‘ಶಿಕ್ಷಣ ಹಕ್ಕು ಕಾಯ್ದೆ’ ಪರಿಣಾಮಕಾರಿಯಾಗಿ ಜಾರಿಯಾಗಲಿ : ಪ್ರೊ.ನಿರಂಜನಾರಾಧ್ಯ
ರಾಜ್ಯ ಶಿಕ್ಷಣ ನೀತಿ ಕುರಿತು ರಾಜ್ಯಮಟ್ಟದ ಸಮಾವೇಶ

ಬೆಂಗಳೂರು : ಹತ್ತು ವರ್ಷಗಳಲ್ಲಿ 2ಸಾವಿರಕ್ಕೂ ಅಧಿಕ ಸರಕಾರಿ ಶಾಲೆಗಳನ್ನು ಮುಚ್ಚಲಾಗಿದೆ. ಇದರಿಂದ ಖಾಸಗಿಕರಣ ಹೆಚ್ಚುತ್ತಿದೆ. ಸರಕಾರಿ ಶಾಲೆಗಳು ಉಳಿಯ ಬೇಕಾದರೆ ‘ಶಿಕ್ಷಣ ಹಕ್ಕು ಕಾಯ್ದೆ’ ಪರಿಣಾಮಕಾರಿ ಜಾರಿಯಾಗಬೇಕು ಎಂದು ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ ವಿ.ಪಿ. ಆಗ್ರಹಿಸಿದ್ದಾರೆ.
ರವಿವಾರ ನಗರದ ಸಚಿವಾಲಯ ಕ್ಲಬ್‍ನಲ್ಲಿ ‘ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್’ ಆಯೋಜಿಸಿದ್ದ ‘ರಾಜ್ಯ ಶಿಕ್ಷಣ ನೀತಿ ಕುರಿತು ರಾಜ್ಯಮಟ್ಟದ ಸಮಾವೇಶ’ದಲ್ಲಿ ಮಾತನಾಡಿದ ಅವರು, ನಗರ ಪ್ರದೇಶದಲ್ಲಿ ಸರಕಾರಿ ಶಾಲೆಗಳು ಗಣನೀಯವಾಗಿ ಮುಚ್ಚುತ್ತಿವೆ. ನಗರ ಪ್ರದೇಶದಲ್ಲಿರುವ ಬಡವರು ಶಿಕ್ಷಣ ವ್ಯವಸ್ಥೆಯಿಂದ ಹೊರಗುಳಿಯುತ್ತಿದ್ದಾರೆ. ಇಲ್ಲವಾದರೆ ದುಡಿಯುವ ಅರ್ಧದಷ್ಟು ಪಾಲನ್ನು ಮಕ್ಕಳ ಶಿಕ್ಷಣಕ್ಕೆ ಖರ್ಚು ಮಾಡಿ ಖಾಸಗಿ ಶಾಲೆಗಳಿಗೆ ಸೇರಿಸುತ್ತಾರೆ ಎಂದು ಹೇಳಿದರು.
ಯಾವುದೇ ಶಿಕ್ಷಣ ನೀತಿ ರೂಪಿಸುವಾಗ ಅದರ ಮೂಲ ಉದ್ದೇಶ, ವ್ಯಕ್ತಿಯ ವೈಯಕ್ತಿಕ ಬದುಕನ್ನು ಸಬಲೀಕರಣ ಮಾಡುವ ಜತೆಗೆ ಸಾಮಾಜದಲ್ಲಿ ಘನತೆಯಿಂದ ಬದುಕುವುದನ್ನು ಕಲಿಸುವ ನಿಟ್ಟಿನಲ್ಲಿ ಜಾರಿಯಾಗಬೇಕು. ಸಮಾಜದ ಇತರೆ ಜನರೊಂದಿಗೆ ಬ್ರಾತೃತ್ವ, ಸಹಬಾಳ್ವೆ, ಸಾಮರಸ್ಯದಿಂದ ಉತ್ತಮವಾದ ಸಮಾಜ ಕಟ್ಟಿಕೊಳ್ಳುವುದು ಶಿಕ್ಷಣ ನೀತಿ ತಿಳಿಸಬೇಕು. ಭಾರತದ ಸಂವಿಧಾನದ ಆಶಯಗಳನ್ನು ಈಡೇರಿಸಲು ಶಿಕ್ಷಣ ವ್ಯವಸ್ಥೆ ಒಂದು ಪ್ರಮುಖ ಸಾಧನವಾಗಿದೆ. ಆದ್ದರಿಂದ ಭಾರತದ ಎಲ್ಲ ಪ್ರಜೆಗಳು ಜಾತ್ಯಾತೀತ ಮೌಲ್ಯವನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಶಿಕ್ಷಣ ತಜ್ಞ ಎಲ್.ಜವಾಹರ್ ನೇಸನ್ ಮಾತನಾಡಿ, ಭಾರತ ಕೇಂದ್ರಿತ ಶಿಕ್ಷಣವನ್ನು ಜಾರಿಗೆ ತರಲು ಹೊರಟಿದ್ದಾರೆ. ಆದರೆ ಇವರ ಭಾರತ ಎಲ್ಲರನ್ನೂ ಒಳಗೊಂಡ ಭಾರತವಲ್ಲ, ಜಾತಿ-ಧರ್ಮದ ಹೆಸರಿನಲ್ಲಿ ವಿಭಜಿಸುವ ಭಾರತವಾಗಿದೆ. ನಾವು ವೈಜ್ಞಾನಿಕ ಚಿಂತನೆ, ವಿವೇಚನೆಯುಕ್ತ ಶಿಕ್ಷಣವನ್ನು ಅಳವಡಿಸಬೇಕು ಎಂದು ಹೇಳಿದರು.
ಇದೇ ವೇಳೆ ಪ್ರೊ.ವಿ.ಪಿ.ನಿರಂಜನಾರಾಧ್ಯ ಅವರು ಬರೆದಿರುವ ‘ಶಿಕ್ಷಣ ನೀತಿ ನಿರೂಪಣೆಗೊಂದು ತಾತ್ವಿಕ ಹಾಗೂ ಪ್ರಮಾಣೀಕೃತ ಚೌಕಟ್ಟು: ವಿಸ್ತೃತ ಸಾರ್ವಜನಿಕ ಚರ್ಚೆಗಾಗಿ ಒಂದು ಟಿಪ್ಪಣಿ’ ಎಂಬ ಕಿರುಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸಮಾವೇಶದಲ್ಲಿ ಎಐಎಸ್‍ಎ ರಾಜ್ಯ ಸಂಚಾಲಕಿ ಲೇಖಾ ಅಡವಿ ಸೇರಿದಂತೆ ಕೊಪ್ಪಳ, ರಾಯಚೂರು, ವಿಜಯನಗರ, ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಕೊಡಗು, ಮತ್ತು ಬೆಂಗಳೂರು ಜಿಲ್ಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
‘ಎನ್‍ಸಿಇಆರ್‍ಟಿ ಪಠ್ಯಕ್ರಮದಿಂದ ಲಿಂಗತ್ವ ಅಲ್ಪಸಂಖ್ಯಾತರ ಹಕ್ಕುಗಳ ಕುರಿತು ಇದ್ದ ಉಲ್ಲೇಖವನ್ನು ಅಳಿಸಿರುವುದು ಪಾಶ್ಚ್ಯಾತ್ಯ ಪರಿಕಲ್ಪನೆಯಾಗುತ್ತದೆ. ಇಂತಹ ಮನೋಭಾವ ಉಳ್ಳವರು ಎಂತಹ ಶಿಕ್ಷಣ ನೀತಿಯನ್ನು ತಯಾರಿಸಬಲ್ಲರು? ಜಾತಿ, ಧರ್ಮ, ಲಿಂಗ ಎಂದು ಭೇದಭಾವ ಮಾಡದೇ, ಸಮಾನ ಶಿಕ್ಷಣ ನೀಡುತ್ತಾ ಸಾಂವಿಧಾನಿಕ ಮೌಲ್ಯಗಳನ್ನು ಅಳವಡಿಸುವಂತಹ ಶಿಕ್ಷಣ ನೀತಿ ರೂಪಿಸುವುದು ಅಗತ್ಯ’
-ಅಕ್ಕೈ ಪದ್ಮಶಾಲಿ, ಹೋರಾಟಗಾರ್ತಿ
‘ಸಂವಿಧಾನದ ಪ್ರಕಾರ ಎಲ್ಲರಿಗೂ ಸಾಮಾಜಿಕ, ರಾಜಕೀಯ ನ್ಯಾಯ ಸಿಗಬೇಕು. ಆದರೆ ಇಂದು ಜಾತಿ ತಾರತಮ್ಯ ಹಾಗೆಯೇ ಇದೆ. ರಾಜಕಾರಣಿಗಳು ಪರಸ್ಪರ ಕಿತ್ತಾಡುವಲ್ಲಿ ನಿರತರಾಗಿದ್ದಾರೆ. ಶಿಕ್ಷಣ, ಆರೋಗ್ಯ, ಉದ್ಯೋಗದ ಬಗ್ಗೆ ಚರ್ಚೆಯಾಗುತ್ತಿಲ್ಲ. ದೇಶದ ಸಂಪತ್ತು ಸಮಾನವಾಗಿ ಸಿಗಬೇಕು ಎಂಬುದೇ ಸಮಾಜವಾದ. ಆದರೆ ಶೇ.45ರಷ್ಟು ಸಂಪತ್ತು ಕೆಲವೇ ಜನರ ಹತ್ತಿರ ಇದೆ. ಸಂಪತ್ತಿನ ಹಂಚಿಕೆ ಅಸಮಾನತೆಯಿಂದ ಕೂಡಿವೆ. ಆದ್ದರಿಂದ ಸಂವಿಧಾನದ ಮೌಲ್ಯಗಳು ಶಿಕ್ಷಣ ನೀತಿಗೆ ಬುನಾದಿಯಾಗಬೇಕು. ಶಿಕ್ಷಣ ನೀತಿ ರೂಪಿಸುವಾಗ ಸಂವಿಧಾನವನ್ನು ಚೌಕಟ್ಟನ್ನಾಗಿ ಮಾಡಿಕೊಂಡರೆ ಸಮಾನತೆ, ಸಾಮಾಜಿಕ ನ್ಯಾಯವನ್ನು ಜಾರಿಗೆ ತರಬಹುದು’
-ಪ್ರೊ.ವಿ.ಪಿ.ನಿರಂಜನಾರಾಧ್ಯ, ಶಿಕ್ಷಣ ತಜ್ಞ







