ನಿಷೇಧಿತ ಸ್ಥಳದಲ್ಲಿ ಧರಣಿ ನಡೆಸಿದ ಸಿಎಂ, ಸಚಿವರ ವಿರುದ್ಧ ಎಫ್‍ಐಆರ್ ದಾಖಲಿಸಿ : ಆರ್.ಅಶೋಕ್
ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಕೆ

ಬೆಂಗಳೂರು : ಚುನಾವಣಾ ಆಯೋಗದ ಕಚೇರಿ ಮುಂಭಾಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ ಬಿ.ಕೆ.ಹರಿಪ್ರಸಾದ್ ಮತ್ತು ಸಂಪುಟ ಸಚಿವರು ಧರಣಿ ನಡೆಸಿ ಕಾನೂನು ಉಲ್ಲಂಘಿಸಿದ್ದು, ಅವರುಗಳ ವಿರುದ್ಧ ಕೂಡಲೇ ಎಫ್‍ಐಆರ್ ದಾಖಲಿಸಬೇಕು ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಶುಕ್ರವಾರ ನಗರ ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸಿದ ಬಳಿಕ ಮಾತನಾಡಿದ ಅವರು, ನಗರ ಪೊಲೀಸ್ ಆಯುಕ್ತರನ್ನು ಭೇಟಿ ಮಾಡಿ ಚರ್ಚಿಸಿದ್ದೇನೆ. ರಾಜ್ಯದಲ್ಲಿ ಬರ ಬಂದಿದೆ, ಕುಡಿಯುವ ನೀರಿನ ಸಮಸ್ಯೆ ಇದೆ. ರೈತರ ಕಷ್ಟಕ್ಕೆ ಸ್ಪಂದಿಸುವ ನಿಟ್ಟಿನಲ್ಲಿ ಸಂಪುಟ ಸಭೆ ನಡೆಯಬೇಕಿತ್ತು. ಆದರೆ ಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಸಚಿವರು, ಬಾಂಗ್ಲಾ ಹಾಗೂ ಪಾಕಿಸ್ತಾನಿಗಳ ಮತಗಳನ್ನು ಉಳಿಸಿಕೊಳ್ಳಲು ಸಂಪುಟ ಸಭೆ ರದ್ದುಗೊಳಿಸಿ ಚು.ಆಯೋಗಕ್ಕೆ ಓಡಿ ಬಂದಿದ್ದರು ಎಂದು ಟೀಕಿಸಿದರು.
ಅನಂತರ ಆಚೆ ಬಂದು ಟ್ವಿಟ್ಟರ್ (ಎಕ್ಸ್)ನಲ್ಲಿ ಧರಣಿ ಮಾಡುತ್ತೇವೆಂದು ಘೋಷಣೆ ಮಾಡಿದ್ದರು. ಯಾವ ಕಾನೂನಿನಡಿ ಇಂತಹ ಧರಣಿ ಮಾಡಲಾಗಿದೆ?. ಆ ರಸ್ತೆಯಲ್ಲಿ ಯಾವುದೇ ಧರಣಿ ಮಾಡುವಂತಿಲ್ಲ ಎಂದು ಹೈಕೋರ್ಟ್ ಆದೇಶವಿದೆ. ಮುಖ್ಯ ನ್ಯಾಯಮೂರ್ತಿ ಮನೆ ಅಲ್ಲೇ ಇದೆ. ಕಾನೂನು ಪಾಲಿಸಬೇಕಾದ ಸಿಎಂ ಕಾನೂನು ಉಲ್ಲಂಘಿಸಿದ್ದಾರೆ ಎಂದು ಅವರು ದೂರಿದರು.
ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅಲ್ಲೇ ಇದ್ದರು. ಇವರೇ ಅಲ್ಲಿ ಪ್ರತಿಭಟನೆ ಮಾಡಿದರೆ ಯಾರು, ಎಲ್ಲಿಯಾದರೂ ಪ್ರತಿಭಟನೆ ಮಾಡಬಹುದೇ?. ಇವರೇನೂ ವಿಶೇಷ ವ್ಯಕ್ತಿಗಳಲ್ಲ. ಇವರು ಕಾನೂನು ಪಾಲಿಸಬೇಕು. ಇದು ಗೂಂಡಾ ಸರಕಾರವಾಗಿದ್ದು, ಸಂವಿಧಾನಕ್ಕೆ ಅಪಚಾರವೆಸಗಿದ ಇವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಂದು ಅಶೋಕ್ ಒತ್ತಾಯಿಸಿದರು.
ಒಂದು ಎಫ್‍ಐಆರ್ ಅನ್ನು ಪೊಲೀಸರು ದಾಖಲಿಸಿದ್ದಾರೆ. ಕೋರ್ಟ್ ಆದೇಶದ ಪ್ರಕಾರ ರಸ್ತೆ ಬದಿಯಲ್ಲಿದ್ದವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ ಸಿಎಂ ಹಾಗೂ ಸಚಿವರು ಇಲ್ಲಿ ಧರಣಿ ಮಾಡಿದ್ದಾರೆ. ಇದು ಕಾನೂನು ಕೈಗೆ ತೆಗೆದುಕೊಂಡ ಘಟನೆಯಾಗಿದೆ. ಚು.ಆಯೋಗದ ಮುಂಭಾಗ ನಾಟಕ ಮಾಡಿದ್ದಾರೆ. ಜನರು ಇದನ್ನೇ ಮಾಡಿದರೆ ಪೊಲೀಸರು ಸುಮ್ಮನೆ ಬಿಡುವುದಿಲ್ಲ ಎಂದು ಟೀಕಿಸಿದರು.
ಕಾನೂನುಬದ್ಧ: ಯಾರು ಬೇಕಾದರೂ ನಮೂನೆ-7 ಸಲ್ಲಿಸಬಹುದು. ಆದರೆ ಕಾಂಗ್ರೆಸ್ ನಾಯಕರು ಇದನ್ನೇ ತಪ್ಪು ಎಂದಿದ್ದಾರೆ. ಆಯೋಗ ಎಷ್ಟು ನಮೂನೆ-7 ಸಲ್ಲಿಕೆಯಾಗಿದೆ ಎಂದು ತಿಳಿಸಲಿ. ಇಲ್ಲಿ ಯಾರು ಬೇಕಾದರೂ ಅರ್ಜಿ ಸಲ್ಲಿಸಬಹುದು. ಅದರ ಬಗ್ಗೆ ಆಯೋಗ ತೀರ್ಮಾನ ಕೈಗೊಳ್ಳುತ್ತದೆ. ಅದರಲ್ಲಿ ತಪ್ಪಿದ್ದರೆ ಕೋರ್ಟ್ ಮೊರೆ ಹೋಗಬಹುದೇ ಹೊರತು, ಆಯೋಗದ ಮೇಲೆ ಒತ್ತಡ ಹೇರುವಂತಿಲ್ಲ ಎಂದು ಅವರು ತಿಳಿಸಿದರು.






