ಕೇಂದ್ರ ಸರಕಾರದಿಂದ ಜನಭಾಷೆಗಳ ಹತ್ತಿಕ್ಕಿ ಸಂಸ್ಕೃತ ಅರಳಿಸುವ ಯತ್ನ : ಪ್ರೊ.ಹಂಪನಾ ಅಸಮಾಧಾನ

ಬೆಂಗಳೂರು : ಕೇಂದ್ರ ಸರಕಾರ ಜನಾಭಾಷೆಗಳನ್ನು ಹತ್ತಿಕ್ಕಿ ಸಂಸ್ಕೃತವನ್ನು ಅರಳಿಸುವ ಯತ್ನವನ್ನು ನಡೆಸುತ್ತಿದೆ ಎಂದು ಹಿರಿಯ ಸಾಹಿತಿ ಪ್ರೊ.ಹಂ.ಪ.ನಾಗರಾಜಯ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶನಿವಾರ ನಗರದ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಎರಡು ದಿನಗಳ ‘ಸಮಾಜಮುಖಿ ಸಾಹಿತ್ಯ ಸಮ್ಮೇಳನ’ಕ್ಕೆ ವಿದ್ಯುಕ್ತ ಚಾಲನೆ ನೀಡಿ ಮಾತನಾಡಿದ ಅವರು, ಕೇಂದ್ರ ಸರಕಾರ ಒಂದು ಭಾಷೆ, ಒಂದು ದೇಶ, ಒಂದು ಚುನಾವಣೆ ಹೆಸರಿನಲ್ಲಿ ಜನಭಾಷೆಗಳನ್ನು ಹತ್ತಿಕ್ಕುತ್ತಿದೆ. ಬೊಕ್ಕಸದ ಒಂದು ಭಾಗವನ್ನು ಸಂಸ್ಕೃತದ ಬೆಳವಣಿಗೆಗೆ ಬಳಸುತ್ತಿದೆ. ಹಿಂದಿನ ಹನ್ನೊಂದು ವರ್ಷಗಳಲ್ಲಿ ಸಂಸ್ಕೃತದ ಪ್ರಗತಿಗೆ 2,532 ಕೋಟಿ ರೂಪಾಯಿ ಖರ್ಚು ಮಾಡಿದೆ.
ಆದರೆ, ದ್ರಾವಿಡ ಭಾಷೆಗಳಾದ ತಮಿಳಿಗೆ 113 ಕೋಟಿ ರೂ., ತೆಲುಗು ಭಾಷೆಗೆ 12.65 ಕೋಟಿ ರೂ., ಕನ್ನಡಕ್ಕೆ 12.28 ಕೋಟಿ ರೂ., ಮಲಯಾಳಂ ಭಾಷೆಗೆ 4.52 ಕೋಟಿ ರೂಪಾಯಿ ಮಾತ್ರ ನೆರವು ನೀಡಿದೆ. 29 ಕೋಟಿ ಜನರು ಮಾತಾಡುವ ಭಾಷೆಗೆ ಅತ್ಯಲ್ಪ ಹಣ ನೀಡಿ ಕೆಲವೇ ಸಾವಿರ ಜನರು ಮಾತನಾಡುವ ಸಂಸ್ಕೃತ ಭಾಷೆಗೆ ಹೆಚ್ಚು ನೆರವು ನೀಡುತ್ತಿರುವುದು ಯಾವ ನ್ಯಾಯ ಎಂದು ಹಂ.ಪ.ನಾಗರಾಜಯ್ಯ ಅಂಕಿ ಅಂಶಗಳ ಸಮೇತ ವಿವರಿಸಿದರು.
ಸಂಸ್ಕೃತ, ಹಿಂದಿ ನಮ್ಮ ಶತ್ರುಗಳಲ್ಲ. ಎರಡು ಶ್ರೀಮಂತ ಪ್ರಾಕೃತ ಭಾಷೆಗಳೇ. ಆದರೆ, ಅವುಗಳನ್ನು ನಮ್ಮ ಮೇಲೇ ಬಲವಂತವಾಗಿ ಹೇರುವ ಅಗತ್ಯವಿಲ್ಲ. ಇದೊಂದು ಬಗೆಯ ದ್ರಾವಿಡ ಭಾಷೆಗಳ ಮೇಲೆ ಸೇಡು ತೀರಿಸಿಕೊಳ್ಳುವ ಯತ್ನ. ಕೇಂದ್ರದ ಈ ಪಕ್ಷಪಾತ ಧೋರಣೆಯನ್ನು ನಾವೆಲ್ಲರೂ ಪ್ರಬಲವಾಗಿ ವಿರೋಧಿಸಬೇಕಿದೆ ಎಂದು ಹಂ.ಪ.ನಾಗರಾಜಯ್ಯ ಕರೆ ನೀಡಿದರು.
ದೇಶದಲ್ಲಿ ಹದಿನಾಲ್ಕು ಸಂಸ್ಕೃತ ವಿಶ್ವ ವಿದ್ಯಾನಿಲಯಗಳಿವೆ. ಅದೇ ವೇಳೆಗೆ ಸಂಸ್ಕೃತದಷ್ಟೇ ಹಳೆಯದಾದ ಪ್ರಾಕೃತ ಹಾಗೂ ಇತರೆ ಭಾಷೆಗಳಿಗೆ ಒಂದೂ ವಿಶ್ವವಿದ್ಯಾಲಯಗಳು ಇಲ್ಲ ಎಂದ ಹಂಪನಾ, ದಕ್ಷಿಣದ ಭಾಷೆಗಳ ಒಗ್ಗಟ್ಟನ್ನು, ದೃಢತೆಯನ್ನು ಹಿಂಬಾಗಿಲಿನಿಂದ ಮುರಿಯುವ ಯತ್ನವನ್ನು ಕೇಂದ್ರ ಸರಕಾರ ಮಾಡುತ್ತಿದೆ ಎಂದು ಕಿಡಿಕಾರಿದರು.
‘ಒಂದು ಭಾಷೆ, ಒಂದು ದೇಶ, ಒಂದು ಚುನಾವಣೆ ಘೋಷಣೆ ಭಯಂಕರ ಭಸ್ಮಾಸುರ’: ನೆರೆಯ ಬಾಂಗ್ಲಾದೇಶ, ನೇಪಾಳದಲ್ಲಿನ ಜನಕ್ರಾಂತಿಯ ಸಿಟ್ಟು, ಹೋರಾಟದ ಘಾಟು ಮೂಗಿಗೆ ಬಡಿಯುತ್ತಿದೆ. ಒಂದು ಭಾಷೆ, ಒಂದು ದೇಶ, ಒಂದು ಚುನಾವಣೆಯ ಘೋಷಣೆ ಮೇಲ್ನೋಟಕ್ಕೆ ಆಕರ್ಷಕ ಎನಿಸಿದರೂ ಅದು ಭಯಂಕರ ಭಸ್ಮಾಸುರ ಆಗಿದ್ದು ಈ ಘೋಷಣೆ ತಂದೊಡ್ಡಬಹುದಾದ ಅಪಾಯವನ್ನು ಅರಿತು ಪ್ರಶ್ನಿಸುವ ಕಾಲ ಬಂದಿದೆ. ಈಗಲೂ ತಡಮಾಡಿದರೆ ಪ್ರಜಾಪ್ರಭುತ್ವ ಎಂಬುದು ಗತ ಇತಿಹಾಸವಾಗಲಿದೆ ಎಂದು ಹಂಪನಾ ಆತಂಕ ವ್ಯಕ್ತಪಡಿಸಿದರು.







