂದು ಅವರು ಅಭಿಪ್ರಾಯಪಟ್ಟರು.
ಇತ್ತೀಚೆಗೆ ರಾಷ್ಟ್ರೀಯ, ಅಂತರಾಷ್ಟ್ರೀಯ ಪ್ರಶಸ್ತಿ ಕೊಡುವ ಸಂಸ್ಥೆಗಳು ಹುಟ್ಟುಕೊಂಡಿವೆ. ಆ ಪ್ರಶಸ್ತಿಗಳಿಗೆ ಯಾವುದೇ ಮೌಲ್ಯವಿಲ್ಲದಾಗಿದ್ದು, ಪ್ರಶಸ್ತಿ ಕೊಟ್ಟವರು ಮತ್ತು ಪಡೆದವರು ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಿದೆ. ಕನ್ನಡ ಸಂಘರ್ಷ ಸಮಿತಿಯು ನೈಜ ಸಾಮಾಜಿಕ ಚಿಂತಕರು, ಹೋರಾಟಗಾರರು, ವೈಚಾರಿಕ ಲೇಖಕರಿಗೆ ಪ್ರಶಸ್ತಿಗಳನ್ನು ಯಾವುದೇ ಲಾಭಿಗೆ ಆಸ್ಪದ ಕೊಡದೆ, ನೈಜ ವ್ಯಕ್ತಿಗಳನ್ನು ಗುರುತಿಸಿ, ಸಮಿತಿಯ ಪ್ರಶಸ್ತಿಯು ನೈತಿಕ ಶಕ್ತಿಯುಳ್ಳದ್ದಾಗಿದೆ ಎಂದು ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು.
ಕುವೆಂಪು ಹಾಗೂ ಬೇಂದ್ರೆ ಇಬ್ಬರೂ ದೊಡ್ಡ ಕವಿಗಳಾಗಿದ್ದು, ಇಬ್ಬರನ್ನು ಒಟ್ಟಿಗೇ ಸೇರಿಸುವ ಕೆಲಸವಾಗಬೇಕು. ಅದನ್ನು ಬಿಟ್ಟು ಇಬ್ಬರು ದಿಗ್ಗಜರನ್ನು ಎದುರುಬದುರು ನಿಲ್ಲಿಸಬಾರದು ಎಂದು ಅವರು ಹೇಳಿದರು.
ವಿಮರ್ಶಕ ಎಚ್.ದಂದಪ್ಪ ಮಾತನಾಡಿ, ಸಾಹಿತ್ಯದಲ್ಲಿ ವೈಚಾರಿಕತೆ ಮೈಗೂಡಿಸಿಕೊಂಡಲ್ಲಿ, ಸಮಾಜವನ್ನು ಸರಿದಾರಿಯಲ್ಲಿ ಕೊಂಡೊಯ್ಯಲು ಸುಲಭವಾಗುತ್ತದೆ. ಸಾಹಿತ್ಯದಿಂದಾಗಿ ಸಾಮಾನ್ಯ ಜ್ಞಾನ ಲಭಿಸುತ್ತದೆ. ರಘುನಾಥ ಚ.ಹ. ಅವರ ‘ಇಳಿಸಲಾಗದ ಶಿಲುಬೆ’ ಕೃತಿಯಲ್ಲಿ ವೈಚಾರಿಕೆತೆ ಇದ್ದು, ರಾಜಕೀಯ ಜ್ಞಾನ ಹಾಗೂ ಸಾಮಾಜಿಕ ಚಿಂತನೆ ಎದ್ದು ಕಾಣುತ್ತಿರುವ ಕಾರಣ ಕುವೆಂಪು ಚಿರಂತನ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು ಎಂದು ಹೇಳಿದರು.
ಪ್ರಾಧ್ಯಾಪಕ ಡಾ. ಕಾ.ವೆಂ.ಶ್ರೀನಿವಾಸಮೂರ್ತಿ ಮಾತನಾಡಿ, ಕನ್ನಡ ಶಾಲೆ ಮುಚ್ಚುವ ಹಾಗೂ ಆಂಗ್ಲ ಶಾಲೆ ಆರಂಭಿಸುವ ಸರಕಾರದ ನಡೆಯು ಕುವೆಂಪು ಹಾಗೂ ಬೇಂದ್ರೆ ಅವರ ಆಶಯಕ್ಕೆ ವಿರುದ್ಧವಾದುದಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪತ್ರಕರ್ತ ರಘುನಾಥ ಚ.ಹ. ಅವರಿಗೆ ಕುವೆಂಪು ಚಿರಂತನ, ಹಿರಿಯ ಪತ್ರಕರ್ತ ಇಂದೂಧರ ಹೊನ್ನಾಪುರ ಅವರಿಗೆ ಕುವೆಂಪು ಅನಿಕೇತನ ಹಾಗೂ ಲೇಖಕಿ ಸಂಘಮಿತ್ರೆ ಅವರಿಗೆ ಕುವೆಂಪು ಯುವಕವಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಚಿಂತಕ ರಾಮಣ್ಣ ಎಚ್. ಕೋಡಿಹೊಸಹಳ್ಳಿ, ಸಮಿತಿಯ ಅಧ್ಯಕ್ಷ ಎ.ಎಸ್.ನಾಗರಾಜಸ್ವಾಮಿ, ಪ್ರಧಾನ ಕಾರ್ಯದರ್ಶಿ ತಾ.ಸಿ.ತಿಮ್ಮಯ್ಯ, ಜಂಟಿ ಕಾರ್ಯದರ್ಶಿ ಇಂದಿರಾ ಶರಣ್ ಜಮ್ಮಲದಿನ್ನಿ ಸೇರಿದಂತೆ ಮತ್ತಿತರರು ಇದ್ದರು.







