ಬಿಜೆಪಿ ವಿರುದ್ಧ ಆಕ್ಷೇಪಾರ್ಹ ಜಾಹೀರಾತು; ರಾಹುಲ್ ಗಾಂಧಿ ಅರ್ಜಿ ಕುರಿತ ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ರಾಹುಲ್ ಗಾಂಧಿ | PC : PTI
ಬೆಂಗಳೂರು : ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ರಾಜ್ಯದ ಪ್ರಮುಖ ದಿನಪತ್ರಿಕೆಗಳ ಮುಖಪುಟದಲ್ಲಿ ಅಂದಿನ ಬಿಜೆಪಿ ಸರಕಾರದ ವಿರುದ್ಧ ಸರಣಿ ಆರೋಪಗಳನ್ನು ಮಾಡಿ ಕಾಂಗ್ರೆಸ್ ಪಕ್ಷ ನೀಡಿದ್ದ ಜಾಹೀರಾತನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಆರೋಪದಲ್ಲಿ ದಾಖಲಾಗಿರುವ ಮಾನಹಾನಿ ಪ್ರಕರಣ ರದ್ದು ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿರುವ ಅರ್ಜಿ ಕುರಿತ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದೆ.
ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಲ್ಲಿಸಿರುವ ಅರ್ಜಿ ಕುರಿತು ಗುರುವಾರ ವಾದ-ಪ್ರತಿವಾದ ಆಲಿಸಿ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿ ಎಸ್. ಸುನೀಲ್ ದತ್ ಯಾದವ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ತೀರ್ಪು ಕಾಯ್ದಿರಿಸಿತು.
ಬಿಜೆಪಿ ವಾದವೇನು?
ವಿಚಾರಣೆ ವೇಳೆ ಬಿಜೆಪಿ ಪರ ವಕೀಲ ಎಂ. ವಿನೋದ್ ಕುಮಾರ್ ವಾದ ಮಂಡಿಸಿ, ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಹೊರಡಿಸಿರುವ ತಾರಾ ಪ್ರಚಾರಕರ ಪಟ್ಟಿಯಲ್ಲಿ ರಾಹುಲ್ ಗಾಂಧಿ ಅವರ ಹೆಸರಿತ್ತು. ಆಕ್ಷೇಪಾರ್ಹ ಜಾಹೀರಾತಿಗೂ ರಾಹುಲ್ ಗಾಂಧಿಗೂ ಸಂಬಂಧವಿದೆಯೇ ಎಂಬುದು ವಿಚಾರಣೆಯಲ್ಲಿ ನಿರ್ಧಾರವಾಗಬೇಕಿದೆ. ಜಾಹೀರಾತು ಓದಿದ ಯಾರಿಗಾದರೂ ಅದು ಬಿಜೆಪಿ ವಿರುದ್ಧವೇ ನೀಡಿರುವುದು ಎಂದರ್ಥವಾಗುತ್ತದೆ ಎಂದು ಪ್ರತಿಪಾದಿಸಿದರು.
ಆಗ ನ್ಯಾಯಪೀಠ, ಅರ್ಜಿದಾರರು ಮಾಡಿದ್ದಾರೆನ್ನಲಾದ ರೀಟ್ವೀಟ್ ಅನ್ನು ಮಾರ್ಕ್ ಮಾಡಿಲ್ಲ ಎಂಬುದು ನಿಜವೇ? ಎಂದು ಕೇಳಿತು. ಅದಕ್ಕೆ ವಿನೋದ್ ಕುಮಾರ್ ಅವರು, ರೀಟ್ವೀಟ್ ಮಾಡಿರುವುದು ಕಡತದಲ್ಲಿದೆ. ಇದನ್ನು ವಿಚಾರಣೆಯ ಸಂದರ್ಭದಲ್ಲಿ ಸಲ್ಲಿಸುವುದಕ್ಕೂ ಕಾನೂನಿನಲ್ಲಿ ಅವಕಾಶವಿದೆ. ಅಪರಾಧ ದಂಡಪ್ರಕ್ರಿಯಾ ಸಂಹಿತೆ (ಸಿಆರ್ಪಿಸಿ) ಸೆಕ್ಷನ್ 91ರ ಅಡಿ ಟ್ವಿಟರ್ನಿಂದ ಕೆಲವು ದಾಖಲೆಗಳನ್ನು ತರಿಸಿಕೊಳ್ಳಬಹುದು ಮತ್ತು ಮಾರ್ಕ್ ಮಾಡಬಹುದು. ರಾಹುಲ್ ಅರ್ಜಿಯಲ್ಲಿ ರೀಟ್ವೀಟ್ ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ. ಆದರೆ, ಅದು ಅಪರಾಧವಲ್ಲ ಎನ್ನುತ್ತಿದ್ದಾರೆ. ಇದು ವಿಚಾರಣೆಯಲ್ಲಿ ಸಾಬೀತುಪಡಿಸಬೇಕಿದೆಯಷ್ಟೆ ಎಂದರು.
ಮುಂದುವರಿದು, ಪತ್ರಿಕೆಗಳಲ್ಲಿ ಪ್ರಕಟವಾಗಿರುವ ಜಾಹೀರಾತನ್ನು ರೀಟ್ವೀಟ್ ಮಾಡಲಾಗಿದೆ ಎಂದು ರಾಹುಲ್ ಹೇಳಿದ್ದಾರೆ. ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಮಾನಹಾನಿ ಮಾಡುವುದೂ ಅಪರಾಧ. ಪ್ರಕರಣದ ಕಾಗ್ನೈಜೆನ್ಸ್ ತೆಗೆದುಕೊಳ್ಳುವಾಗ ವಿಚಾರಣಾ ನ್ಯಾಯಾಲಯವು ಮೇಲ್ನೋಟಕ್ಕೆ ಪ್ರಕರಣ ಇದೆ ಎಂದು ಪರಿಶೀಲಿಸಿ, ಸಮನ್ಸ್ ಜಾರಿ ಮಾಡಿದೆ. ಆಗ ನ್ಯಾಯಾಲಯವು ವಿವೇಚನ ಬಳಸಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಸ್ವತಂತ್ರ ಸಾಕ್ಷಿಯೂ ಸೇರಿ ಐವರ ಹೇಳಿಕೆಯನ್ನು ನ್ಯಾಯಾಲಯ ದಾಖಲಿಸಿಕೊಂಡಿದೆ. ಈ ಹೇಳಿಕೆಗಳು ಮತ್ತು ಲಭ್ಯವಿರುವ ದಾಖಲೆಗಳನ್ನು ಆಧರಿಸಿ ನ್ಯಾಯಾಲಯ ಮೇಲ್ನೋಟಕ್ಕೆ ಕಾಗ್ನೈಜೆನ್ಸ್ ತೆಗೆದುಕೊಂಡಿದೆ. ಪತ್ರಿಕೆ ಖರೀದಿಸಿದವರು ಮಾತ್ರ ಜಾಹೀರಾತು ನೋಡಬಹುದು. ಆದರೆ, ಅದನ್ನು ಟ್ವೀಟ್ ಮಾಡಲಾಗಿರುವ ಎಕ್ಸ್ನಲ್ಲಿ ಪ್ರತಿದಿನವೂ ನೋಡಬಹುದು ಅಥವಾ ಹಂಚಿಕೊಳ್ಳಬಹುದು. ಪತ್ರಿಕೆ ಬರುವ ವೇಳೆಗೆ ರಾಹುಲ್ ಗಾಂಧಿ ಅವರು ಆಕ್ಷೇಪಾರ್ಹ ಜಾಹೀರಾತನ್ನು ಟ್ವೀಟ್ ಮಾಡಿದ್ದಾರೆ. ಆದ್ದರಿಂದ, ಅದು ಮೊದಲೇ ಸಾರ್ವಜನಿಕಗೊಂಡಿತ್ತು ಎಂದು ಹೇಳಲಾಗದು ಎಂದು ಆಕ್ಷೇಪಿಸಿದರು.
ಸರಕಾರವನ್ನು ಟೀಕಿಸಲಾಗಿದೆ, ಯಾವುದೇ ಪಕ್ಷವನ್ನಲ್ಲ:
ರಾಹುಲ್ ಗಾಂಧಿ ಪರ ವಾದ ಮಂಡಿಸಿದ ಹಿರಿಯ ವಕೀಲ ಕೆ. ಶಶಿಕಿರಣ್ ಶೆಟ್ಟಿ ಅವರು, ರಾಹುಲ್ ರೀಟ್ವೀಟ್ ಮಾಡಿರುವುದಕ್ಕೆ ಯಾವುದೇ ದಾಖಲೆಯನ್ನು ಬಿಜೆಪಿ ಸಲ್ಲಿಸಿಲ್ಲ. ಅದನ್ನು ಎಷ್ಟು ಜನ ನೋಡಿದ್ದಾರೆ ಮತ್ತು ಅದರಿಂದ ಮಾನಹಾನಿಯಾಗಿದೆಯೇ ಎಂಬುದಕ್ಕೆ ಯಾವುದೇ ಮಾಹಿತಿ ಇಲ್ಲ. ತಾರಾ ಪ್ರಚಾರಕರ ಪಟ್ಟಿಯಲ್ಲಿ 40 ಮಂದಿ ಇದ್ದರು ಎಂದು ಹೇಳುವ ಬಿಜೆಪಿಯು ಅವರನ್ನೆಲ್ಲ ದಾವೆಯಲ್ಲಿ ಪ್ರತಿವಾದಿಗಳನ್ನಾಗಿ ಏಕೆ ಮಾಡಿಲ್ಲ? ರಾಹುಲ್ ಗಾಂಧಿ ಅವರು ಉಪಾಧ್ಯಕ್ಷರಾಗಿದ್ದಾರೆ ಎಂಬುದರ ಮೇಲೆ ಇಡೀ ದೂರು ನಿಂತಿದೆ. ಆದರೆ, ಆ ಸಂದರ್ಭದಲ್ಲಿ ರಾಹುಲ್ ಉಪಾಧ್ಯಕ್ಷರಾಗಿರಲೇ ಇಲ್ಲ ಎಂದರು.
ರೀಟ್ವೀಟ್ ಮಾಡುವುದು ಮಾನಹಾನಿಯಾಗುತ್ತದೆಯೇ ಎಂಬ ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ಬಾಕಿ ಇದೆ. ಹಾಲಿ ಪ್ರಕರಣದಲ್ಲಿ ರಾಹುಲ್ ಅವರು ರೀಟ್ವೀಟ್ ಮಾಡಿಲ್ಲ. ಜಾಹೀರಾತಿನಲ್ಲಿ ಬಿಜೆಪಿಯ ಹೆಸರನ್ನೇ ಉಲ್ಲೇಖಿಸಿಲ್ಲ. ಅಂದಿನ ರಾಜ್ಯ ಸರ್ಕಾರವನ್ನು ಅದರಲ್ಲಿ ಉಲ್ಲೇಖಿಸಲಾಗಿದೆ. ಮುಖ್ಯಮಂತ್ರಿ, ಮಂತ್ರಿ ಆಗಿ ಹೋಗುತ್ತಾರೆ. ಆದರೆ, ಸರ್ಕಾರ ಯಾವಾಗಲೂ ಇರುತ್ತದೆ. ಸರ್ಕಾರವನ್ನು ವಿರೋಧಿಸಿದ ಮಾತ್ರಕ್ಕೆ ರಾಜಕೀಯ ಪಕ್ಷವೊಂದು ದಾವೆ ಹೂಡಲಾಗದು. ಹೀಗಾದಲ್ಲಿ ಸರ್ಕಾರದ ವಿರುದ್ಧ ಟೀಕೆ ಮಾಡುವುದೇ ಅಪರಾಧವಾಗಲಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.







