ಬೆಂಗಳೂರಿನಲ್ಲಿ ಮಳೆಯಿಂದಾಗಿ ಅವಾಂತರ ಸೃಷ್ಟಿ; ರಸ್ತೆಗಳು ಜಲಾವೃತ

ಬೆಂಗಳೂರು : ಮಂಗಳವಾರ ಸಂಜೆ ನಗರದಲ್ಲಿ ಹಲವೆಡೆ ಬಿರುಗಾಳಿ, ಆಲಿಕಲ್ಲು ಸಹಿತ ಮಳೆಯಾಗಿದ್ದು, ವಿವಿಧೆಡೆ ಮರಗಳ ಕೊಂಬೆ ಉರುಳಿ ಬಿದ್ದು ಹಲವು ಅವಾಂತರಗಳು ಸೃಷ್ಟಿಯಾಗಿತ್ತು. ರಸ್ತೆಗಳು ಮಳೆ ನೀರಿನಿಂದ ಜಲಾವೃತಗೊಂಡಿತ್ತು.
ನಗರದ ಹೃದಯ ಭಾಗ ಮೆಜೆಸ್ಟಿಕ್, ಮಲ್ಲೇಶ್ವರಂ, ರಾಜಾಜಿನಗರ, ಯಶವಂತಪುರ, ರೇಸ್ ಕೋರ್ಸ್, ಆನಂದ್ ರಾವ್ ಸರ್ಕಲ್, ಮೈತ್ರಿ ಸರ್ಕಲ್, ವಿಧಾನಸೌಧ, ಶಿವಾನಂದ ಸರ್ಕಲ್, ಕೆಆರ್ ಸರ್ಕಲ್ ಸುತ್ತಮುತ್ತ ಮಳೆಯಾಗುತ್ತಿದೆ. ಮಳೆ ಹಿನ್ನೆಲೆ ಪ್ರಮುಖ ವೃತ್ತಗಳಲ್ಲಿ ವಾಹನ ದಟ್ಟನೆ ಉಂಟಾಗಿತ್ತು.
ರಸ್ತೆಯು ಜಲಾವೃತಗೊಂಡ ಪರಿಣಾಮ ಬಿಎಂಟಿಸಿ ಬಸ್‍ನ ಒಳಭಾಗಕ್ಕೆ ಮಳೆ ನೀರು ನುಗ್ಗಿದ್ದ ದೃಶ್ಯಗಳು ಕಂಡು ಬಂದವು. ನಗರದ ಬಾಣಸವಾಡಿ, ಕಲ್ಯಾಣನಗರದಲ್ಲಿ ಬಿರುಗಾಳಿಯ ರಭಸಕ್ಕೆ ಮನೆಯ ಟೆರಸ್ ಮೇಲಿನ ಗಾರ್ಡನ್ ಚೆಲ್ಲಾಪಿಲ್ಲಿಯಾಗಿತ್ತು.
ಮಾನತ್ಯಾ ಟೆಕ್ ಪಾರ್ಕ್‍ನಲ್ಲಿ ಜೋರು ಮಳೆಯಾಗಿದ್ದು, ರಸ್ತೆಯಲ್ಲಿ ನೀರು ನಿಂತ ಪರಿಣಾಮ ಕಿಲೋ ಮೀಟರ್ ವರೆಗೆ ವಾಹನ ದಟ್ಟನೆ ಕಂಡು ಬಂದಿತು. ಮಾನ್ಯತಾ ಟೆಕ್ ಪಾರ್ಕ್ ಒಳಭಾಗದ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು.
ನಗರದ ಕೆಲ ಭಾಗಗಳಲ್ಲಿ ಬೃಹತ್ ಮರಗಳು ಧರೆಗುರುಳಿದ್ದವು. ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆ ಮರ ಬಿದ್ದು ವಾಹನಗಳು ಜಖಂ ಆಗಿರುವುದು ಕಂಡು ಬಂದಿತು. ವಿಂಡ್ಸನ್ ಮ್ಯಾನರ್ ಅಂಡರ್ ಪಾಸ್‍ನಿಂದ ಅರಮನೆ ಮೈದಾನ ಕಡೆ ಹೋಗುವ ಮಾರ್ಗದಲ್ಲೂ ಮರದ ಕೊಂಬೆ ಮುರಿದು ಬಿದ್ದಿತ್ತು.







