ಮಾ.3ಕ್ಕೆ ‘ಪಲ್ಸ್ ಪೋಲಿಯೋ’ ರಾಷ್ಟ್ರೀಯ ಲಸಿಕಾ ದಿನ: ಟಿ.ಕೆ.ಅನಿಲ್ ಕುಮಾರ್
ಬೆಂಗಳೂರು: ಪೋಲಿಯೋ ನಿರ್ಮೂಲನಾ ಸ್ಥಿತಿ ಕಾಯ್ದುಕೊಳ್ಳುವುದು ಮತ್ತು ತಜ್ಞ ಶಿಫಾರಸ್ಸಿನ ಅನ್ವಯ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪಲ್ಸ್ ಪೋಲಿಯೋ ಹಾಕಿಸುವುದು ಕಡ್ಡಾಯವಾಗಿದ್ದು, ಮಾ.3 ಅನ್ನು ‘ರಾಷ್ಟ್ರೀಯ ಲಸಿಕಾ ದಿನ’ (ಪಲ್ಸ್ ಪೋಲಿಯೋ)ವಾಗಿ ಆಚರಿಸಲು ಕೇಂದ್ರ ಸರಕಾರ ತಿಳಿಸಿದೆ ಎಂದು ಆರೋಗ್ಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ಅವರು ತಿಳಿಸಿದ್ದಾರೆ.
ಶುಕ್ರವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಮಾ.3ರ ರವಿವಾರ ಬಿಒಪಿಯು ಲಸಿಕೆಯನ್ನು ಬಳಸಿ ಒಂದು ಸುತ್ತಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು 0-5 ವರ್ಷದೊಳಗಿನ ಮಕ್ಕಳಿಗೆ ಹಮ್ಮಿಕೊಳ್ಳಲಾಗಿದೆ. ಮೊದಲನೇ ದಿನ ಮಾ.3ರಂದು ಪೋಲಿಯೋ ಬೂತ್ಗಳಲ್ಲಿ ಹಾಗೂ ನಂತರದ 2-3 ದಿನಗಳಲ್ಲಿ ಮನೆ ಮನೆಗೆ ಭೇಟಿ ನೀಡಿ 0-5 ವರ್ಷದ ಮಕ್ಕಳಿಗೆ, ವಲಸಿಗ ಸಮುದಾಯದ, ಹೆಚ್ಚು ಅಪಾಯದಂಚಿನಲ್ಲಿರುವ ಪ್ರದೇಶಗಳಲ್ಲಿನ ಹಾಗೂ ನಗರ ಪ್ರದೇಶದ ಸ್ಲಂಗಳಲ್ಲಿ ವಾಸಿಸುವ ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡಿ ಬಾಯಿಯ ಮೂಲಕ ಎರಡು ಹನಿ ಪೋಲಿಯೋ ಲಸಿಕೆ ನೀಡಲಾಗುವುದು.
ಸಾರ್ವಜನಿಕರು ತಮ್ಮ 5 ವರ್ಷದ ಒಳಗಿನ ಎಲ್ಲ ಮಕ್ಕಳಿಗೂ ತಪ್ಪದೇ ಪಲ್ಸ್ ಪೋಲಿಯೋ ಲಸಿಕೆಯನ್ನು ಹಾಕಿಸಬೇಕು ಎಂದು ಆರೋಗ್ಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳು ತಿಳಿಸಿದ್ದಾರೆ.