ಸುಧಾಕರ್ ರ ಸ್ಮರಣೆಗೆ ನೀರಾವರಿ ಯೋಜನೆಗೆ ಅವರ ಹೆಸರಿಡಲು ಆಲೋಚನೆ: ಡಿ.ಕೆ.ಶಿವಕುಮಾರ್

ಡಿಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು, ಮೇ 10: "ಸಚಿವ ಡಿ.ಸುಧಾಕರ್ ಭದ್ರಾ ಮೇಲ್ದಂಡೆ ಯೋಜನೆ ಜಾರಿಗೆ ಹೋರಾಟ ಮಾಡಿದ್ದರು. ಅವರ ಸ್ಮರಣಾರ್ಥ ನೀರಾವರಿ ಯೋಜನೆಗೆ ಸುಧಾಕರ್ ರ ಹೆಸರಿಡಲು ಆಲೋಚನೆ ಮಾಡಲಾಗುವುದು" ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸದಾಶಿವ ನಗರ ನಿವಾಸದಲ್ಲಿ ರವಿವಾರ ಮಾಧ್ಯಮದವರ ಜೊತೆ ಮಾತನಾಡಿದ ಅವರು, "ಇಂದು ನಮ್ಮ ಪಾಲಿಗೆ ಬಹಳ ದುಃಖದ ದಿನ. ನನ್ನ ಆಪ್ತಮಿತ್ರ ಹಾಗೂ ನಮ್ಮ ಸರಕಾರದ ಸಚಿವ ಡಿ.ಸುಧಾಕರ್ ನಮ್ಮನ್ನು ಅಗಲಿದ್ದಾರೆ ಎಂದರು.
" ಸುಧಾಕರ್ ಅವರ ಮೃತದೇಹವನ್ನು ಇಂದು ಹಿರಿಯೂರಿಗೆ ತೆಗೆದುಕೊಂಡು ಹೋಗಲಾಗುತ್ತಿದ್ದು, ಸಂಜೆ ನಂತರ ಚಳ್ಳಕೆರೆಗೆ ತೆಗೆದುಕೊಂಡು ಹೋಗಲಾಗುವುದು. ನಾನು ಜಿಲ್ಲಾಧಿಕಾರಿ ಜೊತೆ ಚರ್ಚೆ ಮಾಡಿದ್ದು ನಾಳೆ ಸಂಜೆ 3 ಗಂಟೆ ನಂತರ ಜೈನ ಧರ್ಮದ ವಿಧಿ ವಿಧಾನಗಳ ಪ್ರಕಾರ ಅಂತಿಮ ಕಾರ್ಯ ನಡೆಸಲಾಗುವುದು. ಸರ್ಕಾರದ ಗೌರವದೊಂದಿಗೆ ಅವರಿಗೆ ಅಂತಿಮ ನಮನ ಸಲ್ಲಿಸಲಾಗುವುದು" ಎಂದು ಡಿಸಿಎಂ ತಿಳಿದರು.
"ನಾನು ಇಂದು ಅವರ ಪಾರ್ಥಿವ ಶರೀರ ದರ್ಶನ ಮಾಡಲಿದ್ದೇನೆ. ನಾಳೆ ಅವರ ಅಂತಿಮ ಸಂಸ್ಕಾರ ಕಾರ್ಯದಲ್ಲಿ ಭಾಗವಹಿಸುತ್ತೇನೆ. ಅವರು ನನ್ನ ಜೊತೆ ಬಹಳ ಒಡನಾಟ ಇಟ್ಟುಕೊಂಡಿದ್ದರು. ಬಹಳ ಚಿಕ್ಕ ವಯಸ್ಸು, ಆರೋಗ್ಯವಾಗಿದ್ದರು. ಎಸ್.ಎಂ.ಕೃಷ್ಣರ ಕಾಲದಲ್ಲಿ ರಂಗನಾಥ್ ಅವರ ಕ್ಷೇತ್ರದಲ್ಲಿ ಟಿಕೆಟ್ ಕೊಡಿಸಿದ್ದೆ. ನನ್ನ ಜೊತೆ ಮಂತ್ರಿಯಾಗಿ ಕೆಲಸ ಮಾಡಿದ್ದಾರೆ. ಅವರಿಗೆ ಯೋಜನಾ ಮತ್ತು ಮುಜರಾಯಿ ಇಲಾಖೆ ನೀಡಲಾಗಿತ್ತು. ಅವರ ಜೊತೆ ಚರ್ಚೆ ಮಾಡಿ ಮುಜರಾಯಿ ಇಲಾಖೆಯನ್ನು ರಾಮಲಿಂಗಾರೆಡ್ಡಿ ಅವರಿಗೆ ನೀಡಲಾಯಿತು. ಸಿಎಂ ಇದಕ್ಕೆ ಅನುಮತಿ ನೀಡಿದ್ದರು" ಎಂದು ಹೇಳಿದರು.
"ಭಾರತ ಜೋಡೋ ಯಾತ್ರೆ ವೇಳೆ ಐದು ದಿನದ ಜವಾಬ್ದಾರಿಯನ್ನು ಅವರೇ ವಹಿಸಿದ್ದರು. ಅವರ ಅಗಲಿಕೆ ವಿಚಾರವನ್ನು ರಾಹುಲ್ ಗಾಂಧಿಯವರ ಗಮನಕ್ಕೆ ತರಲಾಗಿದೆ. ರಾಹುಲ್ ಗಾಂಧಿಯವರು ಸುಧಾಕರ್ ಅವರ ಕುಟುಂಬದ ಸದಸ್ಯರ ಜೊತೆಗೆ ಮಾತನಾಡಲಿದ್ದಾರೆ" ಎಂದರು.
"ಸುಧಾಕರ್ ಭದ್ರಾ ಯೋಜನೆ ಪೂರ್ಣಗೊಳಿಸಿ ಅದಕ್ಕೆ ಚಾಲನೆ ನೀಡಬೇಕು ಎಂದು ಬಹಳ ಆಸೆ ಇಟ್ಟುಕೊಂಡಿದ್ದರು. ಈ ಯೋಜನೆಗಾಗಿ ಸಾಕಷ್ಟು ಹೋರಾಟ ಮಾಡಿದ್ದರು. ಅವರ ಅಧ್ಯಕ್ಷತೆಯಲ್ಲಿ ಈ ಯೋಜನೆ ಉದ್ಘಾಟನೆ ಮಾಡಬೇಕು ಎಂದು ಚಿಂತಿಸಿದ್ದೆವು. ಕ್ಷೇತ್ರ ಹಾಗೂ ಜಿಲ್ಲೆಯ ಅಭಿವೃದ್ಧಿ ಬಗ್ಗೆ ಆಸಕ್ತಿ ಹೊಂದಿದ್ದರು. ಎಲ್ಲಾ ವರ್ಗದ ಜನರಿಗೆ ನ್ಯಾಯ ಒದಗಿಸಿಕೊಡುತ್ತಿದ್ದರು. ಪಕ್ಷದ ಸದಸ್ಯತ್ವ ಅಭಿಯಾನದಲ್ಲಿ ಅತಿ ಹೆಚ್ಚು ನೋಂದಣಿ ಮಾಡಿಸಿದ ಕೀರ್ತಿ ಸುಧಾಕರ್ ಅವರಿಗೆ ಸಲ್ಲುತ್ತದೆ. ರಾಹುಲ್ ಗಾಂಧಿಯವರ ಭಾರತ ಜೋಡೋ ಸಂದರ್ಭದಲ್ಲಿ ಮಳೆ ಬಂದು ಅವ್ಯವಸ್ಥೆಯಾದಾಗ ಕಾರ್ಯಕ್ರಮ ಯಶಸ್ಸಿಗೆ ಅವರು ಹಾಗೂ ಅವರ ಕಾರ್ಯಕರ್ತರು ಪಟ್ಟ ಕಷ್ಟ ನೆನೆಯುತ್ತೇವೆ" ಎಂದು ಹೇಳಿದರು.






