‘ಪುಣ್ಯಕೋಟಿ ದತ್ತು ಯೋಜನೆ’ಗೆ ಅನುದಾನ ಬಿಡುಗಡೆ ಮಾಡಿ : ಆರ್.ಅಶೋಕ್

ಬೆಂಗಳೂರು : ‘ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ‘ಪುಣ್ಯಕೋಟಿ ದತ್ತು ಯೋಜನೆ’ಗೆ ತಕ್ಷಣವೇ ಅನುದಾನ ಬಿಡುಗಡೆ ಮಾಡಿ, ಗೋಶಾಲೆಗಳ ನೆರವಿಗೆ ಧಾವಿಸಿ. ಮೂಕಪ್ರಾಣಿಗಳ ಹಸಿವು ಮತ್ತು ಗೋಶಾಲೆಗಳ ಸಂಕಷ್ಟದ ಬಗ್ಗೆ ಇನ್ನಾದರೂ ಸರಕಾರ ನಿರ್ಲಕ್ಷ್ಯ ವಹಿಸದೆ ಕ್ರಮ ಕೈಗೊಳ್ಳಲಿ’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಶನಿವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಒಂದೆಡೆ ಬರದ ಹೊಡೆತಕ್ಕೆ ಮೇವು ಸಿಗದೆ ಜಾನುವಾರುಗಳು ಕಂಗಾಲಾಗಿವೆ. ಮತ್ತೊಂದೆಡೆ ಗೋವುಗಳ ರಕ್ಷಣೆ ಮತ್ತು ಪೋಷಣೆಗಾಗಿ ರೂಪಿಸಿದ ‘ಪುಣ್ಯಕೋಟಿ ದತ್ತು ಯೋಜನೆ’ಗೆ ಸಮರ್ಪಕ ಅನುದಾನ ನೀಡದೆ ರಾಜ್ಯ ಸರಕಾರವೇ ಯೋಜನೆಯನ್ನು ಸೊರಗುವಂತೆ ಮಾಡಿದೆ’ ಎಂದು ಟೀಕಿಸಿದ್ದಾರೆ.
‘ಎರಡು ವರ್ಷಗಳಿಂದ ಪ್ರೋತ್ಸಾಹ ಧನ ಬಿಡುಗಡೆಯಾಗದೆ ಖಾಸಗಿ ಗೋಶಾಲೆಗಳು ಸಂಕಷ್ಟಕ್ಕೆ ಸಿಲುಕಿವೆ, ಸಾವಿರಾರು ಜಾನುವಾರುಗಳ ಪಾಲನೆಗೆ ದಾನಿಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಮೇವು, ನಿರ್ವಹಣೆ ಮತ್ತು ಪಶುವೈದ್ಯಕೀಯ ವೆಚ್ಚಗಳ ನಡುವೆ ನಿಗದಿತ ಅನುದಾನವೂ ಸಾಲುತ್ತಿಲ್ಲ’ ಎಂದು ಅಶೋಕ್ ಗಮನ ಸೆಳೆದಿದ್ದಾರೆ.
‘ಗೋವುಗಳ ರಕ್ಷಣೆಯ ಬಗ್ಗೆ ಭಾಷಣ ಮಾಡುವ ಕಾಂಗ್ರೆಸ್ ಸರಕಾರಕ್ಕೆ ಅವುಗಳ ಹಸಿವು ನೀಗಿಸಲು ಅಗತ್ಯ ಅನುದಾನ ಬಿಡುಗಡೆ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ?. ಇದು ಬರದ ಸಂಕಷ್ಟದ ಜೊತೆಗೆ ಸರಕಾರದ ಆಡಳಿತ ವೈಫಲ್ಯವನ್ನೂ ಎತ್ತಿತೋರಿಸುತ್ತದೆ’ ಎಂದು ಆರ್.ಅಶೋಕ್ ಆಕ್ರೋಶ ಹೊರ ಹಾಕಿದ್ದಾರೆ.






