ಉನ್ನತ ಶಿಕ್ಷಣ ಇಲಾಖೆಗೆ ಪೂರ್ಣಾವಧಿಯ ಸಚಿವರನ್ನು ನೇಮಿಸಬೇಕು : ಆರ್.ಅಶೋಕ್

ಬೆಂಗಳೂರು : ‘ಉನ್ನತ ಶಿಕ್ಷಣದ ನಿರ್ಲಕ್ಷ್ಯ ನಿಲ್ಲಿಸಿ, ಇಲ್ಲದಿದ್ದರೆ ಯುವಶಕ್ತಿಯ ಉಗ್ರ ಹೋರಾಟವನ್ನು ಸರಕಾರ ಎದುರಿಸಬೇಕಾಗುತ್ತದೆ’ ಎಂದು ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಎಚ್ಚರಿಕೆ ನೀಡಿದ್ದಾರೆ.
ರವಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಸರಕಾರ ಉನ್ನತ ಶಿಕ್ಷಣ ಇಲಾಖೆಗೆ ಪೂರ್ಣಾವಧಿಯ ಸಚಿವರನ್ನು ನೇಮಿಸಬೇಕು. ಖಾಲಿ ಇರುವ 3,008ಮಂದಿ ಬೋಧಕ ಹುದ್ದೆಗಳ ಭರ್ತಿಗೆ ಸಮಯಬದ್ಧ ನೇಮಕಾತಿ ವೇಳಾಪಟ್ಟಿಯನ್ನು ಪ್ರಕಟಿಸಬೇಕು. ವಿದ್ಯಾರ್ಥಿಗಳಿಗೆ ಟೊಳ್ಳು ಭರವಸೆಗಳು ಬೇಡ. ಪಾಠ ಮಾಡಲು ಬೋಧಕರು ಬೇಕು. ವಿವಿಗಳಿಗೆ ನಿಮ್ಮ ರಾಜಕೀಯ ಭಾಷಣಗಳಲ್ಲ. ತಕ್ಷಣದ ನೇಮಕಾತಿಗಳು ಬೇಕು’ ಎಂದು ಆಗ್ರಹಿಸಿದ್ದಾರೆ.
‘ಉನ್ನತ ಶಿಕ್ಷಣ ಸಚಿವರು ಎಲ್ಲಿದ್ದಾರೆ?. ಸರಕಾರದ ಆದ್ಯತೆಗಳಲ್ಲಿ ನಮ್ಮ ವಿದ್ಯಾರ್ಥಿಗಳಿಗೆ ಸ್ಥಾನವೇ ಇಲ್ಲವೇ?. ಕರ್ನಾಟಕದ ಉನ್ನತ ಶಿಕ್ಷಣ ವ್ಯವಸ್ಥೆ ಇಂದು ಸಂಪೂರ್ಣವಾಗಿ ದಿಕ್ಕು ತಪ್ಪಿ ಕತ್ತಲಿಗೆ ತಳ್ಳಲ್ಪಟ್ಟಿದೆ. ಅದಕ್ಕೆ ಕಾರಣ ಒಂದೇ, ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರಕ್ಕೆ ಉನ್ನತ ಶಿಕ್ಷಣವೇ ಆದ್ಯತೆಯಾಗಿಲ್ಲ’ ಎಂದು ಅವರು ದೂರಿದ್ದಾರೆ.
‘ಹೊಸ ಮುಖ್ಯಮಂತ್ರಿ ಬಂದು ತಿಂಗಳು ಕಳೆಯುತ್ತಾ ಬಂದರೂ, ಇಡೀ ರಾಜ್ಯದ ಮಕ್ಕಳ ಉನ್ನತ ಶಿಕ್ಷಣದ ಭವಿಷ್ಯವನ್ನು ನಿರ್ಧರಿಸುವ ಈ ಇಲಾಖೆಗೆ ಒಬ್ಬ ಪೂರ್ಣಾವಧಿಯ ಉನ್ನತ ಶಿಕ್ಷಣ ಸಚಿವರೇ ಇಲ್ಲ. ಸಚಿವರಿಲ್ಲ, ನೇಮಕಾತಿಯಿಲ್ಲ, ವ್ಯವಸ್ಥೆಗೆ ದಿಕ್ಕಿಲ್ಲ-ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ನಿರಂತರವಾಗಿ ಚೆಲ್ಲಾಟ ಆಡಲಾಗುತ್ತಿದೆ’ ಎಂದು ಅವರು ಆರೋಪಿಸಿದ್ದಾರೆ.
‘ಶೇ.64ರಷ್ಟು ಬೋಧಕ ಹುದ್ದೆಗಳು ಖಾಲಿ-ಇದು ಶಿಕ್ಷಣದ ದುರಂತ. ರಾಜ್ಯದ 32 ಸರಕಾರಿ ವಿವಿಗಳಲ್ಲಿ ಮಂಜೂರಾಗಿರುವ 4,709 ಬೋಧಕ ಹುದ್ದೆಗಳ ಪೈಕಿ ಬರೋಬ್ಬರಿ 3,008 ಹುದ್ದೆಗಳು ಖಾಲಿ ಇವೆ. ಅಂದರೆ ಶೇ.64ರಷ್ಟು ಪ್ರೊಫೆಸರ್‍ಗಳೇ ಇಲ್ಲದ ಮೇಲೆ ಶಿಕ್ಷಣದ ಗುಣಮಟ್ಟದ ಬಗ್ಗೆ ಮಾತನಾಡುವುದು ಕೇವಲ ಮಾತಿನ ರಾಜಕಾರಣವಲ್ಲದೇ ಮತ್ತೇನು?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.
‘ಮಹಾರಾಣಿ ಕ್ಲಸ್ಟರ್ ವಿವಿ-272ಕ್ಕೆ 272 ಹುದ್ದೆಗಳೂ ಖಾಲಿ, ನೃಪತುಂಗ ವಿವಿ-100ಕ್ಕೆ 100 ಹುದ್ದೆಗಳೂ ಖಾಲಿ, ಕರ್ನಾಟಕ ವಿವಿ-422 ಹುದ್ದೆಗಳು ಖಾಲಿ. ಮೈಸೂರು ವಿವಿ-391 ಹುದ್ದೆಗಳು ಖಾಲಿ. ಬೆಂಗಳೂರು ವಿವಿ-245 ಹುದ್ದೆಗಳು ಖಾಲಿ. ಗುಲ್ಬರ್ಗಾ ವಿವಿ-171 ಹುದ್ದೆಗಳು ಖಾಲಿ. ಬೆಂಗಳೂರು ನಗರ ವಿವಿ-151 ಹುದ್ದೆಗಳು ಖಾಲಿ. ಬಜೆಟ್‍ನಲ್ಲಿ 1ಸಾವಿರ ಬೋಧಕ ಹುದ್ದೆಗಳನ್ನು ಹಂತ-ಹಂತವಾಗಿ ಭರ್ತಿ ಮಾಡುವುದಾಗಿ ಸರಕಾರ ಜಾಹೀರಾತು ಮಾಡಿತ್ತು. ಆದರೆ ಇಂದಿಗೂ ನೇಮಕಾತಿ ಪ್ರಕ್ರಿಯೆಯ ಸಣ್ಣ ಸುಳಿವೇ ಇಲ್ಲ’ ಎಂದು ಅವರು ಟೀಕಿಸಿದ್ದಾರೆ.
‘ಸರಕಾರದ ಆದ್ಯತೆಗಳು ಸ್ಪಷ್ಟವಾಗಿವೆ, ಪ್ರಚಾರಕ್ಕೆ ಇವರ ಹತ್ತಿರ ಸಮಯವಿದೆ. ರಾಜಕೀಯ ಮೇಲಾಟಕ್ಕೆ ಸಮಯ ಇದೆ. ಉತ್ಸವ-ಸಮಾರಂಭಗಳಿಗೆ ಬೇಕಾದಷ್ಟು ಸಮಯ ಇದೆ. ಆದರೆ, ನಾಡಿನ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವ ಉನ್ನತ ಶಿಕ್ಷಣಕ್ಕೆ ಮಾತ್ರ ಇವರ ಬಳಿ ಸಚಿವರೂ ಇಲ್ಲ, ಇಚ್ಛಾಶಕ್ತಿಯೂ ಇಲ್ಲ. ಕಾಯಂ ಪ್ರಾಧ್ಯಾಪಕರಿಲ್ಲದೆ ವಿವಿಗಳನ್ನು ಕೇವಲ ಅತಿಥಿ ಉಪನ್ಯಾಸಕರ ಮೇಲೆ ಅವಲಂಬಿತವಾಗುವಂತೆ ಮಾಡಿರುವುದು ಕರ್ನಾಟಕದ ಶೈಕ್ಷಣಿಕ ಇತಿಹಾಸದಲ್ಲೇ ದೊಡ್ಡ ದುರಂತ’ ಎಂದು ಅಶೋಕ್ ಹೇಳಿದ್ದಾರೆ.






