ಎಸ್ಐಆರ್ ಕುರಿತು ವಿಪಕ್ಷಗಳ ದ್ವಂದ್ವ ನಿಲುವು : ರಣದೀಪ್ ಸಿಂಗ್ ಸುರ್ಜೆವಾಲ

ರಣದೀಪ್ ಸಿಂಗ್ ಸುರ್ಜೆವಾಲಾ (Photo: PTI)
ಬೆಂಗಳೂರು : ಕರ್ನಾಟಕದಲ್ಲಿ ‘ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ’(ಎಸ್ಐಆರ್)ಗೆ ವಿರೋಧ ವ್ಯಕ್ತಪಡಿಸುತ್ತಿರುವ ಬಿಜೆಪಿ ನಾಯಕರು(ಅವರೊಂದಿಗೆ ಎಚ್.ಡಿ.ಕುಮಾರಸ್ವಾಮಿ ಕೂಡ) ತೋರಿಸುತ್ತಿರುವ ಈ ವಿಚಿತ್ರ ದ್ವಂದ್ವ ನಿಲುವು ಹಾಗೂ ಹತಾಶೆ ಆಶ್ಚರ್ಯಕರವಾಗಿದೆ ಎಂದು ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ತಿಳಿಸಿದ್ದಾರೆ.
ಸೋಮವಾರ ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾವು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪರವಾಗಿ ಅವರು ಎಸ್ಐಆರ್ ಗೆ ವ್ಯಕ್ತಪಡಿಸಿರುವ ವಿರೋಧವನ್ನು ಸ್ವಾಗತಿಸುತ್ತೇವೆ. ಜೊತೆಗೆ ಕರ್ನಾಟಕದ ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಧೈರ್ಯವಿದ್ದರೆ ಕೆಳಗಿನ ವಿಚಾರಗಳನ್ನು ಬಹಿರಂಗವಾಗಿ ಘೋಷಿಸುವಂತೆ ಸವಾಲು ಹಾಕುತ್ತೇವೆ ಎಂದು ಹೇಳಿದ್ದಾರೆ.
ಎಸ್ಐಆರ್ ಹೆಸರಿನಲ್ಲಿ ಬಿಹಾರ ವಿಧಾನಸಭೆ ಚುನಾವಣೆಗೆ ಮುನ್ನ 47 ಲಕ್ಷ ಮತದಾರರ, ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಮುನ್ನ 84 ಲಕ್ಷ ಮತದಾರರ, ಅಸ್ಸಾಂ ವಿಧಾನಸಭೆಗೆ ಚುನಾವಣೆಗೆ ಮುನ್ನ 11 ಲಕ್ಷ ಮತದಾರರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸಿರುವುದು ತಪ್ಪು. ಆದುದರಿಂದ, ಈ ರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶವನ್ನು ಅಮಾನ್ಯಗೊಳಿಸಬೇಕು ಎಂದು ಆಗ್ರಹಿಸಬೇಕು ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರಿಗೆ ಸುರ್ಜೆವಾಲ ಸವಾಲು ಹಾಕಿದ್ದಾರೆ.
ಅಲ್ಲದೇ, ಎಸ್ಐಆರ್ ಪ್ರಕ್ರಿಯೆಯು ಸಂಪೂರ್ಣವಾಗಿ ತಪ್ಪು, ಪ್ರಜಾಪ್ರಭುತ್ವ ವಿರೋಧಿ, ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಮೇಲಿನ ನೇರ ದಾಳಿಯಾಗಿದೆ ಎಂದು ಘೋಷಿಸಬೇಕು. ಅಲ್ಲದೆ ದೇಶದಾದ್ಯಂತ ಎಸ್ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ರದ್ದುಗೊಳಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಚುನಾವಣಾ ಆಯೋಗವು ಮೊದಲಿನಿಂದಲೇ ಎಸ್ಐಆರ್ ಪ್ರಕ್ರಿಯೆಯನ್ನು ಆರಂಭಿಸಿರುವುದು ಗಂಭೀರ ತಪ್ಪಾಗಿದೆ. ವಾಸ್ತವದಲ್ಲಿ ಇದು ಮತದಾರರ ಹೆಸರುಗಳನ್ನು ಅಳಿಸುವ ಅಭಿಯಾನವಾಗಿದ್ದು, ಭಾರತದ ಗಣರಾಜ್ಯ ಹಾಗೂ ಜನರ ಪ್ರಜಾಪ್ರಭುತ್ವದ ಹಕ್ಕುಗಳನ್ನು ದುರ್ಬಲಗೊಳಿಸುವ ಉದ್ದೇಶ ಹೊಂದಿದೆ ಎಂದು ಒಪ್ಪಿಕೊಳ್ಳಬೇಕು ಎಂದು ಸುರ್ಜೆವಾಲ ಸವಾಲು ಹಾಕಿದ್ದಾರೆ.






