ಜನಾಂಗಗಳ ನಡುವೆ ದ್ವೇಷ ಬಿತ್ತಲಾಗುತ್ತಿದೆ : ಪ್ರೊ.ಎಸ್.ಜಿ.ಸಿದ್ದರಾಮಯ್ಯ

ಬೆಂಗಳೂರು : ‘ದೇಶ, ಜನಾಂಗಗಳ ನಡುವೆ ದ್ವೇಷ ಬಿತ್ತುವ ಕೆಲಸ ನಡೆಯುತ್ತಿದೆ. ಇದರಿಂದ, ವಿಶ್ವವ್ಯಾಪಿಯಾಗಿ ನಡೆಯುತ್ತಿರುವ ಹಿಂಸೆ, ಕ್ರೌರ್ಯ, ರಕ್ತಪಾತ ತಡೆಯಲು ಸಾಂಸ್ಕೃತಿಕ ಮನಸ್ಸುಗಳು ಎಚ್ಚೆತ್ತುಕೊಳ್ಳಬೇಕು. ಸಾಂಸ್ಕೃತಿಕ ಮೌಲ್ಯ ಮಾತ್ರ ಜಗತ್ತನ್ನು ಬೆಸೆಯಲು ಸಾಧ್ಯ’ ಎಂದು ಹಿರಿಯ ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ತಿಳಿಸಿದ್ದಾರೆ.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ವತಿಯಿಂದ ನಗರದ ಮಲ್ಲತ್ತಹಳ್ಳಿಯ ಕಲಾಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ‘2025ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಹಾಗೂ 2024ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಜಗತ್ತಿನ ಅತ್ಯಂತ ಧುರಿತ ಕಾಲಘಟ್ಟದಲ್ಲಿ ನಾವು ಜೀವಿಸುತ್ತಿದ್ದು, ಹಿಂದೆಂದೂ ಕಾಣದಂತಹ ವಿಷಮ ವಾತಾವರಣ ಜಗತ್ತನ್ನು ತುಂಬಿಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಣ್ಣ ಮನಸ್ಸಿನ, ದುಷ್ಟ ಬುದ್ಧಿಯ ಹಾಗೂ ದೂರ್ತ ನಡೆಯ ರಾಜಕಾರಣಿಗಳು ಜಗತ್ತಿನ ಎಲ್ಲ ದೇಶಗಳಲ್ಲಿಯೂ ತುಂಬಿಕೊಂಡಿದ್ದಾರೆ. ಲಕ್ಷಾಂತರ ಕೋಟಿ ಹಣವನ್ನು ಲೂಟಿ ಮಾಡಿಕೊಂಡು ಹೋಗಿರುವವರ ಕುರಿತು ಜನಸಾಮಾನ್ಯರಿಗೆ ಚಿಂತೆಯಿಲ್ಲ. ಆದರೆ, ಒಂದು ಹೊತ್ತಿನ ತುತ್ತಿಗೂ ಕಷ್ಟಪಡುತ್ತಿರುವ ಜನರಿಗೆ ಅನ್ನ ಹಾಕಿದರೆ ಇಡೀ ದೇಶವೇ ದಿವಾಳಿಯಾಯಿತು ಎಂದು ಬೊಬ್ಬೆ ಹಾಕುತ್ತಾರೆ. ಇಂತಹ ಸಂದರ್ಭದಲ್ಲಿ 12ನೇ ಶತಮಾನದ ಚಳವಳಿ ಹೆಚ್ಚು ಕಾಡಿಸುತ್ತದೆ ಎಂದು ಹೇಳಿದರು.
ಬಸವಣ್ಣ ಅವರು ಎಂದಿಗೂ ದಾಸೋಹವನ್ನು ‘ಬಿಟ್ಟಿ ಕೂಳು’ ಎನ್ನಲಿಲ್ಲ. ಅದು ದುಡಿಯುವವನಿಗೆ ಶಕ್ತಿ ಒದಗಿಸುವ ವಿತರಣಾ ತತ್ವ. ಇಂತಹ 12ನೇ ಶತಮಾನದ ಕಾರ್ಮಿಕ ಚಳವಳಿಯ ಮರುಸೃಷ್ಟಿಯ ತುರ್ತು ಇದೆ. ಎಂದು ತಿಳಿಸಿದರು.
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಚನ್ನಪ್ಪ ಕಟ್ಟಿ ಮಾತನಾಡಿ, ‘ಏಕ ಸಂಸ್ಕೃತಿಯ ಆರಾಧಕರಲ್ಲದ ನಮಗೆ ಸಾಂಸ್ಕೃತಿಕ ಬಹುತ್ವ ಅತೀ ಮುಖ್ಯ. ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಅನುವಾದದ ಮೂಲಕ ಹೊಸ-ಹೊಸ ಸಾಹಿತ್ಯ ಪಂಥಗಳ ಪರಿಚಯ ಹಾಗೂ ಅದರಲ್ಲಿ ಒಳಗೊಳ್ಳುವ ನವ ನವೀನವಾದ ಸಿದ್ಧಾಂತಗಳು ಜನರಿಗೆ ತಲುಪಬೇಕು. ಈ ಮೂಲಕ ಒಂದು ಸಂಸ್ಕೃತಿ ಇನ್ನೊಂದು ಸಂಸ್ಕೃತಿಯನ್ನು ಪರಸ್ಪರ ಗೌರವಿಸಬೇಕು ಎಂಬ ಮೂಲ ಆಶಯದಿಂದ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.
ಗೌರವ ಪ್ರಶಸ್ತಿ ಪುರಸ್ಕೃತೆ ಡಾ.ಕೆ.ಆರ್.ಸಂಧ್ಯಾರೆಡ್ಡಿ ಮಾತನಾಡಿದರು.
ಜೆ.ವಿ.ಕಾರ್ಲೊ, ಡಾ.ಕೆ.ಆರ್.ಸಂಧ್ಯಾರೆಡ್ಡಿ, ಪ್ರೊ.ವನಮಾಲಾ ವಿಶ್ವನಾಥ, ಡಾ.ವಿಠಲರಾವ್ ಟಿ.ಗಾಯಕ್ವಾಡ್, ಡಾ.ಜೆ.ಪಿ.ದೊಡಮನಿ ಅವರಿಗೆ 2025ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಡಾ.ನಟರಾಜ್ ಹೊನ್ನವಳ್ಳಿ, ಡಾ. ಸದಾನಂದ ಆರ್., ಕಾರ್ತಿಕ್ ಆರ್., ಡಾ. ಮಲ್ಲೇಶಪ್ಪ ಸಿದ್ರಾಂಪೂರ, ಡಾ.ದೇವರಾಜ್ ಎನ್. ಅವರಿಗೆ 2024ನೇ ಸಾಲಿನ ಪುಸ್ತಕ ಬಹುಮಾನ ಪ್ರದಾನ ಮಾಡಲಾಯಿತು. ಈ ವೇಳೆ ಪ್ರಶಸ್ತಿ ಪುರಸ್ಕೃತರ ಪರಿಚಯ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು. ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ರಿಜಿಸ್ಟ್ರಾರ್ ದತ್ತಪ್ಪ ಸಾಗನೂರ ಮತ್ತಿತರರು ಉಪಸ್ಥಿತರಿದ್ದರು.







