ಮುಸ್ಲಿಮರು, ದಲಿತರ ರಕ್ತ ಒಂದೇ : ರಿಝ್ವಾನ್ ಅರ್ಶದ್

ಬೆಂಗಳೂರು : ಮುಸ್ಲಿಮ್ ಸಮುದಾಯ ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳು ಬೇರೆ ಬೇರೆಯಲ್ಲ. ಇಂದಿನ ಬಹುತೇಕ ಮುಸ್ಲಿಮರು ಪೂರ್ವದಲ್ಲಿ ದಲಿತರಾಗಿದ್ದರು. ಎರಡು ಸಮುದಾಯಗಳ ರಕ್ತವೂ ಒಂದೇ ಆಗಿದೆ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವ ರಿಝ್ವಾನ್ ಅರ್ಶದ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ನಮ್ಮ ಪೂರ್ವಿಕರು ಯಾವ ಕಾರಣಕ್ಕಾಗಿ ಮತಾಂತರಗೊಂಡರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಧರ್ಮ ಬದಲಾವಣೆಯಾದ ಮಾತ್ರಕ್ಕೆ ಮೈಯಲ್ಲಿ ಹರಿಯುವ ರಕ್ತ ಬದಲಾಗುವುದಿಲ್ಲ. ಹೀಗಾಗಿ ನಾವೆಲ್ಲರೂ ಒಂದೇ ಸಮುದಾಯದವರು, ನಮ್ಮ ನಡುವೆ ಯಾವುದೇ ಭೇದಭಾವವಿಲ್ಲ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಮುಸ್ಲಿಮರೆಲ್ಲರೂ ಮಾಜಿ ದಲಿತರು ಎಂದು ಹೇಳಿದರು.
ದಲಿತರು ವಾಸ ಮಾಡುವ ಪ್ರದೇಶ ಎಲ್ಲೆಲ್ಲಿ ಇರುತ್ತವೆಯೋ, ಮುಸ್ಲಿಮರು ಕೂಡ ಅದೇ ಪರಿಸರದಲ್ಲಿ ವಾಸಿಸುತ್ತಾರೆ. ದಲಿತರು ಮತ್ತು ಹಿಂದುಳಿದ ವರ್ಗಗಳು ಎದುರಿಸುತ್ತಿರುವ ಕಷ್ಟ-ಕಾರ್ಪಣ್ಯಗಳನ್ನೇ ಮುಸ್ಲಿಮ್ ಸಮುದಾಯವೂ ಎದುರಿಸುತ್ತಿದೆ. ನೀವು ಯಾವ ಸಮಸ್ಯೆಗಳನ್ನು ಎದುರಿಸುತ್ತಿದ್ದೀರೋ, ನಾವೂ ಅದೇ ರೀತಿಯ ಸಾಮಾಜಿಕ, ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಆದ್ದರಿಂದ ದಲಿತ ಸಮುದಾಯದ ಸ್ವಾಮೀಜಿಗಳು ಮುಸ್ಲಿಮರ ಪರವಾಗಿಯೂ ನಿಲ್ಲಬೇಕು, ನಮ್ಮ ಕಷ್ಟಗಳಿಗೂ ಧ್ವನಿಯಾಗಬೇಕು ಎಂದು ಸಚಿವರು ಮನವಿ ಮಾಡಿದರು.






