ಕ್ರೀಡಾಪಟುಗಳಿಗೆ ನೀಡುವ ಬಹುಮಾನ ಮೊತ್ತ ಮರುಪರಿಶೀಲನೆ : ಡಿಸಿಎಂ ಡಾ.ಜಿ.ಪರಮೇಶ್ವರ್
177 ಬರಪೀಡಿತ ತಾಲೂಕುಗಳಲ್ಲಿ 46 ಸಾವಿರ ಕೋಟಿ ರೂ. ನಷ್ಟ; ಪರಿಹಾರಕ್ಕೆ ಕೇಂದ್ರಕ್ಕೆ ಮನವಿ

ಬೆಂಗಳೂರು : ರಾಜ್ಯದ ಕ್ರೀಡಾಪಟುಗಳಿಗೆ ನೀಡಲಾಗುತ್ತಿರುವ ಬಹುಮಾನ ಮೊತ್ತವನ್ನು ಇತರೆ ರಾಜ್ಯಗಳಿಗೆ ಹೋಲಿಕೆ ಮಾಡಿ ಮರುಪರಿಶೀಲಿಸಲಾಗುತ್ತಿದ್ದು, ಈ ಕುರಿತು ಈಗಾಗಲೇ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಲಾಗಿದೆ. ಕ್ರೀಡಾಪಟುಗಳಿಗೆ ಎಷ್ಟು ಬಹುಮಾನ ಮೊತ್ತ ನೀಡಬೇಕು ಎಂಬುದನ್ನು ನಾಳೆ ಘೋಷಿಸಲಾಗುವುದು ಎಂದು ಉಪಮುಖ್ಯಮಂತ್ರಿ, ಕಂದಾಯ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು.
ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪೂವಮ್ಮ ಅವರು ಜಪಾನ್‌ನಲ್ಲಿದ್ದಾಗಲೇ ಅವರನ್ನು ಸಂಪರ್ಕಿಸಿ ಅಭಿನಂದಿಸಲು ಪ್ರಯತ್ನಿಸಿದ್ದೆವು. ಆದರೆ ಆಗ ಸಂಪರ್ಕ ಸಾಧ್ಯವಾಗಿರಲಿಲ್ಲ. ಅವರು ಭಾರತಕ್ಕೆ ಬಂದ ಒಂದೆರಡು ಗಂಟೆಯಲ್ಲೇ ಅವರನ್ನು ಸಂಪರ್ಕಿಸಿ ಮಾತನಾಡಿದ್ದೇನೆ. ಪೂವಮ್ಮ ಅವರಷ್ಟೇ ಅಲ್ಲದೆ, ಬೇರೆ ಬೇರೆ ಅಥ್ಲೀಟ್‌ಗಳೊಂದಿಗೂ ಮಾತನಾಡಿದ್ದೇನೆ ಎಂದು ತಿಳಿಸಿದರು.
ನಾಳೆ ಮುಖ್ಯಮಂತ್ರಿ ಹಾಗೂ ನಾನು ಸರ್ಕಾರದ ವತಿಯಿಂದ ಕ್ರೀಡಾಪಟುಗಳಿಗೆ ನೀಡಬೇಕಾದ ಬಹುಮಾನ ಮೊತ್ತದ ಕುರಿತು ಘೋಷಣೆ ಮಾಡುತ್ತೇವೆ. ಬೇರೆ ರಾಜ್ಯಗಳಲ್ಲಿ ಹೆಚ್ಚಿನ ಮೊತ್ತ ನೀಡಲಾಗುತ್ತಿದೆ ಎಂದು ಕ್ರೀಡಾಪಟುಗಳು ಹೇಳಿರುವ ಮಾಹಿತಿಯನ್ನೂ ತರಿಸಿಕೊಂಡು ಪರಿಶೀಲಿಸಿದ್ದೇವೆ. ನಮ್ಮಲ್ಲಿಯೂ ಬಹುಮಾನ ಮೊತ್ತವನ್ನು ಮರುಪರಿಶೀಲಿಸಬೇಕು ಎಂಬ ಬಗ್ಗೆ ಈಗಾಗಲೇ ಮುಖ್ಯಮಂತ್ರಿಯೊಂದಿಗೆ ಮಾತನಾಡಿದ್ದೇನೆ. ಎಷ್ಟು ಮೊತ್ತ ನಿಗದಿಪಡಿಸಬೇಕು ಎಂಬುದನ್ನು ನಾಳೆ ಘೋಷಿಸಲಾಗುವುದು ಎಂದರು.
ಕೇಂದ್ರದ ಬರ ಅಧ್ಯಯನ ತಂಡದಿಂದ ರಾಜ್ಯಾದ್ಯಂತ ಪರಿಶೀಲನೆ :
ಕೇಂದ್ರದ ಬರ ವೀಕ್ಷಣಾ ತಂಡದ ಪರಿಶೀಲನೆ ಕುರಿತು ಮಾತನಾಡಿದ ಡಾ.ಜಿ.ಪರಮೇಶ್ವರ್, ಕೇಂದ್ರದ ತಂಡವನ್ನು ಮೂರು ತಂಡಗಳಾಗಿ ವಿಂಗಡಿಸಿ ರಾಜ್ಯದ ವಿವಿಧ ಭಾಗಗಳಿಗೆ ಕಳುಹಿಸಲಾಗಿದೆ. ಅ.3ರಿಂದ 6ರವರೆಗೆ ತಂಡಗಳು ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡುತ್ತಿವೆ ಎಂದು ತಿಳಿಸಿದರು.
ಪ್ರತಿಯೊಂದು ತಂಡವೂ ಮೂರರಿಂದ ನಾಲ್ಕು ಜಿಲ್ಲೆಗಳಿಗೆ ಭೇಟಿ ನೀಡುತ್ತಿದೆ. ಸರ್ಕಾರ ಮೊದಲ ಹಂತದಲ್ಲಿ ಬರಪೀಡಿತ ಎಂದು ಘೋಷಿಸಿದ್ದ 101 ತಾಲೂಕುಗಳ ಪರಿಸ್ಥಿತಿಯನ್ನು ಅವರು ಪರಿಶೀಲಿಸುತ್ತಿದ್ದಾರೆ ಎಂದರು.
ಮುಖ್ಯಮಂತ್ರಿ ಹಾಗೂ ನಾನು ಕೇಂದ್ರದ ತಂಡವನ್ನು ಬರಮಾಡಿಕೊಂಡು ರಾಜ್ಯದ ಬರ ಪರಿಸ್ಥಿತಿಯ ಕುರಿತು ಅವರಿಗೆ ಮಾಹಿತಿ ನೀಡಿದ್ದೇವೆ. ಎರಡನೇ ಹಂತದಲ್ಲಿ ಘೋಷಿಸಿರುವ ಉಳಿದ 77 ತಾಲೂಕುಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಮನವಿ ಮಾಡಿದ್ದೇವೆ. ಅದರಂತೆ ಅವರು ಹೆಚ್ಚು ಕಡಿಮೆ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಿದರು.
ಕೆಲವು ಕಡೆ ಕೇಂದ್ರ ತಂಡದ ಸದಸ್ಯರು ರೈತರೊಂದಿಗೆ ನೇರವಾಗಿ ಮಾತನಾಡಿದ್ದಾರೆ. ಕೃಷಿ ಜಮೀನುಗಳಿಗೆ ತೆರಳಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ರಾಜ್ಯ ಸರ್ಕಾರ ನಡೆಸಿರುವ ಗ್ರೌಂಡ್ ಟ್ರೂಥಿಂಗ್‌ನಲ್ಲಿ ಕಂಡುಬಂದ ಪರಿಸ್ಥಿತಿಯನ್ನು ಅವರೂ ಸ್ಥಳದಲ್ಲಿಯೇ ನೋಡಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆಯಾ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಕೇಂದ್ರ ತಂಡಕ್ಕೆ ಪರಿಸ್ಥಿತಿಯನ್ನು ವಿವರಿಸಿದ್ದಾರೆ ಎಂದರು.
ಕೇಂದ್ರ ತಂಡದ ಪರಿಶೀಲನೆ ಇಂದು ಅಥವಾ ನಾಳೆ ಮುಗಿಯಲಿದೆ. ಬಳಿಕ ಅವರು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ. ಆ ವರದಿಯನ್ನು ಆಧರಿಸಿ ರಾಜ್ಯ ಸರ್ಕಾರ ಕೇಳಿರುವ ಪರಿಹಾರದ ಕುರಿತು ಕೇಂದ್ರ ಸರ್ಕಾರ ತೀರ್ಮಾನ ಮಾಡಲಿದೆ ಎಂದು ಹೇಳಿದರು.
46 ಸಾವಿರ ಕೋಟಿ ರೂ. ನಷ್ಟ: 10-11 ಸಾವಿರ ಕೋಟಿ ರೂ. ಪರಿಹಾರಕ್ಕೆ ಮನವಿ :
ರಾಜ್ಯದ 177 ತಾಲೂಕುಗಳಲ್ಲಿ ಈಗಾಗಲೇ ಸುಮಾರು 46 ಸಾವಿರ ರೂ. ಕೋಟಿ ನಷ್ಟ ಸಂಭವಿಸಿದೆ. ಇದರಲ್ಲಿ ಸುಮಾರು 10 ಸಾವಿರದಿಂದ 11 ಸಾವಿರ ಕೋಟಿ ರೂ. ಪರಿಹಾರ ನೀಡುವಂತೆ ನಾವು ಮನವಿ ಮಾಡಿದ್ದೇವೆ. ಕೇಂದ್ರ ತಂಡದವರಿಗೂ ಈ ಕುರಿತು ಮನವಿ ಮಾಡಿದ್ದೇವೆ ಎಂದು ಡಾ. ಜಿ. ಪರಮೇಶ್ವರ ಹೇಳಿದರು.
ಕೇಂದ್ರಕ್ಕೆ ಅಂತಿಮವಾಗಿ ಮೆಮೊರಾಂಡಮ್ ಸಲ್ಲಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ನಾನು ಒಂದು ನಿಯೋಗದೊಂದಿಗೆ ತೆರಳಬೇಕು ಎಂಬ ಯೋಚನೆ ಮಾಡಿದ್ದೇವೆ. ನಿಯೋಗ ತೆರಳಿದಾಗಲೂ ಪರಿಹಾರ ನೀಡುವಂತೆ ಕೇಂದ್ರ ಸರ್ಕಾರವನ್ನು ಕೇಳುತ್ತೇವೆ ಎಂದು ತಿಳಿಸಿದರು.
ಕಂದಾಯ ಸೇವೆಗಳ ಶುಲ್ಕ ಏರಿಕೆ :
ಕಂದಾಯ ಇಲಾಖೆಯ ವಿವಿಧ ಸೇವೆಗಳ ಶುಲ್ಕಗಳು ಏಕಾಏಕಿ ಹೆಚ್ಚಳವಾಗಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಜೀವನ ವೆಚ್ಚ ಹೆಚ್ಚುತ್ತಿರುವ ಸಂದರ್ಭದಲ್ಲಿ ಕೆಲವು ಶುಲ್ಕಗಳನ್ನು ಸ್ವಲ್ಪ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಕಾಸ್ಟ್ ಆಫ್ ಲಿವಿಂಗ್ ಹೆಚ್ಚುತ್ತಿದೆ. ಪ್ರತಿಯೊಂದರ ಬೆಲೆ ಹೆಚ್ಚಾಗುತ್ತಿರುವಾಗ ಸ್ವಾಭಾವಿಕವಾಗಿ ಕೆಲವು ಸೇವೆಗಳ ಶುಲ್ಕವನ್ನೂ ಸ್ವಲ್ಪ ಹೆಚ್ಚಿಸುವ ಕೆಲಸ ಮಾಡಲಾಗಿದೆ. ಇದು ಸಹಜವಾಗಿ ಆಗುವಂತಹದ್ದು ಎಂದರು.
ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಹಣದಲ್ಲಿ ಕೊರತೆಯಾಗುವ ಸಂದರ್ಭದಲ್ಲಿ ರಾಜ್ಯ ಸರ್ಕಾರ ತನ್ನದೇ ಆದ ಆದಾಯ ಮೂಲಗಳನ್ನು ಹೆಚ್ಚಿಸಿಕೊಳ್ಳುವುದು ಅಗತ್ಯವಾಗುತ್ತದೆ. ಆದ್ದರಿಂದ ಕೆಲವು ಶುಲ್ಕಗಳನ್ನು ಮಾರ್ಜಿನಲ್ ಆಗಿ ಹೆಚ್ಚಿಸಲಾಗಿದೆ ಎಂದು ಹೇಳಿದರು.
ಭೂ ಸುಧಾರಣಾ ಕಾಯ್ದೆಯ 79ಎ, 79ಬಿ ಮರುಪರಿಶೀಲನೆ :
ಅನೇಕ ಕಾರಣಗಳಿಂದ ಹಿಂದೆ ಭೂ ಸುಧಾರಣಾ ಕಾಯ್ದೆಯ 79ಎ, 79ಬಿ ಕಲಂಗಳನ್ನು ಕೈಬಿಡಲಾಗಿತ್ತು. ಈಗ ಅವುಗಳನ್ನು ಮರುಪರಿಶೀಲಿಸಬೇಕು ಎಂದು ಸಾಕಷ್ಟು ಮನವಿಗಳು ಬಂದಿವೆ. ಅದನ್ನು ಪರಿಶೀಲಿಸುತ್ತಿದ್ದೇವೆ ಎಂದರು.
ಪರಿಶೀಲನೆ ನಂತರ ಮುಖ್ಯಮಂತ್ರಿಯೊಂದಿಗೆ ಚರ್ಚಿಸುತ್ತೇವೆ. ಸಚಿವ ಸಂಪುಟಕ್ಕೆ ತೆಗೆದುಕೊಂಡು ಹೋಗುವ ಅಗತ್ಯವಿದ್ದರೆ, ಅದನ್ನು ಸಚಿವ ಸಂಪುಟದ ಮುಂದೆ ತೆಗೆದುಕೊಂಡು ಹೋಗುತ್ತೇವೆ ಎಂದು ಹೇಳಿದರು.
ಬರದ ಪರಿಣಾಮ ಜಿಎಸ್‌ಟಿ ಸಂಗ್ರಹದ ಮೇಲೂ ಬೀಳುವ ಸಾಧ್ಯತೆ :
ಕರ್ನಾಟಕವು ನಿರಂತರವಾಗಿ ಜಿಎಸ್‌ಟಿ ಸಂಗ್ರಹದಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಯಾವುದೇ ರೀತಿಯ ಕೊರತೆ ಅಥವಾ ತಪ್ಪು ಆಗದಂತೆ ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಜಿಎಸ್‌ಟಿ ಸಂಗ್ರಹ ಮಾಡಲಾಗುತ್ತಿದೆ. ಪ್ರತಿಯೊಂದು ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿಯೂ ರಾಜ್ಯದ ವಾದವನ್ನು ಮಂಡಿಸಿದ್ದೇವೆ ಎಂದರು.
ಮುಖ್ಯಮಂತ್ರಿ ಅವರು ಕೃಷ್ಣ ಬೈರೇಗೌಡ ಅವರನ್ನು ಜಿಎಸ್‌ಟಿ ಕೌನ್ಸಿಲ್ ಸಭೆಗಳಿಗೆ ನಿಯೋಜಿಸುತ್ತಿದ್ದರು. ಅವರು ರಾಜ್ಯದ ಪರವಾಗಿ ಏನೆಲ್ಲ ಹೇಳಬೇಕೋ ಅದನ್ನು ಮಂಡಿಸುತ್ತಿದ್ದರು ಎಂದು ಹೇಳಿದರು.
ಇಂದು ರಾಜ್ಯದಲ್ಲಿ ಬರ ಇದೆ. ಬೆಳೆ ನಷ್ಟವಾಗಿದೆ. ಇದರ ಪರಿಣಾಮ ಪ್ರತಿಯೊಂದು ಕ್ಷೇತ್ರದ ಮೇಲೂ ಬೀಳುತ್ತದೆ. ಸ್ವಾಭಾವಿಕವಾಗಿ ಜಿಎಸ್‌ಟಿ ಸಂಗ್ರಹವೂ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹಣಕಾಸು ತಜ್ಞರು ಈಗಾಗಲೇ ಹೇಳುತ್ತಿದ್ದಾರೆ ಎಂದು ಡಾ. ಜಿ. ಪರಮೇಶ್ವರ್ ತಿಳಿಸಿದರು.
ಮುಂದಿನ ದಿನಗಳಲ್ಲಿ ಅದು ಯಾವ ರೀತಿಯಲ್ಲಿ ಪರಿಣಾಮ ಬೀರುತ್ತದೆ ಎಂಬುದನ್ನು ನೋಡಬೇಕಿದೆ. ಅದಕ್ಕಾಗಿ ಅಗತ್ಯವಾದ ಬಫರ್ ಅನ್ನೂ ನಾವು ಇಟ್ಟುಕೊಂಡಿದ್ದೇವೆ. ಜಿಎಸ್‌ಟಿ ಸಂಗ್ರಹವನ್ನು ಹೆಚ್ಚಿಸಲು ಯಾವ ರೀತಿಯ ಪ್ರಯತ್ನಗಳನ್ನು ಮಾಡಬೇಕು ಎಂಬುದನ್ನೂ ನೋಡುತ್ತಿದ್ದೇವೆ ಎಂದರು.
ರಾಜ್ಯ ಹಿಂದೆಂದೂ ನೋಡದಂತಹ ಬರವನ್ನು ಎದುರಿಸುತ್ತಿದೆ. ಅದರ ಪರಿಣಾಮ ಖಂಡಿತವಾಗಿ ಎಲ್ಲ ಕ್ಷೇತ್ರಗಳ ಮೇಲೂ ಬೀಳುತ್ತದೆ. ಜಿಎಸ್‌ಟಿ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಿದರು.
ಫಾರಂ-7 ದುರುಪಯೋಗ: ಸಾಕ್ಷ್ಯ ಸಹಿತ ದೂರು :
ಫಾರಂ-7 ದುರುಪಯೋಗದ ಕುರಿತು ಚುನಾವಣಾ ಆಯೋಗಕ್ಕೆ ನೀಡಿರುವ ದೂರಿನ ಬಗ್ಗೆ ಪ್ರತಿಕ್ರಿಯಿಸಿದ ಡಾ.ಜಿ.ಪರಮೇಶ್ವರ್, ಅವರು ಅವರ ಕೆಲಸ ಮಾಡುತ್ತಾರೆ, ನಾವು ನಮ್ಮ ಕೆಲಸ ಮಾಡುತ್ತೇವೆ. ನಾವು ಸಾಕ್ಷ್ಯ ಸಹಿತ ದೂರು ನೀಡಿದ್ದೇವೆ. ಫಾರಂ ನಂಬರ್ 7 ಅನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದವರನ್ನು ರೆಡ್ ಹ್ಯಾಂಡ್ ಆಗಿ ಹಿಡಿದು, ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಿದ್ದೇವೆ ಎಂದರು.
ಒಬ್ಬ ವ್ಯಕ್ತಿ ಎಷ್ಟು ಫಾರಂ ನಂಬರ್ 7 ಸಲ್ಲಿಸಬಹುದು? ಅದಕ್ಕೆ ಇತಿಮಿತಿ ಇಲ್ಲವೇ? ಒಬ್ಬರೇ 100, 200, 400 ಅರ್ಜಿಗಳನ್ನು ಸಲ್ಲಿಸಿದರೆ ಅದು ಯಾವ ರೀತಿ ಸಾಧ್ಯ? ಎಂದು ಪ್ರಶ್ನಿಸಿದರು.
ಒಂದೇ ಒಂದು ಸಮುದಾಯದವರನ್ನು ಗುರುತಿಸಿಕೊಂಡು, ಫಾರಂಗಳನ್ನು ಎಲ್ಲಿಯೋ ಮುದ್ರಿಸಿ ತರಲಾಗುತ್ತಿದೆ. ಅವರ ಡೇಟಾವನ್ನು ಅವರಿಗೆ ಯಾರು ಕೊಟ್ಟರು? ಆ ಡೇಟಾ ಎಲ್ಲಿಂದ ಸಿಕ್ಕಿತು? ಮುದ್ರಿತ ಫಾರಂಗಳ ಮೇಲೆ ಅವರ ಹೆಸರು ಮತ್ತು ಮತದಾರರ ಗುರುತಿನ ಚೀಟಿ ವಿವರಗಳನ್ನು ಬರೆದು ಸಲ್ಲಿಸಲಾಗುತ್ತಿದೆ. ಇದು ಕಾನೂನಿಗೆ ವಿರುದ್ಧವಾದದ್ದು ಎಂದು ಹೇಳಿದರು.
ಈ ಎಲ್ಲವನ್ನೂ ನಾವು ಸಾಕ್ಷ್ಯ ಸಹಿತ ಚುನಾವಣಾ ಆಯೋಗಕ್ಕೆ ನೀಡಿದ್ದೇವೆ. ಚುನಾವಣಾ ಆಯೋಗವು ಸಂಬಂಧಪಟ್ಟವರಿಗೆ ನೋಟಿಸ್ ನೀಡಿ ಏಳು ದಿನಗಳ ಸಮಯ ಕೊಟ್ಟು, ನಂತರ ಎಫ್‌ಐಆರ್ ದಾಖಲಿಸುವುದಾಗಿ ಹೇಳಿದೆ. ಅದನ್ನು ಅವರು ಮಾಡಬೇಕು. ನಾವು ಗುರುತಿಸಿ ನೀಡಿರುವ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಬೇಕು ಎಂದು ಒತ್ತಾಯಿಸಿದರು.






