ಯುಪಿಎ ಅವಧಿಯಲ್ಲೇ ಮೆಟ್ರೋ ಗುಲಾಬಿ ಮಾರ್ಗಕ್ಕೆ ಅಡಿಪಾಯ: ರಾಮಲಿಂಗಾರೆಡ್ಡಿ

ಬೆಂಗಳೂರು : ಬೆಂಗಳೂರಿನ ಗುಲಾಬಿ ಮಾರ್ಗದ ಮೆಟ್ರೋ ಯೋಜನೆಗೆ ಯುಪಿಎ ಸರಕಾರದ ಅವಧಿಯಲ್ಲೇ ಅಡಿಪಾಯ ಹಾಕಲಾಗಿತ್ತು ಎಂದು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಇಂದು(ನ.13)ಗುಲಾಬಿ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದು, ಈ ನಡುವೆ ಗುರುವಾರ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮೂಲಕ ಮೆಟ್ರೋ ಇತಿಹಾಸ ನೆನಪಿಸಿರುವ ಸಚಿವರು, ಬೆಂಗಳೂರು ಮೆಟ್ರೋ ಅಭಿವೃದ್ಧಿಯಲ್ಲಿ ಕರ್ನಾಟಕ ಸರಕಾರ ಮತ್ತು ಕನ್ನಡಿಗರ ಕೊಡುಗೆಗೂ ಸೂಕ್ತ ಗೌರವ ಸಿಗಬೇಕು ಎಂದಿದ್ದಾರೆ.
2013-14ರಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ನಾನು ಸಾರಿಗೆ ಸಚಿವ ಹಾಗೂ ಬೆಂಗಳೂರು ನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದೆ. 2014ರ ಜನವರಿ 30ರಂದು ಯುಪಿಎ ಸರಕಾರದ ಅವಧಿಯಲ್ಲಿ ಕೇಂದ್ರ ಸಚಿವ ಸಂಪುಟವು ನಮ್ಮ ಮೆಟ್ರೋದ ಎರಡನೇ ಹಂತಕ್ಕೆ ಅನುಮೋದನೆ ನೀಡಿತ್ತು. ಆಗ ಗೊಟ್ಟಿಗೆರೆ-ನಾಗವಾರ ಮಾರ್ಗವೂ ಯೋಜನೆಯ ಭಾಗವಾಗಿತ್ತು. ಇದೇ ಮಾರ್ಗ ಇದೀಗ ಗುಲಾಬಿ ಮಾರ್ಗವಾಗಿ ಅಭಿವೃದ್ಧಿಯಾಗಿದೆ ಎಂದು ರಾಮಲಿಂಗಾರೆಡ್ಡಿ ಇತಿಹಾಸವನ್ನು ಉಲ್ಲೇಖಿಸಿದ್ದಾರೆ.
ಕಾಳೇನ ಅಗ್ರಹಾರದಿಂದ ನಾಗವಾರದವರೆಗೆ ಸಂಪರ್ಕ ಕಲ್ಪಿಸುವ ಗುಲಾಬಿ ಮಾರ್ಗ ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೊಸ ವೇಗ ನೀಡಲಿದೆ. ವಿಶೇಷವಾಗಿ ಬೆಂಗಳೂರು ದಕ್ಷಿಣ ಭಾಗದ ಸಂಚಾರ ದಟ್ಟಣೆ ಕಡಿಮೆ ಮಾಡಲು ಈ ಮಾರ್ಗ ಮಹತ್ವದ ಪಾತ್ರ ವಹಿಸಲಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ಮೆಟ್ರೋ ಅಭಿವೃದ್ಧಿಯ ಹಿಂದೆ ಹಲವು ಸರಕಾರಗಳ ನಿರಂತರ ಪ್ರಯತ್ನ ಮತ್ತು ಕೇಂದ್ರ-ರಾಜ್ಯ ಸರಕಾರಗಳ ಸಹಕಾರವಿದೆ. ಇತಿಹಾಸ ಇದನ್ನು ಮರೆಯಬಾರದು. ನಮ್ಮ ಮೆಟ್ರೋ ಕನ್ನಡಿಗರ ತೆರಿಗೆ ಹಣ ಮತ್ತು ಕರ್ನಾಟಕದ ಆರ್ಥಿಕ ಬದ್ಧತೆಯ ಪ್ರತೀಕ ಎಂದು ರಾಮಲಿಂಗಾರೆಡ್ಡಿ ಹೇಳಿದ್ದಾರೆ.






