ರೈಲ್ವೆ ನಿಲ್ದಾಣಗಳಲ್ಲಿನ ಹೊಟೇಲ್, ಕ್ಯಾಂಟೀನ್‍ಗಳ ಮೇಲೆ ದಾಳಿ: ಹಲವೆಡೆ ಕಳಪೆ ಪದಾರ್ಥಗಳು ಪತ್ತೆ

ಬೆಂಗಳೂರು : ರಾಜ್ಯಾದ್ಯಂತ ರೈಲ್ವೆ ನಿಲ್ದಾಣಗಳ ಆವರಣದಲ್ಲಿನ ಹೊಟೇಲ್‍ಗಳು, ಕ್ಯಾಂಟೀನ್‍ಗಳು ಹಾಗೂ ಇತರೇ ಆಹಾರ ಉದ್ದಿಮೆಗಳಲ್ಲಿ ಗುರುವಾರ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ರಾಜ್ಯದ ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಅಂಕಿತಾಧಿಕಾರಿಗಳು ತಮ್ಮ ವ್ಯಾಪ್ತಿಗೆ ಒಳಪಡುವ ರೈಲ್ವೆ ನಿಲ್ದಾಣಗಳಿಗೆ ಪರಿಶೀಲನಾ ಭೇಟಿ ನೀಡಿ, ರೈಲ್ವೆ ನಿಲ್ದಾಣಗಳ ಆವರಣದಲ್ಲಿರುವ ಹೊಟೇಲ್‍ಗಳು ಕ್ಯಾಂಟೀನ್‍ಗಳು, ಆಹಾರ ಮಳಿಗೆಗಳು, ಪ್ಯಾಂಟ್ರಿ ಕಾರ್ ಗಳು, ಆಹಾರ ತಯಾರಿಕಾ ಘಟಕಗಳು ಹಾಗೂ ಇತರೆ ಆಹಾರ ಉದ್ದಿಮೆಗಳಿಗೆ ವಿಶೇಷ ತಪಾಸಣಾ ಕಾರ್ಯಾಚರಣೆಯನ್ನು ನಡೆಸಲಾಗಿದೆ.
ಬೆಂಗಳೂರಿನ ಕೆಎಸ್‍ಆರ್, ಯಶವಂತಪುರ, ಕೆ.ಆರ್.ಪುರಂ, ಯಲಹಂಕ, ಕೋಲಾರ, ಮೈಸೂರು, ಕಾರವಾರ, ಯಾದಗಿರಿ, ಬೀರೂರು, ಕಡೂರು ಜಂಕ್ಷನ್, ಬಳ್ಳಾರಿ, ಹೊಸಪೇಟೆ, ಹುಬ್ಬಳ್ಳಿ, ಹಾವೇರಿ, ಉಡುಪಿ, ಕೊಪ್ಪಳ, ಗದಗ, ದಾವಣಗೆರೆ, ಬಾಗಲಕೋಟೆ ಹಾಗೂ ಮಂಗಳೂರು ಸೇರಿದಂತೆ ಒಟ್ಟು 36 ರೈಲ್ವೆ ನಿಲ್ದಾಣಗಳಲ್ಲಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿ, 112 ಆಹಾರ ಉದ್ದಿಮೆಗಳನ್ನು ತಪಾಸಣೆ ಮಾಡಲಾಗಿದೆ.
ಕೆ.ಆರ್.ಪುರಂ ನಿಲ್ದಾಣದ ಆವರಣದಲ್ಲಿರುವ ಹೋಟೆಲ್‍ನ ಆಹಾರ ಉದ್ದಿಮೆಯಲ್ಲಿ ಅನೈರ್ಮಲ್ಯ ವಾತಾವರಣ ಕಂಡುಬಂದಿದೆ. ಮೈಸೂರು ರೈಲ್ವೆ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಶೀಟ್ ಅಥವಾ ವಸ್ತುಗಳನ್ನು ಬಳಸಿ ಇಡ್ಲಿ ತಯಾರಿಸುತ್ತಿರುವುದು ಕಂಡುಬಂದಿದೆ. ಅಡುಗೆಮನೆಯಲ್ಲಿ ಅವಧಿ ಮೀರಿದ ಆಹಾರ ಪದಾರ್ಥಗಳು, ಫಂಗಸ್ ಬೆಳೆದ ಈರುಳ್ಳಿ ಮತ್ತು ತರಕಾರಿಗಳು ಹಾಗೂ ಆಹಾರ ಸಂಗ್ರಹಣೆಗೆ ಸೂಕ್ತವಲ್ಲದ ಪ್ಲಾಸ್ಟಿಕ್ ಬಕೆಟ್‍ಗಳಲ್ಲಿ ಚಟ್ನಿ ಸಂಗ್ರಹಿಸಿಟ್ಟಿರುವುದು ಬೆಳಕಿಗೆ ಬಂದಿದೆ. ಹಾವೇರಿ ಜಿಲ್ಲೆಯ ರೈಲು ನಿಲ್ದಾಣದಲ್ಲಿ ಅವಧಿ ಮೀರಿದ ನಂದಿನಿ ಮೊಸರು ಮತ್ತು ದೊಡ್ಲಾ ಹಾಲಿನ ಪ್ಯಾಕೆಟ್‍ಗಳು ಪತ್ತೆಯಾಗಿವೆ.
ಆಹಾರ ಉತ್ಪನ್ನಗಳಲ್ಲಿ ಅನುಮತಿಯಿಲ್ಲದ ಕೃತಕ ಬಣ್ಣಗಳ ಬಳಕೆ ಕಂಡು ಬಂದಿದ್ದು, ಜಿಲೇಬಿಯಲ್ಲಿ ಹಳದಿ ಬಣ್ಣವನ್ನು ಮತ್ತು ಖೋವಾ ಪೇಡಾದಲ್ಲಿ ಗುಲಾಬಿ ಬಣ್ಣವನ್ನು ಬಳಸಿರುವುದು ಕಂಡುಬಂದಿದೆ. ಮಂಗಳೂರು-ಕೇರಳ-ಮತ್ತು ಹುಬ್ಬಳ್ಳಿ-ಬೆಂಗಳೂರು ನಡುವಿನ ವಂದೇ ಭಾರತ್ ರೈಲಿನಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಯ್ದುಕೊಳ್ಳಲಾಗಿದೆ. ನಿಯಮ ಉಲ್ಲಂಘಿಸಿದ ಆಹಾರ ಉದ್ದಿಮೆದಾರರಿಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲು ರೈಲ್ವೆ ಅಧಿಕಾರಿಗಳಿಗೆ ತಿಳಿಸಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಆಯುಕ್ತ ಶ್ರೀನಿವಾಸ್ ತಿಳಿಸಿದ್ದಾರೆ.






