ರೌಡಿಶೀಟರ್ ಬಿಕ್ಲು ಶಿವ ಹತ್ಯೆ ಪ್ರಕರಣ | ಮತ್ತಿಬ್ಬರ ಬಂಧನ, ಬಿಜೆಪಿ ಶಾಸಕ ಬೈರತಿ ಬಸವರಾಜ್ ಸಂಬಂಧಿ ವಶಕ್ಕೆ

ಸಾಂದರ್ಭಿಕ ಚಿತ್ರ | PC : freepik
ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವನ ಹತ್ಯೆ ಪ್ರಕರಣದಲ್ಲಿ ಮತ್ತಿಬ್ಬರು ಆರೋಪಿಗಳನ್ನು ಬಂಧಿಸಿರುವ ಭಾರತಿನಗರ ಠಾಣೆ ಪೊಲೀಸರು, ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರ ಸಂಬಂಧಿಯೊಬ್ಬನನ್ನು ಸಹ ವಶಕ್ಕೆ ಪಡೆದಿರುವುದಾಗಿ ತಿಳಿಸಿದ್ದಾರೆ.
ಅರುಣ್ ಹಾಗೂ ನವೀನ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತೊಂದೆಡೆ, ಆರೋಪಿಗಳಿಗೆ ಕಾರು ನೀಡಿದ ಆರೋಪದಡಿ ಬಿಜೆಪಿ ಶಾಸಕ ಬೈರತಿ ಬಸವರಾಜ್ ಅವರ ಸಂಬಂಧಿ ಅನಿಲ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಇದರೊಂದಿಗೆ, ಈ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 7ಕ್ಕೆ ಏರಿಕೆಯಾಗಿದೆ ಎಂದು ಬೆಂಗಳೂರು ಪೂರ್ವ ವಿಭಾಗದ ಡಿಸಿಪಿ ಡಿ.ದೇವರಾಜ್ ತಿಳಿಸಿದ್ದಾರೆ.
ಪ್ರಕರಣದಲ್ಲಿ ಈ ಹಿಂದೆ ಕಿರಣ್, ವಿಮಲ್, ಪ್ರದೀಪ್, ಮದನ್ ಹಾಗೂ ಸ್ಯಾಮ್ಯುವೆಲ್ ಎಂಬ ಆರೋಪಿಗಳನ್ನು ಬಂಧಿಸಲಾಗಿತ್ತು. ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಜಗದೀಶ ಯಾನೆ ಜಗ್ಗನಿಗಾಗಿ ಪೊಲೀಸರು ತೀವ್ರ ಶೋಧ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ.
ಪ್ರಕರಣದ ವಿವರ: ಕಿತ್ತಕನೂರು ಬಳಿ ಖರೀದಿಸಿದ್ದ ನಿವೇಶನವೊಂದರ ಸಂಬಂಧಿಸಿದಂತೆ ಆರೋಪಿಗಳು ಬಿಕ್ಲು ಶಿವನಿಗೆ ಪ್ರಾಣ ಬೆದರಿಕೆ ಹಾಕುತ್ತಿದ್ದರು. ಮಾಜಿ ಸಚಿವ ಬೈರತಿ ಬಸವರಾಜ್, ಜಗದೀಶ್ ಮತ್ತು ಇತರರಿಂದ ತನಗೆ ಪ್ರಾಣ ಬೆದರಿಕೆಯಿದೆ ಎಂದು ಹಲವು ಬಾರಿ ಬಿಕ್ಲು ಶಿವ ಹೇಳಿಕೊಂಡಿದ್ದ. ಶಾಸಕ ಬೈರತಿ ಬಸವರಾಜ್ ಅವರ ಕುಮ್ಮಕ್ಕಿನಿಂದಲೇ ಆರೋಪಿಗಳು ನನ್ನ ಮಗನನ್ನು ಹತ್ಯೆಗೈದಿದ್ದಾರೆ. ಜುಲೈ 15ರ ರಾತ್ರಿ ಬಿಕ್ಲು ಶಿವನನ್ನು ಆರೋಪಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆಂದು ಮೃತ ಶಿವಪ್ರಕಾಶ್ ತಾಯಿ ವಿಜಯಲಕ್ಷ್ಮೀ ದೂರು ನೀಡಿದ್ದರು.
ಅನಿಲ್ಗೂ, ನಮಗೂ ಸಂಬಂಧವಿಲ್ಲ : ರೌಡಿಶೀಟರ್ ಬಿಕ್ಲು ಶಿವು ಹತ್ಯೆ ಪ್ರಕರಣದಲ್ಲಿ ಪೋಲಿಸರು ಬಂಧಿಸಿರುವ ಅನಿಲ್ಗೂ, ನಮಗೂ ಯಾವುದೇ ರೀತಿಯ ಸಂಬಂಧವಿಲ್ಲ. ಪೋಲಿಸರಿಂದ ಬಂಧನಕ್ಕೊಳಗಾಗಿರುವ ಅನಿಲ್, ನನ್ನ ಸಹೋದರ ಮಗನೆಂದು ಮಾಧ್ಯಮಗಳಲ್ಲಿ ಬಿತ್ತರಿಸಲಾಗುತ್ತಿದೆ. ಇದು ಸಂಪೂರ್ಣವಾಗಿ ಸತ್ಯಕ್ಕೆ ದೂರವಾದ ಮಾತು. ಆತ ಯಾರೆಂಬುದೇ ನಮಗೆ ತಿಳಿದಿಲ್ಲ ಎಂದು ಬಿಜೆಪಿ ಶಾಸಕ ಬೈರತಿ ಬಸವರಾಜ್ ಸ್ಪಷ್ಟಣೆ ನೀಡಿದ್ದಾರೆ.







