ನವೆಂಬರ್ ಕ್ರಾಂತಿಯಿಲ್ಲ, ಶಾಂತಿ : ರಾಮಲಿಂಗಾರೆಡ್ಡಿ

ಬೆಂಗಳೂರು : ನವೆಂಬರ್ ಕ್ರಾಂತಿ ಇಲ್ಲ, ಬರೀ ಶಾಂತಿ. ರಾಜಕೀಯ ಬದಲಾವಣೆ ಕುರಿತು ಮಾಹಿತಿ ಬೇಕಿದ್ದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನೆ ಕೇಳಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರು ಹೊಸದಿಲ್ಲಿಗೆ ಹೋಗಿದ್ದಾರೆ, ಕಾರಣವೇನು ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ಮಾಹಿತಿ ಬೇಕಾದರೆ ದೆಹಲಿಯಲ್ಲಿ ಏನೇನು ಆಗಿದ್ಯೋ ನಮಗೆ ಗೊತ್ತಿಲ್ಲ. ನಿಮಗೆ ಸಂಪೂರ್ಣ ಮಾಹಿತಿ ಬೇಕಾದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನೆ ಕೇಳಿ ಎಂದು ತಿಳಿಸಿದರು.
ನಮ್ಮಲ್ಲಿ ಬಿಜೆಪಿಯಲ್ಲಿದ್ದಷ್ಟು ಬಣ ಇಲ್ಲ, ಬಿಜೆಪಿಯಲ್ಲಿ ನಾಲ್ಕೈದು ಬಣ ಇದೆ. ನಮ್ಮಲ್ಲಿ ಒಂದೇ ಬಣ ಕಾಂಗ್ರೆಸ್ ಬಣ. ನಮ್ಮಲ್ಲಿ ಹತ್ತಾರು ಹಿರಿಯ ನಾಯಕರು ಇದ್ದಾರೆ. ನಮ್ಮ ಪಕ್ಷ ಸದೃಢವಾಗಿದೆ. ಸರಕಾರ ಎರಡೂವರೆ ವರ್ಷ ಪೂರೈಸಿದೆ. ಐದು ವರ್ಷವೂ ಸರಕಾರ ಅಭಿವೃದ್ಧಿ ನಿಟ್ಟಿನಲ್ಲಿ ಕೆಲಸ ಮಾಡಲಿದೆ. ಜನರಿಗೆ ಕೊಟ್ಟ ಭರವಸೆಗಳನ್ನ ಈಡೇರಿಸಿದ್ದೇವೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.





