ಮಾ.3ಕ್ಕೆ ‘ಪಲ್ಸ್ ಪೋಲಿಯೋ’ ಅಭಿಯಾನ

ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯಾದ್ಯಂತ ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಕಾರ್ಯಕ್ರಮವನ್ನು ಮಾರ್ಚ್ 3ರಂದು ಹಮ್ಮಿಕೊಳ್ಳಲಾಗಿದೆ ಎಂದು ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಟಿ.ಕೆ.ಅನಿಲ್ ಕುಮಾರ್ ತಿಳಿಸಿದ್ದಾರೆ.
ಬುಧವಾರ ವಿಕಾಸಸೌಧದಲ್ಲಿ ಹಮ್ಮಿಕೊಳ್ಳಲಾಗಿದ್ದ ದಡಾರ-ರುಬೆಲ್ಲಾ ನಿರ್ಮೂಲನೆ ಹಾಗೂ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಕುರಿತಾದ ಟಾಸ್ಕ್ ಪೋರ್ಸ್ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ದಡಾರ ಮಕ್ಕಳ ಮಾರಾಣಾಂತಿಕ ಕಾಯಿಲೆಯಾಗಿದ್ದು, ದಡಾರ ವಿರುದ್ಧ ಲಸಿಕೆ ಪಡೆದರೆ ಇದರಿಂದ ಸಂಭವಿಸುವ ಸಾವನ್ನು ಶೇ.94ರಷ್ಟು ತಡೆಯಬಹುದು. ರಾಜ್ಯದಲ್ಲಿ 2023ನೆ ಸಾಲಿನಲ್ಲಿ 4,074 ದಡಾರ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದರು.
ರುಬೆಲ್ಲಾ ಒಂದು ಬಗೆಯ ವೈರಾಣು ಬಗೆಯ ವೈರಾಣು ಸೋಕಿತ ಕಾಯಿಲೆಯಾಗಿದ್ದು, ಮಹಿಳೆಯರಿಗೆ ಗರ್ಭಾವಸ್ಥೆಯಲ್ಲಿ ಈ ಸೋಂಕು ಸಂಭವಿಸಬಹುದಾಗಿದೆ. ಇದರಿಂದ ಹುಟ್ಟುವ ಮಕ್ಕಳಲ್ಲಿ ದೈಹಿಕ, ಮಾನಸಿಕ ನ್ಯೂನತೆ ಸಂಭವಿಸಬಹುದು. ರಾಜ್ಯದಲ್ಲಿ 2023ನೆ ಸಾಲಿನಲ್ಲಿ 231ರುಬೆಲ್ಲಾ ಪ್ರಕರಣಗಳು ದಾಖಲಾಗಿವೆ. ಮಾರ್ಚ್ 3ರಂದು ರಾಜ್ಯಾದ್ಯಂತ 0-5 ವಯೋಮಾನದ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ನಿಗಧಿತ ಬೂತ್, ಅಂಗನವಾಡಿ ಮುಂತಾದ ಸ್ಥಳಗಳಲ್ಲಿ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗ್ರಾ.ಪಂ.ಹಾಗೂ ತಾ.ಪಂ., ನಗರ ಮಟ್ಟಗಳಲ್ಲೂ ಪೋಲಿಯೋ ಲಸಿಕೆ ಬಗ್ಗೆ ಅರಿವು ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಮಾ.3ರಂದು ಬೂತ್ ಗಳಲ್ಲಿ, ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಪೋಲಿಯೋ ಲಸಿಕೆ ನೀಡಲಾಗುತ್ತದೆ. ನಂತರದ ಮೂರು ದಿನ ತಂಡಗಳು ಮನೆ ಮನೆಗೆ ತೆರಳಿ ಲಸಿಕೆ ನೀಡಲಿದೆ. 2008ರಿಂದ ರಾಜ್ಯದಲ್ಲಿ ಯಾವುದೇ ಪೋಲಿಯೋ ಪ್ರಕರಣ ಸಂಭವಿಸಿಲ್ಲ ಎಂದರು. ಸಭೆಯಲ್ಲಿ ಆರ್ಸಿಎಚ್ ಯೋಜನಾ ನಿರ್ದೇಶಕ ಹಾಗೂ ರಾಷ್ಟ್ರೀಯ ಆರೋಗ್ಯ ಮಿಷನ್ ವ್ಯವಸ್ಥಾಪಕ ನಿರ್ದೇಶಕ ನವೀನ್ ಭಟ್ ಉಪಸ್ಥಿತರಿದ್ದರು.







