ಕಾಂಗ್ರೆಸ್ನ ಒಳಜಗಳ-ಕುರ್ಚಿ ಕಾಳಗ ಜಗಜ್ಜಾಹೀರು : ಆರ್.ಅಶೋಕ್

ಬೆಂಗಳೂರು : ಕಾಂಗ್ರೆಸ್‍ನ ಬೂದಿ ಮುಚ್ಚಿದ ಕೆಂಡದಂತಿರುವ ಒಳಜಗಳ ಹಾಗೂ ಕುರ್ಚಿ ಕಾಳಗ ಈಗ ಜಗಜ್ಜಾಹೀರು. ‘ಈ.ಡಿ.ಗೆ ದೂರು ಕೊಟ್ಟವರು ನಮ್ಮ ಪಕ್ಷದವರೋ ಅಥವಾ ಬೇರೆಯವರೋ ಎಂದು ಹುಡುಕುತ್ತಿದ್ದೇನೆ, ನನ್ನನ್ನು ರಾಜಕೀಯವಾಗಿ ಕುಗ್ಗಿಸುವ ಹುನ್ನಾರ ಇದಾಗಿದೆ ಎನ್ನುವ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಕಚ್ಚಾಟ ಮತ್ತು ಒಳ ಬೇಗುದಿಯನ್ನ ಬಟಾಬಯಲು ಮಾಡಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಶನಿವಾರ ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಒಂದೆಡೆ ರಾಜ್ಯದ ಜನರ ತೆರಿಗೆ ಹಣವನ್ನು ಲೂಟಿ ಮಾಡಿ ವಿದೇಶಗಳಲ್ಲಿ ಹೂಡಿಕೆ ಮಾಡುವ ಲಂಚಾವತಾರ, ಇನ್ನೊಂದೆಡೆ ಸ್ವಪಕ್ಷದವರನ್ನೆ ತುಳಿದು ಹಾಕಿ ಅಧಿಕಾರ ಹಿಡಿಯಲು ನಿರಂತರ ಕುತಂತ್ರ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ನಾಯಕರು ತಮ್ಮದೆ ಸಹೋದ್ಯೋಗಿಗಳು ಮತ್ತು ಸಚಿವರ ವಿರುದ್ಧ ಈ.ಡಿಗೆ ದೂರು ಕೊಟ್ಟು ಕಾಲೆಳೆಯುವ ಹಂತಕ್ಕೆ ತಲುಪಿದ್ದಾರೆ ಎಂದರೆ, ಇನ್ನು ಈ ಸರಕಾರದಲ್ಲಿ ಆಡಳಿತ ಯಂತ್ರ ಎಷ್ಟು ಪಾತಾಳಕ್ಕೆ ಕುಸಿದುಬಿದ್ದಿದೆ ಎಂಬುದನ್ನ ನೀವೇ ಊಹಿಸಿ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ರಾಜ್ಯದ ಜನತೆಗೆ ನೀಡಿದ ಅಭಿವೃದ್ಧಿಯ ಆಶ್ವಾಸನೆಗಳು ಗಾಳಿಯಲ್ಲಿ ತೂರಿಹೋಗಿವೆ. ಸಚಿವರ ನಡುವಿನ ಈ ಒಳಜಗಳ, ಕಾಲೆಳೆಯುವ ತಂತ್ರಗಳು ಮತ್ತು ಬ್ರಹ್ಮಾಂಡ ಭ್ರಷ್ಟಾಚಾರ ಈಗ ಒಂದೊಂದಾಗಿ ತೆರೆದುಕೊಳ್ಳುತ್ತಿವೆ ಎಂದು ಅಶೋಕ್ ತಿಳಿಸಿದ್ದಾರೆ.
ಸ್ವಪಕ್ಷದವರೆ ನಿಮ್ಮ ಸಚಿವರ ಭ್ರಷ್ಟಾಚಾರದ ಜಾತಕವನ್ನು ತನಿಖಾ ಸಂಸ್ಥೆಗಳಿಗೆ ನೀಡುತ್ತಿದ್ದಾರೆ ಎಂದರೆ ನಿಮ್ಮ ಸರಕಾರದ ನೈತಿಕತೆ ಎಲ್ಲಿಗೆ ಬಂತು? ಜನಹಿತವನ್ನು ಮರೆತು ಕೇವಲ ಅಧಿಕಾರಕ್ಕಾಗಿ, ಲೂಟಿಯ ಪೈಪೋಟಿಗಾಗಿ ಕಿತ್ತಾಡುತ್ತಿರುವ ಈ ಭ್ರಷ್ಟ ಕಾಂಗ್ರೆಸ್ ಸರಕಾರಕ್ಕೆ ರಾಜ್ಯದ ಜನತೆ ತಕ್ಕ ಪಾಠ ಕಲಿಸುವುದು ನಿಶ್ಚಿತ ಎಂದು ಅವರು ಎಚ್ಚರಿಸಿದ್ದಾರೆ.
ಕಾಂಗ್ರೆಸ್‌ನ ಬೂದಿ ಮುಚ್ಚಿದ ಕೆಂಡದಂತಿರುವ ಒಳಜಗಳ ಹಾಗೂ ಕುರ್ಚಿ ಕಾಳಗ ಈಗ ಮತ್ತೊಮ್ಮೆ ಜಗಜ್ಜಾಹೀರು!
— R. Ashoka (@RAshokaBJP) September 12, 2026
"ಇ.ಡಿ (ED) ಗೆ ದೂರು ಕೊಟ್ಟವರು ನಮ್ಮ ಪಕ್ಷದವರೋ ಅಥವಾ ಬೇರೆಯವರೋ ಅಂತ ಹುಡುಕುತ್ತಿದ್ದೇನೆ, ನನ್ನನ್ನು ರಾಜಕೀಯವಾಗಿ ಕುಗ್ಗಿಸುವ ಹುನ್ನಾರ ಇದಾಗಿದೆ" ಎನ್ನುವ ಸಚಿವ @JarkiholiSatish ಅವರ ಹೇಳಿಕೆ @INCKarnataka ಪಕ್ಷದೊಳಗಿನ… pic.twitter.com/pIwP686hK2






