ಪರಿಸರ ಪ್ರೇಮವನ್ನು ಜಾಗೃತಗೊಳಿಸದ ಹೊರತು ನಮ್ಮ ನಾಳೆಗಳನ್ನು ಸುಂದರಗೊಳಿಸಲು ಸಾಧ್ಯವಿಲ್ಲ : ಡಾ.ಭಗವಾನ್ ಬಿ.ಸಿ.

ಬೆಂಗಳೂರು : ಈ ವರ್ಷದ ವಿಶ್ವ ಪರಿಸರ ದಿನದ ಪ್ರಯುಕ ‘One Sapling for One studentʼ ಎಂಬ ಅರ್ಥಪೂರ್ಣ ಅಭಿಯಾನವನ್ನು ಆರಂಭಿಸಿದ್ದೇವೆ. ಪ್ರತಿಯೊಬ್ಬ ವಿದ್ಯಾರ್ಥಿಯು ಕನಿಷ್ಠ ಒಂದು ಸಸಿ ನೆಟ್ಟು ಅದರ ಪೋಷಣೆ ಮತ್ತು ಸಂರಕ್ಷಣೆಯ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕು ಎಂದು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಭಗವಾನ್ ಬಿ.ಸಿ. ಹೇಳಿದರು.
ರಾಜೀವ್ ಗಾಂಧಿ ವಿವಿ ಮತ್ತು ರೋಟರಿ ಬೆಂಗಳೂರು ಸಮೃದ್ಧಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ವಿಶ್ವ ಪರಿಸರ ದಿನಾಚರಣೆ - 2026” ವಾಕಥಾನ್ ನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ಶಿಕ್ಷಣದ ಜೊತೆಗೆ ಸಾಮಾಜಿಕ ಜವಾಬ್ದಾರಿ, ಆರೋಗ್ಯಕರ ಜೀವನಶೈಲಿ ಮತ್ತು ಪರಿಸರ ಸುಸ್ಥಿರತೆಗೆ ವಿಶೇಷ ಆದ್ಯತೆ ನೀಡುತ್ತಿದೆ. ಹಸಿರು ಉಪಕ್ರಮಗಳು, ತ್ಯಾಜ್ಯ ನಿರ್ವಹಣೆ, ಪರಿಸರ ಸ್ನೇಹಿ ಮೂಲಸೌಕರ್ಯಗಳ ನಿರ್ಮಾಣ ಹಾಗೂ ಹವಾಮಾನ ಜವಾಬ್ದಾರಿಯಂತಹ ಕಾರ್ಯಕ್ರಮಗಳ ಮೂಲಕ ಸುಸ್ಥಿರ ಭವಿಷ್ಯದತ್ತ ಹೆಜ್ಜೆ ಇಡುತ್ತಿದೆ ಎಂದು ತಿಳಿಸಿದ್ದಾರೆ.
ವಿಶ್ವವು ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ, ನೀರಿನ ಕೊರತೆ ಹಾಗೂ ಮಾಲಿನ್ಯದಂತಹ ಗಂಭೀರ ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಒಬ್ಬ ವಿದ್ಯಾರ್ಥಿ ಒಂದು ಸಸಿ ನೆಡುವ ಇಂತಹ ಕಾರ್ಯಕ್ರಮ ಅತ್ಯಗತ್ಯ ಮತ್ತು ಅತ್ಯುಪಯುಕ್ತ ಎಂದು ಅವರು ಹೇಳಿದರು.
ನಮ್ಮ ಅಸ್ತಿತ್ವದ ಆಧಾರವಾಗಿರುವ ಪ್ರಕೃತಿಯನ್ನು ಅನುದಿನವೂ ಪ್ರೀತಿಸುವ-ಪೂಜಿಸುವ-ಆರಾಧಿಸುವ ಪರಂಪರೆಯನ್ನು ನಾವು ಬೆಳೆಸಬೇಕು. ನಮ್ಮ ಮಕ್ಕಳಿಗೂ-ವಿದ್ಯಾರ್ಥಿಗಳಿಗೂ ಅದನ್ನು ಕಲಿಸಬೇಕು. ಪರಿಸರ ಪ್ರೇಮವನ್ನು ಜಾಗೃತಗೊಳಿಸದ ಹೊರತು ನಮ್ಮ ನಾಳೆಗಳನ್ನು ನಾವು ಸುಂದರಗೊಳಿಸಲು ಸಾಧ್ಯವಿಲ್ಲ. ಅಭಿವೃದ್ಧಿ, ತಂತ್ರಜ್ಞಾನ ಮತ್ತು ಆಧುನಿಕತೆಯತ್ತ ಶರವೇಗದಲ್ಲಿ ಸಾಗುತ್ತಿರುವ ನಾವು ಪ್ರಕೃತಿಯೊಂದಿಗೆ ಬಾಂಧವ್ಯವನ್ನು ಮರೆಯುತ್ತಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ಪರಿಸರ ಸಂರಕ್ಷಣೆ ಕೇವಲ ಸರ್ಕಾರ ಅಥವಾ ಕೆಲವು ಸಂಸ್ಥೆಗಳ ಜವಾಬ್ದಾರಿಯಲ್ಲ. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಒಂದು ಮರ ನೆಡುವುದು, ನೀರನ್ನು ಮಿತವಾಗಿ ಬಳಸುವುದು, ತ್ಯಾಜ್ಯವನ್ನು ಸರಿಯಾಗಿ ವಿಂಗಡಿಸುವುದು, ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವುದು ಇಂತಹ ಸಣ್ಣ ಪ್ರಯತ್ನಗಳೇ ದೊಡ್ಡ ಬದಲಾವಣೆಗೆ ಕಾರಣವಾಗುತ್ತವೆ ಎಂದರು.
ಬೆಂಗಳೂರು ಉಪ ಪೊಲೀಸ್ ಆಯುಕ್ತರಾದ (ದಕ್ಷಿಣ ವಿಭಾಗ) ಡಾ. ಕೋನಾ ವಂಸಿ ಕೃಷ್ಣ ಮಾತನಾಡಿ, ಇದು ಕೇವಲ ಒಂದು ದಿನದ ಆಚರಣೆಯಾಗಬಾರದು. ಇದು ಮನಸ್ಸಿನಿಂದ ಬರಬೇಕು. ಪರಿಸರವನ್ನು ಪ್ರೀತಿಸುವ, ಬೆಳೆಸುವ ಹಾಗೂ ಕಾಪಾಡುವ ಕೆಲಸ ಮನೆಯಿಂದ ಆರಂಭವಾಗಬೇಕು. ಇದು ಕೇವಲ ಕಾಯ್ದೆ-ಕಾನೂನುಗಳಿಂದ ಆಗುವುದಿಲ್ಲ. ಪ್ರತಿಯೊಬ್ಬರ ಸಹಭಾಗಿತ್ವದಿಂದ ಮಾತ್ರ ಇದು ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು.
ರೋ. ನಾಗೇಂದ್ರ ಪ್ರಸಾದ್ ಬಿ. ಎಲ್. ಮಾತನಾಡಿದರು. ಕುಲಸಚಿವರಾದ (ಮೌಲ್ಯಮಾಪನ) ಡಾ. ರಿಯಾಜ್ ಭಾಷ ಎಸ್., ಹಣಕಾಸು ಅಧಿಕಾರಿ ಬಿ.ಕೆ. ಗಂಗಾಧರ ಇತರರು ಉಪಸ್ಥಿತರಿದ್ದರು.
ಲಾಲ್ ಬಾಗ್ ಪಶ್ಚಿಮ ದ್ವಾರದಿಂದ ಪ್ರಾರಂಭವಾದ ವಾಕಥಾನ್, ಆರ್.ವಿ. ಶಿಕ್ಷಕರ ಕಾಲೇಜು, ಅಶೋಕ ಪಿಲ್ಲರ್ ವೃತ್ತ, ಸಿದ್ದಾಪುರ ರಸ್ತೆ, ಸಿದ್ದಾಪುರ ವೃತ್ತ, ಮರಿಗೌಡ ರಸ್ತೆ, ಕೆ.ಎಚ್. ವೃತ್ತದ ಮೂಲಕ ಹಾಯ್ದು, ಲಾಲ್ ಬಾಗ್ ಕೆಂಪೇಗೌಡ ಗೋಪುರದ ಹತ್ತಿರ ಸೇರಿತು.
ವಿವಿದ ಸಂದೇಶ ಸಾರುವ ಭಿತ್ತಿಪತ್ರಗಳನ್ನು ಹಿಡಿದ ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ರಸ್ತೆಯುದ್ದಕ್ಕೂ ಘೋಷಣೆ ಕೂಗುತ್ತ ಸಾಗಿದರು. ಲಾಲ್‌ಬಾಗ್ ಕೆಂಪೇಗೌಡ ಗೋಪುರದ ಬಳಿ ಸಸಿಗಳೊಂದಿಗೆ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.





















