ಕೃಷಿ ಬೆಳೆ ರೋಗ, ಕೀಟಬಾಧೆ ಸವಾಲು ಹಿನ್ನೆಲೆ: ಸ್ಮಾರ್ಟ್ ಕೃಷಿ ಮಿಷನ್ ಸ್ಥಾಪಿಸಲು ಪ್ರಸ್ತಾವನೆ

ಸಾಂದರ್ಭಿಕ ಚಿತ್ರ | PC : Image by jcomp on Magnific
ಬೆಂಗಳೂರು : ಹವಾಮಾನ ಬದಲಾವಣೆ ಮತ್ತು ವೈಪರೀತ್ಯಗಳಿಂದಾಗಿ ಕೃಷಿ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಬೆಳೆ ರೋಗಗಳು ಹಾಗೂ ಕೀಟಬಾಧೆಗಳ ಸವಾಲುಗಳನ್ನು ಎದುರಿಸಲು ಕರ್ನಾಟಕ ಸ್ಮಾರ್ಟ್ ಬೆಳೆ ಆರೋಗ್ಯ ಮತ್ತು ಹವಾಮಾನ ಸ್ಥಿತಿಸ್ಥಾಪಕ ಕೃಷಿ ಮಿಷನ್(2027-2037) ಸ್ಥಾಪಿಸುವಂತೆ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಎಸ್.ಮೋಹನದಾಸ್ ಹೆಗ್ಡೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಮಳೆಯ ಏರುಪೇರು, ಅತಿವೃಷ್ಟಿ, ಅನಾವೃಷ್ಟಿ, ತಾಪಮಾನ ಏರಿಕೆ ಮತ್ತು ತೇವಾಂಶದ ವ್ಯತ್ಯಾಸಗಳು ಹೊಸ ಹೊಸ ಬೆಳೆ ರೋಗಗಳು ಮತ್ತು ಕೀಟಬಾಧೆಗಳು ಹೆಚ್ಚಾಗಲು ಕಾರಣವಾಗುತ್ತಿವೆ. ಕಬ್ಬು, ಹತ್ತಿ, ಭತ್ತ, ದ್ವಿದಳ ಧಾನ್ಯಗಳು, ತರಕಾರಿ ಮತ್ತು ತೋಟಗಾರಿಕಾ ಬೆಳೆಗಳು ಇಂತಹ ಸಮಸ್ಯೆಗಳಿಗೆ ಹೆಚ್ಚು ತುತ್ತಾಗುತ್ತಿದ್ದು, ರೈತರ ಉತ್ಪಾದನೆ ಮತ್ತು ಆದಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ.
ಈ ಸವಾಲುಗಳನ್ನು ಎದುರಿಸಲು ಕೃತಕ ಬುದ್ಧಿಮತ್ತೆ, ಡ್ರೋನ್ ತಂತ್ರಜ್ಞಾನ, ಉಪಗ್ರಹ ಆಧಾರಿತ ನಿಗಾ ವ್ಯವಸ್ಥೆ, ಜೀನ್ ಎಡಿಟಿಂಗ್, ಆಣ್ವಿಕ ಜೀವಶಾಸ್ತ್ರ ಮತ್ತು ನ್ಯಾನೋ ತಂತ್ರಜ್ಞಾನಗಳನ್ನು ಬಳಸಿಕೊಂಡು ಬೆಳೆ ರೋಗಗಳ ಮುನ್ಸೂಚನೆ, ಆರಂಭಿಕ ಪತ್ತೆ ಮತ್ತು ವೈಜ್ಞಾನಿಕ ನಿಯಂತ್ರಣ ವ್ಯವಸ್ಥೆ ಅಭಿವೃದ್ಧಿಪಡಿಸುವಂತೆ ಪ್ರಸ್ತಾವನೆಯಲ್ಲಿ ಶಿಫಾರಸು ಮಾಡಲಾಗಿದೆ.
ಕರ್ನಾಟಕದ ಕೃಷಿ ವಿಶ್ವವಿದ್ಯಾಲಯಗಳು, ಭಾರತೀಯ ಕೃಷಿ ಸಂಶೋಧನಾ ಮಂಡಳಿ ಸಂಸ್ಥೆಗಳು ಹಾಗೂ ಇತರ ಸಂಶೋಧನಾ ಸಂಸ್ಥೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಸಂಶೋಧನೆ, ತಾಂತ್ರಿಕ ಆವಿಷ್ಕಾ ರ ಮತ್ತು ಸಮನ್ವಯಕ್ಕೆ ಉತ್ತೇಜನ ನೀಡುವ ಉದ್ದೇಶ ಹೊಂದಲಾಗಿದೆ. ಇದರ ಜೊತೆಗೆ ಆಧುನಿಕ ಬೆಳೆ ರೋಗ ಪತ್ತೆ ಪ್ರಯೋಗಾಲಯಗಳು, ಎಐ ಆಧಾರಿತ ರೋಗ ನಿಗಾ ವ್ಯವಸ್ಥೆ, ಜಿಲ್ಲಾವಾರು ಬೆಳೆ ಆರೋಗ್ಯ ನಕ್ಷೆ, ಹವಾಮಾನ ಆಧಾರಿತ ಮುನ್ನೆಚ್ಚರಿಕೆ ವ್ಯವಸ್ಥೆ ಹಾಗೂ ರೈತರಿಗೆ ಸಮಯೋಚಿತ ವೈಜ್ಞಾನಿಕ ಸಲಹೆ ನೀಡುವ ಬಹುಭಾಷಾ ಡಿಜಿಟಲ್ ವೇದಿಕೆಯನ್ನು ಅಭಿವೃದ್ಧಿಪಡಿಸಲು ಪ್ರಸ್ತಾಪಿಸಲಾಗಿದೆ.
ರಾಯಚೂರು, ಧಾರವಾಡ, ಬೆಂಗಳೂರು ಮತ್ತು ಶಿವಮೊಗ್ಗದ ಕೃಷಿ ವಿಜ್ಞಾನ ವಿಶ್ವವಿದ್ಯಾಲಯಗಳು ಸಂಶೋಧನೆ, ಕ್ಷೇತ್ರಮಟ್ಟದ ಪರೀಕ್ಷೆ ಮತ್ತು ತಂತ್ರಜ್ಞಾನ ವರ್ಗಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಬಹುದಾಗಿದೆ.ಈ ಮಿಷನ್ಗೆ ಕೃಷಿ ಇಲಾಖೆಯನ್ನು ನೋಡಲ್ ಇಲಾಖೆಯನ್ನಾಗಿ ನೇಮಿಸಿ, 2027–28ನೆ ಸಾಲಿನ ಕರ್ನಾಟಕ ರಾಜ್ಯ ಬಜೆಟ್ನಲ್ಲಿ ವಿಶೇಷ ಅನುದಾನವನ್ನು ಪರಿಗಣಿಸಿ, ಹಂತ ಹಂತವಾಗಿ ಅನುಷ್ಠಾನಗೊಳಿಸುವಂತೆ ಪ್ರಸ್ತಾವನೆಯಲ್ಲಿ ಶಿಫಾರಸು ಮಾಡಲಾಗಿದೆ.
ಸಾಂಪ್ರದಾಯಿಕ ಬೆಳೆ ರೋಗ ನಿಯಂತ್ರಣ ಪದ್ಧತಿಯಿಂದ ಮುನ್ಸೂಚನೆ, ಮುನ್ನೆಚ್ಚರಿಕೆ ಮತ್ತು ಆಧುನಿಕ ತಂತ್ರಜ್ಞಾನ ಆಧಾರಿತ ಬೆಳೆ ಆರೋಗ್ಯ ನಿರ್ವಹಣೆಯತ್ತ ಕರ್ನಾಟಕದ ಕೃಷಿ ಕ್ಷೇತ್ರವನ್ನು ಕೊಂಡೊಯ್ದು, ಬೆಳೆ ನಷ್ಟವನ್ನು ಕಡಿಮೆ ಮಾಡುವುದು, ರೈತರ ಆದಾಯವನ್ನು ಸುಧಾರಿಸುವುದು ಮತ್ತು ಹವಾಮಾನ ವೈಪರೀತ್ಯಗಳನ್ನು ಎದುರಿಸಬಲ್ಲ ಸುಸ್ಥಿರ ಕೃಷಿ ವ್ಯವಸ್ಥೆಯನ್ನು ನಿರ್ಮಿಸುವುದು ಈ ಮಿಷನ್ನ ಪ್ರಮುಖ ಆಶಯವಾಗಿದೆ ಎಂದು ಎಸ್.ಮೋಹನದಾಸ್ ಹೆಗ್ಡೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.






