ಖೋಖೋ ಕ್ರೀಡಾಪಟುಗಳ ಬೇಡಿಕೆ ಈಡೇರಿಸಲು ಆಗ್ರಹಿಸಿ ಫೆ.18ಕ್ಕೆ ಹೋರಾಟ

ಸಾಂದರ್ಭಿಕ ಚಿತ್ರ
ಬೆಂಗಳೂರು : ವಿಶ್ವಮಟ್ಟದ ಸ್ಪರ್ಧೆಯಲ್ಲಿ ವಿಜೇತರಾದಂತಹ ಮಕ್ಕಳಿಗೆ ನೆರೆ ರಾಜ್ಯಗಳಲ್ಲಿ ನೀಡುತ್ತಿರುವಂತೆ ‘ಎ’ ಗ್ರೇಡ್ ಮತ್ತು ‘ಬಿ’ ಗ್ರೇಡ್ ಸರಕಾರಿ ಹುದ್ದೆ ನೀಡಬೇಕು. ಕನಿಷ್ಠ 50ಲಕ್ಷ ರೂ.ಗಳ ಬಹುಮಾನ ಪ್ರತಿಯೊಬ್ಬ ಕ್ರೀಡಾಪಟುಗಳಿಗೆ ನೀಡುವಂತಹ ನಿಯಮ ರೂಪಿಸಬೇಕೆಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಿಬೇಕೆಂದು ಆಗ್ರಹಿಸಿ ಫೆ.18ರಂದು ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ಖೋಖೋ ಸಂಸ್ಥೆಯ ಅಧ್ಯಕ್ಷ ಲೋಕೇಶ್ವರ ಹೇಳಿದ್ದಾರೆ.
ಸೋಮವಾರ ನಗರದ ಪ್ರೆಸ್ಕ್ಲಬ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಧಿಕೃತ ರಾಜ್ಯ ಕ್ರೀಡಾ ಸಂಸ್ಥೆಗಳಿಗೆ ಈ ಹಿಂದೆ ನೀಡುತ್ತಿದ್ದಂತೆ ನೇರವಾಗಿ ಮನವಿಯನ್ನು ಪಡೆದು, ಅನುದಾನವನ್ನು ನೀಡುವ ಪದ್ಧತಿಯನ್ನು ಜಾರಿಗೊಳಿಸಬೇಕು. ಈಗ ಇರುವ ರಾಜ್ಯ ಒಲಂಪಿಕ್ ಸಂಸ್ಥೆಯ ಮೂಲಕ ಅನುದಾನ ಕೇಳುವ ಪದ್ಧತಿಯನ್ನು ರದ್ದುಗೊಳಿಸಬೇಕು ಎಂದರು.
ಎಲ್ಲ ರಾಜ್ಯದ ಅಧಿಕೃತ (ರಾಷ್ಟ್ರೀಯ ಫೆಡರೇಶನ್ಗೆ ನೋಂದಣಿಯಾದ) ಕ್ರೀಡಾ ಸಂಸ್ಥೆಗಳನ್ನು ಕಡ್ಡಾಯವಾಗಿ ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಸದಸ್ಯರಾಗಿ ನೇಮಿಸುವಂತೆ ಕ್ರಮಕೈಗೊಳ್ಳಬೇಕು. ಕರ್ನಾಟಕ ರಾಜ್ಯ ಒಲಂಪಿಕ್ ಅಸೋಸಿಯೇಷನ್ ಯಾವುದೇ ರಾಜ್ಯ ಕ್ರೀಡಾ ಸಂಸ್ಥೆಗಳನ್ನು ಅನವಶ್ಯಕ ಕಾರಣಗಳಿಗೆ ತೊಂದರೆ ಕೊಡದಂತೆ ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯಲ್ಲಿರುವ ಯಾವುದೇ ಕಾನೂನುಗಳನ್ನು ರಾಜ್ಯ ಒಲಂಪಿಕ್ ಸಂಸ್ಥೆಯು ಬದಲಾಯಿಸಿದ್ದರೆ ಮತ್ತೆ ಅದನ್ನು ಸರಿಪಡಿಸುವಂತೆ ಮತ್ತು ಮುಂದೆ ರಾಷ್ಟ್ರೀಯ ಒಲಿಂಪಿಕ್ ಸಂಸ್ಥೆಯ ಅನುಮತಿ ಇಲ್ಲದೆ ಯಾವುದೇ ಬದಲಾವಣೆಗಳನ್ನು ಮಾಡದಂತೆ ಕ್ರಮ ಕೈಗೊಳ್ಳಬೇಕು. ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಸಂಸ್ಥೆಗೆ ಈಗಾಗಲೇ ನೀಡಿರುವ ಅನುದಾನದ ಬಗ್ಗೆ ದುರುಪಯೋಗ ಪಡಿಸಿಕೊಂಡಿರುವ ಆರೋಪಗಳಿದ್ದು ಅವುಗಳನ್ನು ತನಿಖೆ ಮಾಡಿಸಬೇಕು ಎಂದು ಲೋಕೇಶ್ವರ್ ಆಗ್ರಹಿಸಿದರು.