ರೈಲ್ವೆ ಇಲಾಖೆ ಹುದ್ದೆಗಳ ಬಡ್ತಿಗೆ ಕನ್ನಡದಲ್ಲಿ ಪರೀಕ್ಷೆ ನಿರಾಕರಣೆ | ಕನ್ನಡ ವಿರೋಧಿ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಿ : ಡಾ.ಪುರುಷೋತ್ತಮ ಬಿಳಿಮಲೆ

ಪ್ರೊ.ಪುರುಷೋತ್ತಮ ಬಿಳಿಮಲೆ
ಬೆಂಗಳೂರು : ನೈರುತ್ಯ ರೈಲ್ವೆಯ ಬೆಂಗಳೂರು ವಿಭಾಗವು ಇತ್ತೀಚೆಗೆ ವಿವಿಧ ಬಡ್ತಿ ಹುದ್ದೆಗಳಿಗೆ ನೇಮಕಾತಿ ಕುರಿತಂತೆ ನಡೆಸಿದ ಪರೀಕ್ಷೆಗಳಲ್ಲಿ ಕನ್ನಡದಲ್ಲಿ ಬರೆಯುವ ಅವಕಾಶವನ್ನು ನಿರಾಕರಿಸುವ ಮೂಲಕ ಕನ್ನಡಿಗರ ಭಾವನೆಗಳಿಗೆ ತೀವ್ರ ಘಾಸಿಯನ್ನು ಉಂಟು ಮಾಡಿದ್ದು, ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮವಹಿಸಿ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.
ಈ ಕುರಿತು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೆ ಪತ್ರ ಬರೆದಿರುವ ಅವರು, ನೈರುತ್ಯ ರೈಲ್ವೆಯ ಮೈಸೂರು ಹಾಗೂ ಹುಬ್ಬಳ್ಳಿ ವಿಭಾಗಗಳಲ್ಲಿ ಕನ್ನಡದಲ್ಲಿಯೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದ್ದು, ಬೆಂಗಳೂರು ವಿಭಾಗದಲ್ಲಿ ಯಾಕೆ ಸಾಧ್ಯವಾಗಿರುವುದಿಲ್ಲ ಎಂಬ ಬಗ್ಗೆ ತನಿಖೆ ನಡೆಸಬೇಕು ಎಂದು ತಿಳಿಸಿದ್ದಾರೆ.
ಕನ್ನಡ ಭಾಷೆಗೆ ಅವಕಾಶವಿಲ್ಲದೇ ಕಳೆದ 15 ದಿನಗಳ ಹಿಂದೆ ನಡೆಸಿರುವ ಬಡ್ತಿ ಪರೀಕ್ಷೆಗಳನ್ನು ಪುನಃ ನಡೆಸಿ ಅರ್ಹ ಕನ್ನಡಿಗರಿಗೆ ನ್ಯಾಯ ದೊರಕಿಸಿ ಕೊಡಬೇಕು. ಮುಂದೆ ಈ ರೀತಿಯ ಅಚಾತುರ್ಯಗಳು ನಡೆಯದಂತೆ ಸ್ವ-ನಿಯಂತ್ರಣ ವ್ಯವಸ್ಥೆಯನ್ನು ಜಾರಿಯಲ್ಲಿಡಲು ರೈಲ್ವೆ ಇಲಾಖೆ ಮುಂದಾಗುವ ರೀತಿಯಲ್ಲಿ ತಾವು ಕಠಿಣ ಸೂಚನೆಯನ್ನು ನೀಡಬೇಕು ಎಂದು ತಿಳಿಸಿದ್ದಾರೆ.





