ರಾಜಧಾನಿ ಬೆಂಗಳೂರಿನಲ್ಲಿ ಧಾರಕಾರ ಮಳೆ, ಜನಜೀವನ ಅಸ್ತವ್ಯಸ್ತ

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶನಿವಾರ ಸಂಜೆ ಸುರಿದ ಭಾರಿ ಮಳೆಯಿಂದಾಗಿ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಇನ್ನೊಂದೆಡೆ, ಹಲವು ಭಾಗಗಳ ರಸ್ತೆಗಳಲ್ಲಿ ನೀರು ನಿಂತಿದ್ದು ವಾಹನ ಸಂಚಾರಕ್ಕೆ ತೊಂದರೆ ಉಂಟಾಯಿತು.
ಇಲ್ಲಿನ ಕಾರ್ಪೊರೇಷನ್, ನಾಗಸಂದ್ರ, ಕೆಂಗೇರಿ, ಜಯನಗರ, ಬನಶಂಕರಿ, ಜೆಪಿ ನಗರ, ಮಾನ್ಯತಾ ಟೆಕ್ ಪಾರ್ಕ್ ಮತ್ತು ನಗರದ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗಿದ್ದು, ರಸ್ತೆಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತಿತ್ತು. ಇದರ ಪರಿಣಾಮ ಸಂಚಾರ ದಟ್ಟಣೆ ಉಂಟಾಗಿ ಸಾಲು ಸಾಲಾಗಿ ವಾಹನಗಳು ರಸ್ತೆಯಲ್ಲಿದ್ದ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಅದರಲ್ಲೂ ಕೆಆರ್ ವೃತ್ತದ ಕೆಳ ಸೇತುವೆಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ನಿಂತಿದ್ದ ಕಾರಣ ಸಂಚಾರ ರಸ್ತೆಯನ್ನೆ ನಿಲ್ಲಿಸಲಾಗಿತ್ತು. ಜತೆಗೆ, ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳಿಗೆ ತಡೆ ಹಾಕಿದರು.ಇತ್ತ ಬೊಮ್ಮನಹಳ್ಳಿ ಬಸ್ ನಿಲ್ದಾಣ ಹಾಗೂ ಎಂಎಸ್ ಪಾಳ್ಯ ಜಂಕ್ಷನ್‍ಗಳಲ್ಲಿ ಬಸ್ಸುಗಳು ಕೆಟ್ಟು ನಿಂತಿದ್ದ ಕಾರಣ ಸಂಚಾರ ದಟ್ಟಣೆ ಕಂಡಿತು.
ಇನ್ನೊಂದೆಡೆ ಮರಗಳ ಕೊಂಬೆಗಳು, ಮರಗಳು ರಸ್ತೆ, ವಿದ್ಯುತ್ ತಂತಿ ಮೇಲೆ ಬಿದ್ದಿದ್ದು, ವಿದ್ಯುತ್ ವ್ಯತ್ಯಯಕ್ಕೆ ಕಾರಣವಾಯಿತು. ಮೂರು ದಿನಗಳಿಂದ ಭಾರೀ ಮೋಡ ಕವಿದ ವಾತಾವರಣ ಇತ್ತು. ಆದರೆ ಅಲ್ಲಲ್ಲಿ ಹನಿ ಮಳೆ ಸುರಿಯುತ್ತಿತ್ತೇ ಹೊರತು ಸರಿಯಾದ ಮಳೆಯಾಗುತ್ತಿರಲಿಲ್ಲ. ಇದೀಗ ಶನಿವಾರ ಕೊನೆಗೂ ವರ್ಷಧಾರೆ ಸುರಿದಿದ್ದು, ನಗರದ ತಾಪಮಾನ ಏಕಾಏಕಿ ಕುಸಿತ ಕಂಡಿದೆ.







