ಬಿಡಿಎ ಸಕಾಲ-2.0 ಪ್ರಸ್ತಾವದ ಆಡಳಿತಾತ್ಮಕ ಪರಿಶೀಲನೆಗಾಗಿ ಸಿಎಂಗೆ ಮನವಿ

ಬೆಂಗಳೂರು : ‘ಸಕಾಲ 2.0 ಅಡಿಯಲ್ಲಿ ಬಿಡಿಎ ಸೇವೆಗಳು’ ಎಂಬ ಸರಕಾರಿ ಸಂಕ್ಷಿಪ್ತ ನೀತಿ ಪ್ರಸ್ತಾವವನ್ನು ಪರಿಗಣಿಸಿ, ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಗಳ ಮೂಲಕ ಅದರ ಕಾನೂನುಬದ್ಧ, ಆಡಳಿತಾತ್ಮಕ, ತಾಂತ್ರಿಕ ಮತ್ತು ಹಣಕಾಸಿನ ಕಾರ್ಯಸಾಧ್ಯತೆಯ ಪ್ರಾಥಮಿಕ ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲು ಅಗತ್ಯ ನಿರ್ದೇಶನ ನೀಡಬೇಕೆಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಸದಸ್ಯ ಎಸ್.ಮೋಹನದಾಸ್ ಹೆಗ್ಡೆ ಮನವಿ ಮಾಡಿದ್ದಾರೆ.
ಶನಿವಾರ ಈ ಕುರಿತಂತೆ ಪತ್ರವನ್ನು ಬರೆದಿರುವ ಅವರು, ರಾಜ್ಯ ಸರಕಾರದ ಸಕಾಲ 2.0 ಚೌಕಟ್ಟಿನಡಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅರ್ಹ ನಾಗರಿಕ, ಆಸ್ತಿ, ನಗರ ಯೋಜನೆ, ಅಭಿವೃದ್ಧಿ ಮತ್ತು ವಾಣಿಜ್ಯ ಸಂಬಂಧಿತ ಸೇವೆಗಳನ್ನು ಏಕೀಕೃತ, ಡಿಜಿಟಲ್, ಪಾರದರ್ಶಕ, ಕಾಲಮಿತಿಯೊಳಗಿನ ಹಾಗೂ ಪ್ರತಿ ಹಂತದಲ್ಲೂ ಪರಿಶೀಲಿಸಬಹುದಾದ ಸೇವಾ ವಿತರಣಾ ವ್ಯವಸ್ಥೆಯೊಂದಿಗೆ ಸಂಯೋಜಿಸುವ ಉದ್ದೇಶದಿಂದ ಸಿದ್ಧಪಡಿಸಲಾದ ‘‘ಸಕಾಲ 2.0 ಅಡಿಯಲ್ಲಿ ಬಿಡಿಎ ಸೇವೆಗಳು’’ ಎಂಬ ಸರಕಾರಿ ಸಂಕ್ಷಿಪ್ತ ನೀತಿ ಪ್ರಸ್ತಾವವನ್ನು ಮುಖ್ಯಮಂತ್ರಿ ಪರಿಗಣಿಸಬೇಕು ಎಂದು ತಿಳಿಸಿದ್ದಾರೆ.
ಕಾನೂನುಬದ್ಧವಾಗಿ ಅರ್ಹವಾದ ಬಿಡಿಎ ಸೇವೆಗಳನ್ನು ಸಕಾಲ ವ್ಯವಸ್ಥೆಯಡಿ ತರಲು, ಸೇವಾವಾರು ಕಾಲಮಿತಿ, ಗೊತ್ತುಪಡಿಸಿದ ಅಧಿಕಾರಿಗಳು, ಮೇಲ್ದರ್ಜೆಯ ಪರಿಶೀಲನೆ ಮತ್ತು ಅನ್ವಯಿಸುವ ಕಾನೂನುಗಳ ಪ್ರಕಾರ ಹೊಣೆಗಾರಿಕೆ ಹಾಗೂ ಪರಿಹಾರ ವ್ಯವಸ್ಥೆಗಳನ್ನು ಗುರುತಿಸುವುದು. ಅನಗತ್ಯ ನೇರ ಕಚೇರಿ ಸಂಪರ್ಕ ಮತ್ತು ಭೌತಿಕ ಭೇಟಿಗಳನ್ನು ಕಡಿಮೆ ಮಾಡಿ, ನಾಗರಿಕರು, ಆಸ್ತಿ ಮಾಲಕರು, ವಾಸ್ತುಶಿಲ್ಪಿಗಳು, ಅಭಿವೃದ್ಧಿದಾರರು ಮತ್ತು ಉದ್ಯಮಗಳು ಪಾರದರ್ಶಕ ಡಿಜಿಟಲ್ ಪ್ರಕ್ರಿಯೆಗಳ ಮೂಲಕ ನೇರವಾಗಿ ಸೇವೆ ಪಡೆಯಲು ನೆರವಾಗುವುದು ಬಿಡಿಎ ಸಕಾಲ-2.0ಯ ಮುಖ್ಯ ಉದ್ದೇಶವಾಗಿದೆ ಎಂದು ಪತ್ರದಲ್ಲಿ ಬರೆದಿದ್ದಾರೆ.






