ಕನ್ನಡ ಶಾಲೆ ಮುಚ್ಚುವುದೆಂದರೆ ಕನ್ನಡಿಗರನ್ನು ಕೊಲ್ಲುವುದು: ಪ್ರೊ.ನಿರಂಜನಾರಾಧ್ಯ

ಬೆಂಗಳೂರು : ಕನ್ನಡ ಶಾಲೆ ಮುಚ್ಚುವುದು, ಕನ್ನಡಿಗರನ್ನು ಕೊಲ್ಲುವುದು ಒಂದೇ. ಕನ್ನಡ ಶಾಲೆ ಮುಚ್ಚಲು ಕಾರಣ ಏನು? ಎಂದರೆ ಅಲ್ಲಿ ಬೇಕಾಗಿದ್ದ ಕನಿಷ್ಠ ಸೌಲಭ್ಯ ಕೊಡದೇ ಇರುವುದು, ಕನಿಷ್ಠ ಸೌಲಭ್ಯ ಇಲ್ಲದ ಶಾಲೆಗೆ ಯಾವ ತಂದೆ-ತಾಯಿ ತಮ್ಮ ಮಕ್ಕಳನ್ನು ಕಳುಹಿಸುತ್ತಾರೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ಪ್ರೊ.ನಿರಂಜನಾರಾಧ್ಯ ವಿ.ಪಿ ಪ್ರಶ್ನಿಸಿದ್ದಾರೆ.
ಗುರುವಾರ ನಗರದ ಕಸಾಪ ಆವರಣದಲ್ಲಿರುವ ಅಕ್ಕ ಮಹಾದೇವಿ ಸಭಾಂಗಣದಲ್ಲಿ ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ವತಿಯಿಂದ ಆಯೋಜಿಸಿದ್ದ ‘ದಿನದಿಂದ ದಿನಕ್ಕೆ ದುರ್ಬಲವಾಗುತ್ತಿರುವ ಕನ್ನಡ ಶಾಲೆಗಳು: ಮುಂದೇನು?’ ವಿಷಯದ ಕುರಿತ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
2010-11ರಲ್ಲಿ 10,252 ಇದ್ದ ಖಾಸಗಿ ಅನುದಾನ ರಹಿತ ಶಾಲೆಗಳ ಸಂಖ್ಯೆ, 2025-26ರಲ್ಲಿ 16,704 ಆಗಿದೆ. ಅಂದರೆ 6,452 ಹೊಸ ಶಾಲೆಗಳನ್ನು ಖಾಸಗಿ ವಲಯದಲ್ಲಿ ತರಲಾಗಿದೆ. ಒಂದು ಕಡೆ ಸರಕಾರಿ ಶಾಲೆಗಳನ್ನು ಮೂಲಭೂತ ಹಕ್ಕಿನ ಭಾಗವಾಗಿ ಮುಚ್ಚಲಾಗುತ್ತಿದೆ. ಇನ್ನೊಂದು ಕಡೆ ಖಾಸಗಿ ಶಾಲೆಗಳಿಗೆ ರಾಜಾರೋಷವಾಗಿ ಅನುಮತಿಯನ್ನು ಕೊಡಲಾಗುತ್ತಿದೆ ಎಂದು ತಿಳಿಸಿದರು.
ನಿಜವಾಗಲೂ ಕನ್ನಡ ಶಾಲೆಗಳನ್ನು ಕಟ್ಟಿ, ಉಳಿಸಿ, ಬೆಳೆಸುವ ಒಂದು ರಾಜಕೀಯ ಇಚ್ಛಾಶಕ್ತಿ ಇದೆಯಾ? ಅಥವಾ ಖಾಸಗೀಕರಣದ ಮೂಲಕ ಇಡೀ ಕನ್ನಡ ಶಾಲೆಗಳನ್ನು ಸಂಪೂರ್ಣವಾಗಿ ನಾಶ ಮಾಡಲಿಕ್ಕೆ ನೀವೇನಾದರೂ ಯೋಜನೆಯನ್ನು ರೂಪಿಸಿದ್ದೀರಾ ಎಂದು ಸರಕಾರಕ್ಕೆ ನೇರವಾಗಿ ಪ್ರಶ್ನಿಸಬೇಕಿದೆ ಎಂದು ಹೇಳಿದರು.
ಕರ್ನಾಟಕದ ಬಹುತೇಕ ರಾಜಕಾರಣಿಗಳು ತಮ್ಮ ತಮ್ಮ ಖಾಸಗಿ ಶಾಲೆಗಳನ್ನು ನಡೆಸುತ್ತಿದ್ದಾರೆ. ಅವುಗಳಿಂದ ಕೋಟ್ಯಾಂತರ ರೂ. ಗಳಿಸುತ್ತಿದ್ದಾರೆ. ಅವರ ಹತ್ತಿರ ಹೋಗಿ ನಾವು ಕನ್ನಡ ಶಾಲೆ ಉಳಿಸಿ ಎಂದರೆ ಹೇಗೆ? ಯಾರು ವಿಧಾನಸಭೆಯಲ್ಲಿ, ವಿಧಾನ ಪರಿಷತ್‍ನಲ್ಲಿ ಕನ್ನಡ ಶಾಲೆಗಳನ್ನು ಉಳಿಸಲು ಕೆಲಸ ಮಾಡಬೇಕಾಗಿತ್ತೋ, ಅವರದೇ ಶಾಲೆಗಳು ಇರುವಾಗ ಅವರು ಕನ್ನಡ ಶಾಲೆಗಳ ಬಗ್ಗೆ ಯಾಕೆ ಯೋಚನೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಗಾಂಧಿ ನಗರದ ವಿಧಾನಸಭಾ ಕ್ಷೇತ್ರದ ಶರಣಸಾಹಿತ್ಯ ಪರಿಷತ್ ಅಧ್ಯಕ್ಷೆ ಮಂಜುಳಾ ಶಿವಾನಂದ, ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎಲ್.ತಿಮ್ಮಯ್ಯ, ಕೇಂದ್ರೀಯ ಸದನ ಕನ್ನಡ ಸಂಘದ ಅಧ್ಯಕ್ಷ ಚಂದ್ರಶೇಖರ್, ಸಾಹಿತಿ ಲೋಕೇಶ್ ಮತ್ತಿತರರು ಹಾಜರಿದ್ದರು.






