ಚುನಾವಣೆಗೂ ಮುನ್ನ ಭರವಸೆಗಳು, ಅಧಿಕಾರಕ್ಕೆ ಬಂದ ಮೇಲೆ ನೆಪಗಳು : ಆರ್.ಅಶೋಕ್ ವ್ಯಂಗ್ಯ

ಆರ್.ಅಶೋಕ್
ಬೆಂಗಳೂರು : ‘ಕಳ್ಳನಿಗೊಂದು ಪಿಳ್ಳೆ ನೆಪ’ ಎಂಬಂತೆ ಗ್ಯಾರಂಟಿಗಳ ಹೆಸರಿನಲ್ಲಿ ರೈತರ ಸಾಲಮನ್ನಾ, ಸರಕಾರಿ ನೌಕರರಿಗೆ ಒಪಿಎಸ್ ಜಾರಿ ಮಾಡಲಾಗದ ಅಸಹಾಯಕ ಸ್ಥಿತಿಯನ್ನು ಸರಕಾರದ ವೈಫಲ್ಯವನ್ನು ಸ್ವತಃ ಆ ಪಕ್ಷದ ಅಧ್ಯಕ್ಷರೇ ಒಪ್ಪಿಕೊಂಡಿದ್ದಾರೆ’ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಸೋಮವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಚುನಾವಣೆಗೂ ಮುನ್ನ ನೂರಾರು ಭರವಸೆಗಳು, ಅಧಿಕಾರಕ್ಕೆ ಬಂದ ಮೇಲೆ ನೆಪಗಳ ಸರಮಾಲೆ. ಪಂಚ ಗ್ಯಾರಂಟಿಗಳ ನೆಪ ಹೇಳಿ ರೈತರ ಸಾಲಮನ್ನಾ ಮತ್ತು ಸರಕಾರಿ ನೌಕರರ ಹಳೆಯ ಪಿಂಚಣಿ ಯೋಜನೆ ಜಾರಿಯನ್ನು ಮುಂದೂಡುತ್ತಿರುವುದು ಕಾಂಗ್ರೆಸ್ ಸರಕಾರದ ಆಡಳಿತ ವೈಖರಿಗೆ ಹಿಡಿದ ಕನ್ನಡಿ’ ಎಂದು ಟೀಕಿಸಿದ್ದಾರೆ.
ಸಿಎಂ ಡಿ.ಕೆ.ಶಿವಕುಮಾರ್ ಅವರೇ, ಜನರಿಗೆ ಭರವಸೆ ನೀಡಿ ಅಧಿಕಾರಕ್ಕೆ ಬಂದು ಈಗ ಒಂದೂವರೆ ವರ್ಷದಲ್ಲಿ ಯೋಚಿಸುತ್ತೇವೆ ಎನ್ನುವುದು ಯಾವ ನ್ಯಾಯ?. ರೈತರು ಸಂಕಷ್ಟದಲ್ಲಿದ್ದಾರೆ, ಸರಕಾರ ಮಾತ್ರ ಕಾಲಹರಣ ಮಾಡುತ್ತಿದೆ. ಚುನಾವಣೆ ವೇಳೆ ಭರವಸೆಗಳ ಸುರಿಮಳೆ, ಅಧಿಕಾರ ಸಿಕ್ಕ ಮೇಲೆ ನೆಪಗಳ ಸರಮಾಲೆ. ಗ್ಯಾರಂಟಿಗಳ ಹೆಸರಿನಲ್ಲಿ ಉಳಿದ ಜವಾಬ್ದಾರಿಗಳಿಂದ ನುಣುಚಿಕೊಳ್ಳುವುದೇ ಕಾಂಗ್ರೆಸ್ ಆಡಳಿತದ ಮಾದರಿಯೇ?. ರಾಜ್ಯದ ಜನರಿಗೆ ಸ್ಪಷ್ಟ ಉತ್ತರ ನೀಡಿ, ಭರವಸೆಗಳಿಗೆ ಕಾಲಮಿತಿ ನಿಗದಿಪಡಿಸಿ, ರೈತರು-ಸರಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಿ’ ಎಂದು ಅಶೋಕ್ ಆಗ್ರಹಿಸಿದ್ದಾರೆ.






