ವಸತಿ ಶಾಲಾ ಶಿಕ್ಷಕರ ನೇಮಕಾತಿ: ನಾಳೆಯಿಂದ ಲಿಖಿತ ಪರೀಕ್ಷೆ

ಬೆಂಗಳೂರು : ರಾಜ್ಯದ ವಸತಿ ಶಾಲಾ ಶಿಕ್ಷಕರ ನೇಮಕಾತಿ ಸಂಬಂಧ ಉಳಿಕೆ ಮೂಲ ವೃಂದದ ವಿವಿಧ ವಿಷಯಗಳ ಲಿಖಿತ ಪರೀಕ್ಷೆಗಳು ನ.27ರಿಂದ 30ರ ವರೆಗೆ ನಡೆಯಲಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ಈ ಕುರಿತು ಗುರುವಾರ ಪ್ರಕಟಣೆ ನೀಡಿರುವ ಅವರು, ನ.27ರಂದು ಬೆಂಗಳೂರು, ಕಲಬುರ್ಗಿ ಹಾಗೂ ಮೈಸೂರು ನಗರಗಳಲ್ಲಿ ಪರೀಕ್ಷೆ ನಡೆಯಲಿದೆ. ಕಂಪ್ಯೂಟರ್ ಶಿಕ್ಷಕರ 57 ಹುದ್ದೆಗಳಿಗೆ ಒಟ್ಟು 27,933 ಮಂದಿ ಅರ್ಜಿ ಸಲ್ಲಿಸಿದ್ದು ಇಂದು ಬೆಳಗ್ಗೆ 10:30ರಿಂದ ಮಧ್ಯಾಹ್ನ 12:30ರ ವರೆಗೆ ಪರೀಕ್ಷೆ ನಡೆಯಲಿದೆ ಎಂದು ಮಾಹಿತಿ ನೀಡಿದ್ದಾರೆ.
ಗಣಿತ ಶಿಕ್ಷಕರ 103 ಹುದ್ದೆಗೆ 18,891 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಹಿಂದಿ ಶಿಕ್ಷಕರ 55 ಹುದ್ದೆಗಳಿಗೆ 1,479 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಈ ಎರಡೂ ವಿಷಯಗಳಿಗೆ ಮಧ್ಯಾಹ್ನ 2:30ರಿಂದ 4.30ರವರೆಗೆ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಬೆಂಗಳೂರು, ಮೈಸೂರು ಮತ್ತು ಕಲಬುರ್ಗಿಯಲ್ಲಿ 108 ಇಂಗ್ಲಿಷ್ ಶಿಕ್ಷಕರು ಹಾಗೂ 81 ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳಿಗೆ ನ.29ರಂದು ಲಿಖಿತ ಪರೀಕ್ಷೆ ನಡೆಯಲಿದೆ. ನ.30ರಂದು ಸಮಾಜ ವಿಜ್ಞಾನ ಶಿಕ್ಷಕರ 154 ಹುದ್ದೆಗಳಿಗೆ ಬೆಂಗಳೂರು ಮತ್ತು ಬಳ್ಳಾರಿಯಲ್ಲಿ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದ್ದಾರೆ.
ಕ್ಯೂಆರ್ ಕೋಡ್‍ನಿಂದ ಅಭ್ಯರ್ಥಿಗಳ ತಪಾಸಣೆ
ಎಲ್ಲ ಪರೀಕ್ಷೆಗಳಲ್ಲೂ ಅಭ್ಯರ್ಥಿಗಳನ್ನು ಪರೀಕ್ಷಾ ಮೇಲ್ವಿಚಾರಕರೇ ಕ್ಯೂಆರ್ ಕೋಡ್ ಮೂಲಕ ತಪಾಸಣೆ ನಡೆಸಿ, ನೈಜತೆಯನ್ನು ಖಾತರಿಪಡಿಸಿಕೊಳ್ಳಲಿದ್ದಾರೆ. ಇದುವರೆಗೂ ಮುಖ ಚಹರೆ ಪತ್ತೆ ತಂತ್ರಜ್ಞಾನದ ಮೂಲಕ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿಗಳೇ ಅಭ್ಯರ್ಥಿಗಳನ್ನು ಪರಿಶೀಲಿಸಿ ನಂತರ ಒಳಗೆ ಬಿಡುತ್ತಿದ್ದರು. ಇದರಿಂದ ಸ್ವಲ್ಪ ತಡ ಕೂಡ ಆಗುತ್ತಿತ್ತು. ಹೀಗಾಗಿ ಕೆಇಎ ಸಿದ್ಧಪಡಿಸಿರುವ ಕ್ಯೂಆರ್ ಕೋಡ್ ಮೂಲಕ ಶಿಕ್ಷಕರೇ ಅಭ್ಯರ್ಥಿಗಳ ಭಾವಚಿತ್ರ ತೆಗೆದು, ನೈಜತೆ ಪರಿಶೀಲಿಸಲಿದ್ದಾರೆ. ಇತ್ತೀಚೆಗೆ ಕೊಠಡಿಗೆ ಇಬ್ಬರು ಮೇಲ್ವಿಚಾರಕರನ್ನು ನಿಯೋಜಿಸಿದ್ದು, ಅವರಲ್ಲಿ ಒಬ್ಬರು ಮೊದಲ ಬೆಲ್ ಆಗುವವರಿಗೆ ಅಭ್ಯರ್ಥಿಗಳ ನೈಜತೆ ಪರಿಶೀಲಿಸಲಿದ್ದಾರೆ. ಇದೊಂದು ಪ್ರಾಯೋಗಿಕ ಕ್ರಮವಾಗಿದ್ದು, ಅದರ ಕಾರ್ಯಕ್ಷಮತೆ ನೋಡಿಕೊಂಡು ಇತರ ಪರೀಕ್ಷೆಗಳಿಗೂ ವಿಸ್ತರಿಸಲಾಗುವುದು ಎಂದು ಎಚ್.ಪ್ರಸನ್ನ ತಿಳಿಸಿದ್ದಾರೆ.






