ದೇಶ ಸಾಂಸ್ಕೃತಿಕ ಗುಲಾಮಗಿರಿಯಿಂದ ಹೊರಬಂದಿಲ್ಲ: ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಬೆಂಗಳೂರು: ಚರಿತ್ರೆಯನ್ನು ಸೂಕ್ಷ್ಮವಾದ ನೆಲೆಯೊಳಗೆ ಅರ್ಥ ಮಾಡಿಕೊಳ್ಳುವುದಕ್ಕೆ ತೊಡಗಿದರೆ, ನಮ್ಮ ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ ಆದರೆ ಇನ್ನೂ ಸಾಂಸ್ಕೃತಿಕ ಗುಲಾಮಗಿರಿಯಿಂದ ಹೊರಬಂದಿಲ್ಲ ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ರವಿವಾರ ನಗರದ ನಯನ ಸಭಾಂಗಣದಲ್ಲಿ ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ‘ಜೀವನ್ಮುಖಿ’ ಪತ್ರಿಕೆಯ ವಾರ್ಷಿಕೋತ್ಸವ ಮತ್ತು ಜೀವನ್ಮುಖಿ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಶತಮಾನಗಳಿಂದ ಸಮಾಜವನ್ನು ಆಳಿಕೊಂಡು ಬಂದ ವೈದಿಕಶಾಹಿಯ ಸಾಂಸ್ಕೃತಿಕ ಚಿಂತನೆಯಿಂದ ಹೊರಬರುವುದಕ್ಕೆ ಸಾಧ್ಯವಾಗಿಲ್ಲ. ಕುವೆಂಪು ತಮ್ಮ ಸಾಹಿತ್ಯದ ಮೂಲಕ ಅಂತಹ ಸಾಂಸ್ಕೃತಿಕ ಗುಲಾಮಗಿರಿಯಿಂದ ಹೊರಬರುವುದಕ್ಕಾಗಿ ಹೋರಾಡಿದವರು ಎಂದು ಹೇಳಿದರು.
ಒಬ್ಬ ಲೇಖಕನಿಗೆ ಇರಬೇಕಾದಂತಹ ಸ್ವ-ವಿಮರ್ಶೆ ಸ್ವ-ಜಾತಿ, ಸ್ವ-ಸಂಸ್ಕೃತಿ, ಸ್ವ-ಧರ್ಮ ವಿಮರ್ಶೆ ಇವೆಲ್ಲವುಗಳನ್ನು ಒಳಗೊಳ್ಳುವ ರೀತಿಯಲ್ಲಿನ ಯುಗ ಪ್ರಜ್ಞೆ 20ನೇ ಶತಮಾನದಲ್ಲಿ ಕಾಣಿಸುವಂತದ್ದು ಕುವೆಂಪು ಅವರಿಲ್ಲಿಯೇ ಹೊರೆತು ಬೇರೆ ಯಾರಲ್ಲಿಯೂ ಅಲ್ಲ. ಕುವೆಂಪು ಅವರ ಮನಸ್ಸು ಅಕ್ಷರ ವಂಚಿತ ಸಮುದಾಯಗಳು, ಆರ್ಥಿಕತೆಯಿಂದ ವಂಚನೆಗೊಳಗದ ಸಮುದಾಯಗಳ ಅವರ ಪರವಾಗಿ ನಿಂತು ಎತ್ತಿದ ಧ್ವನಿಯಾಗಿತ್ತು ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.
ಯಾವುದೆ ಒಂದು ವ್ಯಕ್ತಿಗೆ ಅಥವಾ ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ಸಿಕ್ಕ ಕೂಡಲೆ ಅದು ನಿಜವಾದ ಸ್ವಾತಂತ್ರ್ಯ ಅಲ್ಲ. ಸಾಂಸ್ಕೃತಿಕ ಗುಲಾಮಗಿರಿ ಹೋದಾಗ ಮಾತ್ರ ನಿಜವಾದ ಸ್ವಾತಂತ್ರ್ಯ ಪಡೆದುಕೊಳ್ಳಲು ಸಾಧ್ಯ. ಈ ದೇಶದಲ್ಲಿ ಭಂಗೀ ಕಾಯಕ ಮಾಡುವಂತವರು, ಪೌರೋಹಿತ್ಯ ಮಾಡುವಂತವರು ಬದಲಾದಾಗ ಮಾತ್ರ ಚಾತುರ್ವರ್ಣ ವ್ಯವಸ್ಥೆ ದೇಶದಿಂದ ಹೊರಹೋಗಿದೆ ಎಂದು ಹೇಳವುದಕ್ಕೆ ಸಾಧ್ಯ ಎಂದು ಅವರು ತಿಳಿಸಿದರು.
ವರ್ಣ ವ್ಯವಸ್ಥೆಯೊಳಗೆ ಜಾತಿ ಕೇಂದ್ರಿತ ನೀತಿಯೊಳಗೆ ಎಲ್ಲ ಸಂಘಟನೆಗಳು ಹದಗೆಟ್ಟುಹೋಗಿದೆ. ಅಂತಹದೊರಳಗೆ ಕುವೆಂಪು ಹೆಸರಿನಲ್ಲಿ ಸ್ಥಾಪಿಸಿದ ಈ ಅಖಿಲ ಕರ್ನಾಟಕ ಕುವೆಂಪು ಸಾಂಸ್ಕೃತಿಕ ವೇದಿಕೆ ನಿಜವಾದ ಕುವೆಂಪು ಆಶಯಗಳನ್ನು ಈಡೇರಿಸಿಕೊಂಡು ಹೋಗುವುದರೊಳಗೆ ನಿರಂತರವಾಗಿ ನಡೆಸಿಕೊಂಡು ಬರುತ್ತಿದ್ದಾರೆ ಎಂದು ಸಿದ್ದರಾಮಯ್ಯ ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ, ಹಿರಿಯ ಪೊಲೀಸ್ ಅಧಿಕಾರಿ ಡಾ.ಎಸ್.ಡಿ.ಶರಣಪ್ಪ, ಸರಕಾರಿ ನೌಕರರ ಸಂಘ ಮಾಜಿ ಅಧ್ಯಕ್ಷ ಎಚ್.ಕೆ.ರಾಮು, ನಿವೃತ್ತ ಪ್ರಾಧ್ಯಾಪಕ ಡಾ.ಅರವಿಂದ ಮಾಲಗತ್ತಿ, ಸಾಹಿತ್ಯ ಪರಿಷತ್ ಮಾಜಿ ಕೋಶಾಧ್ಯಕ್ಷ ಪಿ.ಮಲ್ಲಿಕಾರ್ಜುನಪ್ಪ, ಗುಪ್ತಚರ ನಿರ್ದೇಶನಾಲಯ ಉಪಆಯುಕ್ತ ಬಿ.ರತನ್, ಪತ್ರಕರ್ತ ಟಿ.ಸುರೇಶ್ ಹಾಗೂ ಜೆ.ಸುರೇಂದ್ರ ನಾಯ್ಡು ಭಾಗವಹಿಸಿದ್ದರು.
‘ಕನ್ನಡ ಸಾಹಿತ್ಯದಲ್ಲಿ ಕನ್ನಡ ಭಾಷೆಯ ಮೇಲೆ ಹೆಚ್ಚು ಬರೆದವರು ಕುವೆಂಪು. ಸರಕಾರಿ ಶಾಲೆಗಳನ್ನು ಮುಚ್ಚುತ್ತಿದ್ದಾರೆ. ಕನ್ನಡ ಯಾರಿಗೆ ಬೇಕು ಎಂದು ಕೇಳಿದಾಗ ಆತಂಕವಾಗತ್ತದೆ. ಅಧಿಕಾರಿಗಳಿಗೆ ಕನ್ನಡ ಮಾತನಾಡುವುದಕ್ಕೆ ಕಷ್ಟವಾಗುತ್ತಿದೆ. ಕುವೆಂಪು ಹೇಳಿದ ತ್ರಿಭಾಷಾ ಸೂತ್ರ ಸ್ವೀಕರಿಸದೆ ಹೋದರೆ, ಕನ್ನಡ ಭಾಷೆ ಉಳಿಯುವುದಿಲ್ಲ. ಭಾರತಕ್ಕೆ ಅಗತ್ಯವಾಗಿರುವ ರಾಷ್ಟ್ರದ ಭಾಷಾ ನೀತಿಯನ್ನು ರೂಪಿಸದೆ ಇದ್ದರೆ ಜೀವಂತವಾಗಿರುವ 19,569 ಮಾತೃಭಾಷೆಗಳು ನಶಿಸಿಹೋಗುತ್ತವೆ. ರಾಜ್ಯದಲ್ಲಿ ಕನ್ನಡ ಭಾಷೆ ಉಳಿದಿದೆ ಎಂದರೆ ಪತ್ರಿಕೆಗಳಿಂದ. ವಿದ್ಯುನ್ಮಾನ ಮಾಧ್ಯಮಗಳು ಕನ್ನಡ ಭಾಷೆಗೆ ವಿಶೇಷ ಕೊಡುಗೆ ಕೊಡುತ್ತಿಲ್ಲ’
-ಪ್ರೊ.ಪುರುಷೋತ್ತಮ್ ಬಿಳಿಮಲೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ







