ಬೆಂಗಳೂರು: ಬಾಂಗ್ಲಾ ಪ್ರಜೆ ನಝ್ಮಾ ಅತ್ಯಾಚಾರ, ಹತ್ಯೆ ಪ್ರಕರಣದ ಆರೋಪಿಯ ಬಂಧನ
ʼಲೈಂಗಿಕ ಕ್ರಿಯೆಗೆ ಪ್ರತಿರೋಧವೊಡ್ಡಿದಕ್ಕೆ ಹತ್ಯೆಗೈದ ಟ್ಯಾಂಕರ್ ಚಾಲಕʼ

ಬೆಂಗಳೂರು: ಬಾಂಗ್ಲಾದೇಶ ಮೂಲದ ಮಹಿಳೆ ಮೇಲೆ ಅತ್ಯಾಚಾರವೆಸಗಿ ಹತ್ಯೆಗೈದ ಪ್ರಕರಣದ ಆರೋಪಿ ಬಂಧಿಸಲಾಗಿದ್ದು, ಲೈಂಗಿಕ ಕ್ರಿಯೆಗೆ ಆಕೆ ಪ್ರತಿರೋಧವೊಡ್ಡಿದಾಗ ಲೈಂಗಿಕ ದೌರ್ಜನ್ಯ ಎಸಗಿ, ನಂತರ ಉಸಿರುಗಟ್ಟಿಸಿ ಹತ್ಯೆಗೈದಿರುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ.
ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕೃತ್ಯವೆಸಗಿದ ಆರೋಪದಡಿ ಬಾಗಲಕೋಟೆ ಮೂಲದ ಮುದುಕಪ್ಪ (28) ಎಂಬಾತನನ್ನು ಫೆ.2ರಂದು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆಗೊಳಪಡಿಸಲಾಗಿದೆ ಎಂದು ಹೇಳಿದರು.
ವಾಟರ್ ಟ್ಯಾಂಕರ್ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ಮುದುಕಪ್ಪ, ಮಹಿಳೆ ವಾಸವಿದ್ದ ಶೆಡ್ ಹಾಗೂ ಆಕೆ ಕೆಲಸ ಮಾಡುತ್ತಿದ್ದ ಅಪಾರ್ಟ್‍ಮೆಂಟ್‍ಗೆ ನೀರು ಪೂರೈಸಲು ಹೋದಾಗ ಆಕೆಯೊಂದಿಗೆ ಮಾತನಾಡುತ್ತಿದ್ದ. ಆ.23ರಂದು ಕೆಲಸ ಮುಗಿಸಿ ಮನೆಗೆ ಹೋಗುತ್ತಿದ್ದ ಮಹಿಳೆಯನ್ನು ಹಿಂಬಾಲಿಸಿದ್ದ ಮುದುಕಪ್ಪ, ಬಳಿಕ ಆಕೆಯನ್ನು ಕಲ್ಕೆರೆ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ್ದ. ಆಕೆ ಪ್ರತಿರೋಧವೊಡ್ಡಿದಾಗ ಲೈಂಗಿಕ ದೌರ್ಜನ್ಯ ಎಸಗಿ, ನಂತರ ಉಸಿರುಗಟ್ಟಿಸಿ ಹತ್ಯೆಗೈದಿದ್ದ. ಬಳಿಕ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಪರಾರಿಯಾಗಿದ್ದ ಎಂದು ಅವರು ಹೇಳಿದರು.
ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದ ರಾಮಮೂರ್ತಿ ನಗರ ಠಾಣೆ ಪೊಲೀಸರು ಘಟನೆಯ ದಿನ ಕೆರೆಯ ಬಳಿ ಓಡಾಡಿದ್ದ ಐದಾರು ಜನರನ್ನು ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ಮೃತದೇಹದ ಮರಣೋತ್ತರ ಪರೀಕ್ಷಾ ವರದಿ ಹಾಗೂ ಎಫ್‍ಎಸ್‍ಎಲ್ ವರದಿಯನ್ನು ಆಧರಿಸಿ ಆರೋಪಿ ಮುದುಕಪ್ಪನನ್ನು ಬಂಧಿಸಲಾಗಿದೆ.
ಬೆಂಗಳೂರಿನಲ್ಲಿ ಅನಧಿಕೃತವಾಗಿ ನೆಲೆಸಿರುವ ವಿದೇಶಿಗರ ಪತ್ತೆ ಹಾಗೂ ಗಡಿಪಾರಿನ ಕುರಿತು ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಬಾಂಗ್ಲಾದೇಶ ಮೂಲದವರು ಮಾತ್ರವಲ್ಲದೆ, ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಆಫ್ರಿಕಾ ಮೂಲದವರು ಸೇರಿದಂತೆ ಇತರರನ್ನು ಪತ್ತೆ ಹಚ್ಚಿ ಗಡಿಪಾರು ಮಾಡುವ ಕೆಲಸಗಳಾಗುತ್ತಿವೆ ಎಂದು ಅವರು ಮಾಹಿತಿ ನೀಡಿದರು.