ಜಿಬಿಎ ಚುನಾವಣೆಯಲ್ಲಿಯೂ ಬಿಜೆಪಿ ಗೆಲುವು : ಆರ್.ಅಶೋಕ್ ವಿಶ್ವಾಸ

ಬೆಂಗಳೂರು : ಮುಂಬೈ ನಗರದ ಜನತೆ ಬಿಜೆಪಿಗೆ ಬೆಂಬಲಿಸಿದಂತೆ ಮುಂಬರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರ(ಜಿಬಿಎ)ವ್ಯಾಪ್ತಿಯ 5 ಮಹಾನಗರ ಪಾಲಿಕೆಗಳ ಚುನಾವಣೆಯಲ್ಲಿಯೂ ಬೆಂಗಳೂರಿನ ಜನತೆ ಬಿಜೆಪಿಗೆ ದೊಡ್ಡಮಟ್ಟದಲ್ಲಿ ಆಶೀರ್ವಾದ ಮಾಡಲಿದ್ದು, ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಪತನದ ಹಾದಿ ಆರಂಭವಾಗುವುದು ನಿಶ್ಚಿತ’ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಶುಕ್ರವಾರ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಬಿಜೆಪಿಗೆ ಜೈ ಎಂದ ಮುಂಬೈ ಜನತೆ. ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವಿನ ನಂತರ ಇದೀಗ ಮಹಾರಾಷ್ಟ್ರದ ಪ್ರತಿಷ್ಠಿತ ಬಿಎಂಸಿ ಸೇರಿದಂತೆ ಪುಣೆ, ನಾಗಪುರ ಹಾಗೂ ರಾಜ್ಯದ ಎಲ್ಲ ಪ್ರಮುಖ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಮತ್ತು ಶಿವಸೇನೆ (ಏಕನಾಥ್ ಶಿಂಧೆ ಬಣ) ಮೈತ್ರಿಕೂಟ ಮತ್ತೊಮ್ಮೆ ಅಭೂತಪೂರ್ವ ಜಯಭೇರಿ ಬಾರಿಸಿದ್ದು ಇದು ಜನತೆ ಮತ್ತೊಮ್ಮೆ ಬಿಜೆಪಿಯ ಅಭಿವೃದ್ಧಿ ರಾಜಕಾರಣಕ್ಕೆ ಮನ್ನಣೆ ನೀಡಿದ್ದಾರೆ’ ಎಂದು ತಿಳಿಸಿದ್ದಾರೆ.
‘ಈ ಐತಿಹಾಸಿಕ ವಿಜಯದ ರೂವಾರಿಗಳಾದ ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಪಕ್ಷದ ಎಲ್ಲ ಕಾರ್ಯಕರ್ತರಿಗೆ ಹೃತ್ಪೂರ್ವಕ ಅಭಿನಂದನೆಗಳು’ ಎಂದು ಆರ್.ಅಶೋಕ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.







