ಎಚ್‌ಡಿಕೆ, ಬಿಜೆಪಿಗರನ್ನು ಮೆಚ್ಚಿಸಲು ಹೇಳಿಕೆ ನೀಡುವ ಬದಲು ತಮ್ಮ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಲಿ : ರಮೇಶ್‍ಬಾಬು

ಬೆಂಗಳೂರು : ‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕರನ್ನು ಮೆಚ್ಚಿಸಲು ಹೇಳಿಕೆ ನೀಡುವ ಬದಲು ತಮ್ಮ ಹೊಣೆಗಾರಿಕೆಯನ್ನು ಪ್ರಾಮಾಣಿಕವಾಗಿ ನಿರ್ವಹಿಸಲಿ. ಕಾಂಗ್ರೆಸ್ ಸರಕಾರಕ್ಕೆ ಪಾಠ ಹೇಳುವುದನ್ನು ಬಿಟ್ಟು ರಾಜ್ಯದ ಅಭಿವೃದ್ಧಿಯತ್ತ ಪ್ರಾಮಾಣಿಕ ಪ್ರಯತ್ನ ಮಾಡಲಿ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಸಲಹೆ ನೀಡಿದ್ದಾರೆ.
ರವಿವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ‘ಕೇಂದ್ರದ ಎನ್‍ಡಿಎ ಸರಕಾರದ ಅಸಹಕಾರದಿಂದ ಕರ್ನಾಟಕದ ಕೈಗಾರಿಕಾ ವೇಗಕ್ಕೆ ಅಡ್ಡಿಯಾಗುತ್ತಿದೆ. ನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ. ಹೀಗಿರುವಾಗ ಕುಮಾರಸ್ವಾಮಿ ಕರ್ನಾಟಕ ರಾಜ್ಯದ ಪರ ಕೇಂದ್ರದಲ್ಲಿ ಧ್ವನಿ ಎತ್ತುವ ಕೆಲಸ ಮಾಡಬೇಕು’ ಎಂದು ಆಗ್ರಹಿಸಿದ್ದಾರೆ.
ಬೌದ್ಧಿಕ ದಿವಾಳಿ: ‘ನರೇಗಾ ಯೋಜನೆ’ ಸಂಬಂಧ ಕರ್ನಾಟಕದ ಬಿಜೆಪಿ-ಜೆಡಿಎಸ್ ನಾಯಕರು ಬಹಿರಂಗ ಚರ್ಚೆಗೆ ಸಿದ್ದ ಎಂದು ಹೇಳುವ ಮೂಲಕ ತಮ್ಮ ಬೌದ್ಧಿಕ ದಿವಾಳಿತನವನ್ನು ಸಾಬೀತು ಮಾಡಿದ್ದಾರೆ. ನರೇಗಾ ಯೋಜನೆಯನ್ನು ಜನವಿರೋಧಿ ಯೋಜನೆಯಾಗಿ ರೂಪಿಸಿರುವ ಕೇಂದ್ರ ಸರಕಾರದ ಕಾಯಿದೆಯನ್ನು ಬೆತ್ತಲೆಗೊಳಿಸಲು ಶೀಘ್ರದಲ್ಲೇ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.
ಅಧಿವೇಶನದಲ್ಲಿ ಬಹಿರಂಗ ಚರ್ಚೆಗೆ ಅವಕಾಶವಿದ್ದು, ಎಚ್.ಡಿ.ಕುಮಾರಸ್ವಾಮಿ ಲೋಕಸಭೆಯ ಬದಲು ಕರ್ನಾಟಕ ವಿಧಾನಸಭೆಯಲ್ಲಿ ಚರ್ಚೆ ಮಾಡಲು ಆಸಕ್ತಿ ಇದ್ದರೆ ರಾಷ್ಟ್ರಪತಿಗಳಿಂದ ವಿಶೇಷ ಅನುಮತಿಯನ್ನು ಪಡೆದುಕೊಂಡು ವಿಧಾನಸಭೆಯಲ್ಲಿ ಚರ್ಚೆಗೆ ಬರಲಿ. ಕುಮಾರಸ್ವಾಮಿಗೆ ಕರ್ನಾಟಕದ ಬಗ್ಗೆ ಬದ್ಧತೆ ಇದ್ದರೆ ಕೆಳಕಂಡ ರಾಜ್ಯದ ಯೋಜನೆಗಳಿಗೆ ಕೇಂದ್ರದಿಂದ ಅನುಮತಿಯನ್ನು ದೊರಕಿಸಿಕೊಡಲಿ ಎಂದು ರಮೇಶ್‍ಬಾಬು ಒತ್ತಾಯಿಸಿದ್ದಾರೆ.
‘ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಹುಬ್ಬಳ್ಳಿ, ಬೆಳಗಾವಿ, ವಿಜಯಪುರ ವಿಮಾನ ನಿಲ್ದಾಣ ವಿಸ್ತರಣೆ/ಉನ್ನತಿ ಸರಕಾರ ಸಿದ್ಧವಾಗಿದ್ದು, ಕೇಂದ್ರದ ಅನುಮತಿ ಬಾಕಿ ಇದೆ. ರಕ್ಷಣಾ ಕೈಗಾರಿಕಾ ಕಾರಿಡಾರ್‍ಗಳು, ಏರೋಸ್ಪೇಸ್ ಮತ್ತು ಡಿಫೆನ್ಸ್ ಕೈಗಾರಿಕಾ ಪಾರ್ಕ್‍ಗಳು, ಬಹು ಜಿಲ್ಲಾ ಕೈಗಾರಿಕಾ ಪಾರ್ಕ್, ದೊಡ್ಡ ಕೈಗಾರಿಕಾ ಹೂಡಿಕೆ ಯೋಜನೆಗಳು, ಬೆಂಗಳೂರು ಉಪನಗರ ರೈಲು ಯೋಜನೆ, ಮೇಕೆದಾಟು ಕುಡಿಯುವ ನೀರಿನ ಯೋಜನೆ, ಕೃಷ್ಣಾ ಮೆಲ್ದಂಡೆ ಮೂರನೇ ಹಂತದ ಯೋಜನೆ, ಕಳಸಾ-ಬಂಡೂರಿ ಕುಡಿಯುವ ನೀರಿನ ಯೋಜನೆ ಸೇರಿದಂತೆ ರಾಜ್ಯದಲ್ಲಿ ಬಾಕಿ ಇರುವ ಯೋಜನೆಗಳಿಗೆ ಕುಮಾರಸ್ವಾಮಿ ಕೇಂದ್ರದ ಅನುಮತಿ ಕೊಡಿಸಲಿ’ ಎಂದು ರಮೇಶ್‍ಬಾಬು ಸವಾಲು ಹಾಕಿದ್ದಾರೆ.







