ವಲಸೆ ಕಾರ್ಮಿಕರ ಮನೆಗೆ ಅಕ್ರಮ ಪ್ರವೇಶ, ಬೆದರಿಕೆ ಪ್ರಕರಣ : ಪುನೀತ್ ಕೆರೆಹಳ್ಳಿಗೆ ಜಾಮೀನು

ಬೆಂಗಳೂರು : ವಲಸೆ ಕಾರ್ಮಿಕರ ವಾಸಸ್ಥಳಗಳಿಗೆ ಅಕ್ರಮವಾಗಿ ಪ್ರವೇಶಿಸಿ, ಅವರ ಪೌರತ್ವ ಹಾಗೂ ಗುರುತಿನ ದಾಖಲೆಗಳನ್ನು ಕೇಳಿ ಬೆದರಿಕೆ ಹಾಗೂ ಭೀತಿಯನ್ನುಂಟುಮಾಡಿದ ಆರೋಪದಡಿ ಬಂಧಿತರಾಗಿದ್ದ ಕೊಲೆ ಪ್ರಕರಣವೊಂದರ ಆರೋಪಿ ಪುನೀತ್ ಕೆರೆಹಳ್ಳಿ ಹಾಗೂ ಮತ್ತೊಬ್ಬರಿಗೆ ಆನೇಕಲ್ ತಾಲೂಕು ನ್ಯಾಯಾಲಯವು ಜಾಮೀನು ಮಂಜೂರು ಮಾಡಿ ಶನಿವಾರ ಆದೇಶಿಸಿದೆ.
ಜ.13ರಂದು ಬನ್ನೇರುಘಟ್ಟ ಪೊಲೀಸ್ ಠಾಣೆ ಸರಹದ್ದಿನ ಎಸ್.ಬಿಂಗೀಪುರದ ಸಿದ್ದೇಶ್ ಕೆ.ಆರ್. ಎಂಬುವರ ಮಾಲಕತ್ವದ ಜಮೀನಿನ ಬಾಡಿಗೆ ಮನೆಯಲ್ಲಿ ವಾಸವಿದ್ದವರಿಗೆ ಧಮ್ಕಿ ಹಾಕಿ, ಗಲಾಟೆ ಮಾಡಿದ್ದಲ್ಲದೆ, ಅಲ್ಲಿಗೆ ಬಂದ ಸಿದ್ದೇಶ್ ಕೆ.ಆರ್. ಅವರಿಗೂ ನಿಂದಿಸಿ, ಜೀವ ಬೆದರಿಕೆ ಹಾಕಿದ ಆರೋಪದಡಿ ದಾಖಲಾದ ದೂರಿನ ಮೇರೆಗೆ ಶುಕ್ರವಾರ(ಜ.17) ತಡರಾತ್ರಿ 11 ಗಂಟೆ ಸುಮಾರಿಗೆ ಕೊಲೆ ಪ್ರಕರಣವೊಂದರ ಆರೋಪಿ ಪುನೀತ್ ಕೆರೆಹಳ್ಳಿ ಹಾಗೂ ಡಾ.ನಾಗೇಂದ್ರಪ್ಪ ಶಿರೂರು ಎಂಬುವರನ್ನು ಪೊಲೀಸರು ಬಂಧಿಸಿದ್ದರು.
ಬಳಿಕ, ಜ.17ರ ಶನಿವಾರ ಬಂಧಿತ ಆರೋಪಿಗಳನ್ನು ಆನೇಕಲ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಈ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಪ್ರಕರಣದಲ್ಲಿ ಬಲವಂತದ ಕ್ರಮ ಜರುಗಿಸದಂತೆ ಸೂಚಿಸಿ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ.
ದೂರಿನಲ್ಲೇನಿದೆ?: ಈ ಸಂಬಂಧ ಜಮೀನಿನ ಮಾಲಕ ಸಿದ್ದೇಶ್ ಕೆ.ಆರ್. ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಪ್ರಕಾರ, ‘ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಬಿಂಗೀಪುರ ಗ್ರಾಮದ ಸಾಯಿಬೃಂದಾವನ ಲೇಔಟ್ ಬಳಿ, ಜನವರಿ 13ರ ಬೆಳಗಿನ ಜಾವ 12.05ರ ಸುಮಾರಿಗೆ ತಮ್ಮ ಮಾವ ಮಲ್ಲಿಕಾರ್ಜುನ ಅವರು ಬಾಡಿಗೆಗೆ ನೀಡಿರುವ ಜಾಗದ ಬಳಿ ಗಲಾಟೆ ನಡೆಯುತ್ತಿದೆ ಎಂಬ ಮಾಹಿತಿ ಸಿದ್ದೇಶ ಕೆ.ಆರ್. ಅವರಿಗೆ ಲಭ್ಯವಾಗಿದೆ. ಈ ಹಿನ್ನೆಲೆಯಲ್ಲಿ ಅವರು ಸುಮಾರು 12.30ರ ವೇಳೆಗೆ ಬಾಡಿಗೆ ಮನೆಯ ಬಳಿ ತೆರಳಿದ್ದಾರೆ.
ಅಲ್ಲಿ ಪುನೀತ್ ಕೆರೆಹಳ್ಳಿ, ಡಾ.ನಾಗೇಂದ್ರಪ್ಪ ಶಿರೂರು ಹಾಗೂ ಇತರರು ಸೇರಿಕೊಂಡು ಬಾಡಿಗೆದಾರರೊಂದಿಗೆ, ‘ನೀವು ಬಾಂಗ್ಲಾದೇಶದವರು, ಇಲ್ಲಿಗೆ ಏಕೆ ಬಂದಿದ್ದೀರಿ?’ ಎಂದು ವಾಗ್ವಾದ ನಡೆಸುತ್ತಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಗಲಾಟೆಯನ್ನು ತಡೆಯಲು ಮುಂದಾದ ಸಿದ್ದೇಶ ಕೆ.ಆರ್. ಅವರನ್ನು, ‘ಇವರಿಗೆ ಏಕೆ ಮನೆ ಬಾಡಿಗೆ ಕೊಟ್ಟಿದ್ದೀಯ?’ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಲಾಗಿದೆ. ಬಾಡಿಗೆದಾರರು ಕರ್ನಾಟಕದ ಆಧಾರ್ ಕಾರ್ಡ್ ತೋರಿಸಿದ್ದರಿಂದಲೇ ಮನೆ ಬಾಡಿಗೆ ನೀಡಲಾಗಿದೆ ಎಂದು ತಿಳಿಸಿದರೂ, ಆರೋಪಿಗಳು ಗಲಾಟೆ ಮುಂದುವರಿಸಿ, ‘ನೀನು ಬಾಂಗ್ಲಾದೇಶದವರಿಗೆ ಮನೆ ಬಾಡಿಗೆ ಕೊಟ್ಟಿದ್ದಕ್ಕೆ ನಿನ್ನನ್ನು ಜೀವ ಸಹಿತ ಸುಮ್ಮನೆ ಬಿಡುವುದಿಲ್ಲ’ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ಬೆಳಗಿನ ಜಾವ ಸುಮಾರು 1 ಗಂಟೆಗೆ ಸ್ಥಳಕ್ಕೆ ಆಗಮಿಸಿದ ಬನ್ನೇರುಘಟ್ಟ ಪೊಲೀಸರು ಬಾಡಿಗೆದಾರರನ್ನು ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ನಂತರ ಪುನೀತ್ ಕೆರೆಹಳ್ಳಿ ಹಾಗೂ ಡಾ.ನಾಗೇಂದ್ರಪ್ಪ ಶಿರೂರು ಮತ್ತೆ ತೊಂದರೆ ಉಂಟುಮಾಡುವ ಸಾಧ್ಯತೆ ಇದೆ ಎಂಬ ಭಯದಿಂದ ತಡವಾಗಿ ದೂರು ನೀಡಿರುವುದಾಗಿ ಸಿದ್ದೇಶ ಕೆ.ಆರ್. ತಿಳಿಸಿದ್ದಾರೆ.
ತಮ್ಮ ಜಾಗಕ್ಕೆ ಅತಿಕ್ರಮ ಪ್ರವೇಶ ಮಾಡಿ, ಅವಾಚ್ಯ ನಿಂದನೆ ನಡೆಸಿ ಜೀವ ಬೆದರಿಕೆ ಹಾಕಿರುವ ಆರೋಪಿಗಳಾದ ಪುನೀತ್ ಕೆರೆಹಳ್ಳಿ, ಡಾ.ನಾಗೇಂದ್ರಪ್ಪ ಶಿರೂರು ಹಾಗೂ ಇತರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.
ಈ ಪ್ರಕರಣದ ಕುರಿತು ಬನ್ನೇರುಘಟ್ಟ ಪೊಲೀಸರು ಬಿಎನ್‍ಎಸ್ ಸೆಕ್ಷನ್ 126(2), 3(5), 329(3), 351(2) 352 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.







