ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿ ಹಿಟ್ಲರ್ ಮನಸ್ಥಿತಿ ತೋರಿಸಿದ್ದಾರೆ : ರಮೇಶ್‍ಬಾಬು

ಬೆಂಗಳೂರು, : ‘ಕರ್ನಾಟಕ ರಾಜ್ಯದ ಇತಿಹಾಸದಲ್ಲೇ ಅತ್ಯಂತ ವೈಫಲ್ಯ ಕಂಡ ಪ್ರತಿಪಕ್ಷ ನಾಯಕರು ಯಾರಾದರೂ ಇದ್ದರೆ, ಆ ಪೈಕಿ ಒಬ್ಬರು ಆರ್.ಅಶೋಕ್, ಮತ್ತೊಬ್ಬರು ಛಲವಾದಿ ನಾರಾಯಣಸ್ವಾಮಿ’ ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಅಧ್ಯಕ್ಷ ರಮೇಶ್ ಬಾಬು ಲೇವಡಿ ಮಾಡಿದ್ದಾರೆ.
ಶುಕ್ರವಾರ ನಗರದ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕ್ರಿಮಿನಲ್ ಪ್ರಕರಣವನ್ನು ಮುಚ್ಚಿಟ್ಟು ಪದ್ಮನಾಭನಗರ ಹಾಗೂ ಕನಕಪುರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಆರ್.ಅಶೋಕ್, ಸುಳ್ಳು ಪ್ರಮಾಣ ಪತ್ರವನ್ನು ಚು.ಆಯೋಗಕ್ಕೆ ಸಲ್ಲಿಸಿದ್ದರು. ಇಂತಹವರು ರಾಜ್ಯದ ವಿದ್ಯಾರ್ಥಿಗಳಿಗೆ ಬುದ್ದಿ ಹೇಳಲು ಹೊರಟಿದ್ದಾರೆ’ ಎಂದು ಟೀಕಿಸಿದರು.
2014ರಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿತು. ಅಲ್ಲಿಂದ ಇಲ್ಲಿಯ ವರೆಗೆ 152 ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗಿವೆ. ಇದರಿಂದ 7.5ಕೋಟಿ ವಿದ್ಯಾರ್ಥಿಗಳು ತೊಂದರೆಗೆ ಒಳಗಾಗಿದ್ದಾರೆ. ಶಿಕ್ಷಣ ಸಚಿವರ ವೈಫಲ್ಯದಿಂದ ಪರೀಕ್ಷಾ ಅಕ್ರಮಗಳು ಹೆಚ್ಚಾಗಿವೆ. ಧರ್ಮೇಂದ್ರ ಪ್ರಧಾನ್ ಆರೆಸ್ಸೆಸ್‍ನಿಂದ ಬಂದವರು. ಅವರು ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಟೀಕಿಸಿದರು.
ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಪ್ರಹಾರ ನಡೆಸಿ ಹಿಟ್ಲರ್ ಮನಸ್ಥಿತಿ ತೋರಿಸಿದ್ದಾರೆ. ಇದಕ್ಕೆಲ್ಲಾ ಧರ್ಮೇಂದ್ರ ಪ್ರಧಾನ್ ಅವರೇ ಕಾರಣ. ಕರ್ನಾಟಕದಲ್ಲಿ ಸಿಇಟಿ ಜಾರಿಗೆ ಬಂದ ದಿನದಿಂದಲೂ ಎಂದೂ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ. 3.45ಲಕ್ಷ ವಿದ್ಯಾರ್ಥಿಗಳು ಸಿಇಟಿ ಬರೆಯುತ್ತಿದ್ದರು. ಎಂದಿಗೂ ಮರು ಪರೀಕ್ಷೆ ನಡೆದಿಲ್ಲ. ಬಿಜೆಪಿಯವರು ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ಅವರು ತಿಳಿಸಿದರು.






