ರೋರಿಕ್, ದೇವಿಕಾ ರಾಣಿ ಎಸ್ಟೇಟ್ ಅನ್ನು ಪ್ರವಾಸೋದ್ಯಮ ಇಲಾಖೆ ಅಭಿವೃದ್ಧಿ ವಿಚಾರ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಹೈಕೋರ್ಟ್
ಬೆಂಗಳೂರು : ಕನಕಪುರ ಮುಖ್ಯರಸ್ತೆಯ ತಾತಗುಣಿಯಲ್ಲಿರುವ ರೋರಿಕ್ ಮತ್ತು ದೇವಿಕಾ ರಾಣಿ ಎಸ್ಟೇಟ್ ಅನ್ನು ಪರಿಸರ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಸಲು ರಾಜ್ಯ ಸರಕಾರ ಅನುಮೋದನೆ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಪಿಐಎಲ್ ಸಲ್ಲಿಕೆಯಾಗಿದೆ.
ಈ ಬಗ್ಗೆ ಆರ್.ಆರ್.ನಗರದ ಐ ಕೇರ್ ಟ್ರಸ್ಟ್ ನ ಸಂಸ್ಥಾಪಕ ಟ್ರಸ್ಟಿ ನಿವೇದಿತಾ ಸುಂಕದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ಪೀಠ, ಕೇಂದ್ರ ಮತ್ತು ರಾಜ್ಯ ಸರಕಾರ, ಮತ್ತೊಬ್ಬ ಪ್ರತಿವಾದಿಯಾದ ರೋರಿಕ್ ಮತ್ತು ದೇವಿಕಾ ರಾಣಿ ರೋರಿಕ್ ಎಸ್ಟೇಟ್ ಮಂಡಳಿಗೆ ನೋಟಿಸ್ ಜಾರಿಗೊಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ‘490 ಎಕರೆಗಳಷ್ಟು ವಿಸ್ತಾರವಾಗಿರುವ ಈ ಎಸ್ಟೇಟ್ ಡೀಮ್ಡ್ ಅರಣ್ಯ ಪ್ರದೇಶವಾಗಿದೆ. 2024ರ ಡಿ.24ರಂದು ರಾಜ್ಯ ಸರಕಾರ ಅಲ್ಲಿ ಪರಿಸರ ಪ್ರವಾಸೋದ್ಯಮ ಮತ್ತು ಸಾಂಸ್ಕೃತಿಕ ಕೇಂದ್ರವನ್ನಾಗಿ ಅಭಿವೃದ್ಧಿಪಡಿಲು ಅನುಮೋದನೆ ನೀಡಿತ್ತು. ಆದರೆ ಅನುಮೋದನೆಗೆ ಮುನ್ನ ರಾಜ್ಯ ಸರಕಾರವು ಕೇಂದ್ರ ಸರಕಾರದಿಂದ ಅನುಮತಿ ಪಡೆಯಬೇಕಾಗಿತ್ತು. ಆದರೆ ಅನುಮತಿ ಪಡೆದಿಲ್ಲ.ಯೋಜನೆಯಲ್ಲಿಯೇ ಹಲವಾರು ಅಸ್ಪಷ್ಟತೆ ಮತ್ತು ಗೊಂದಲಗಳಿವೆ. ಉದ್ದೇಶಿತ ಯೋಜನೆಯು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನವನ್ನು ಸಂಪರ್ಕಿಸುವ ಆನೆ ಕಾರಿಡಾರ್ ಮತ್ತು ವನ್ಯಜೀವಿಗಳ ಚಲನೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು. ವಾದ ಆಲಿಸಿದ ಪೀಠ ನೋಟಿಸ್ ಜಾರಿಗೊಳಿಸಿದೆ.







