ರೌಡಿಶೀಟರ್ ಹತ್ಯೆ ಪ್ರಕರಣ: ಯಾರ ವಿರುದ್ಧವೂ ದೂರು ಕೊಟ್ಟಿಲ್ಲ ಎಂದ ಶಿವಪ್ರಕಾಶ್ನ ತಾಯಿ
"ಈ ಪ್ರಕರಣಕ್ಕೂ ಬೈರತಿ ಬಸವರಾಜ್ ಅವರಿಗೂ ಯಾವುದೇ ಸಂಬಂಧ ಇಲ್ಲ"

ರೌಡಿಶೀಟರ್ ಶಿವಪ್ರಕಾಶ್
ಬೆಂಗಳೂರು: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಕೊಲೆಯಾದ ರೌಡಿಶೀಟರ್ ಶಿವಪ್ರಕಾಶ್ ಯಾನೆ ಬಿಕ್ಲು ಶಿವ ಪ್ರಕರಣವು ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇದೀಗ ‘ನಾನು ಯಾರ ವಿರುದ್ಧವೂ ದೂರು ಕೊಟ್ಟಿಲ್ಲ’ ಎಂದು ಹತ್ಯೆಯಾದ ಶಿವಪ್ರಕಾಶ್ನ ತಾಯಿಯೇ ಹೇಳಿಕೆ ನೀಡಿದ್ದಾರೆ.
ಈ ಕೊಲೆ ಪ್ರಕರಣದಲ್ಲಿ ಕೆ.ಆರ್.ಪುರಂ ಕ್ಷೇತ್ರದ ಶಾಸಕ ಬೈರತಿ ಬಸವರಾಜ್ ಅವರನ್ನು ಐದನೇ ಆರೋಪಿಯನ್ನಾಗಿ ಪೊಲೀಸರು ಎಫ್ಐಆರ್ ದಾಖಲಿಸಿದ್ದರು. ರೌಡಿಶೀಟರ್ ಶಿವಪ್ರಕಾಶ್ ತಾಯಿ ವಿಜಯಲಕ್ಷ್ಮೀ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದೆ ಎಂದು ಹೇಳಲಾಗಿತ್ತು.
ಆದರೆ ಇದೀಗ ಈ ಪ್ರಕರಣದ ಬಗ್ಗೆ ಸುದ್ದಿಗಾರರೊಂದಿಗೆ ಸ್ಪಷ್ಟನೆ ನೀಡಿರುವ ಶಿವಪ್ರಕಾಶ್ನ ತಾಯಿ ವಿಜಯಲಕ್ಷ್ಮೀ, ನಾನು ಬೈರತಿ ಬಸವರಾಜ್ ಸೇರಿದಂತೆ ಯಾರ ವಿರುದ್ಧವೂ ದೂರು ಕೊಟ್ಟಿಲ್ಲ. ಪೊಲೀಸರು ಅವರ ವಿರುದ್ಧ ಏಕೆ ಎಫ್ಐಆರ್ ಹಾಕಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
ನನ್ನ ಮಗನಿಗೆ ಕೆಲವರಿಂದ ಪ್ರಾಣ ಬೆದರಿಕೆ ಇತ್ತೆಂಬುದು ನಿಜ. ಆದರೆ ಈ ಪ್ರಕರಣಕ್ಕೂ, ಬೈರತಿ ಬಸವರಾಜ್ ಅವರಿಗೂ ಯಾವುದೇ ಸಂಬಂಧ ಇಲ್ಲ. ಪೊಲೀಸರೇ ಅವರ ಹೆಸರನ್ನು ಬರೆದುಕೊಂಡಿದ್ದಾರೆ. ನಾನು ಯಾರ ಮೇಲೂ ದೂರು ಕೊಟ್ಟಿಲ್ಲ ಎಂದ ಮೇಲೆ ಹೇಗೆ ಎಫ್ಐಆರ್ ದಾಖಲಿಸಲಾಗಿದೆ ಎಂದು ವಿಜಯಲಕ್ಷ್ಮೀ ಕೇಳಿದರು.
ನನ್ನ ಮಗ ಕೊಲೆಯಾದ ನಂತರ ನಾವು ಚಿಂತಾಕ್ರಾಂತರಾಗಿದ್ದೇವೆ. ಪತ್ನಿ ಹಾಗೂ ಮಕ್ಕಳಿಗೆ ಮುಂದಿನ ಭವಿಷ್ಯವೇನು ಎಂದು ಚಿಂತೆ ಮಾಡುತ್ತಿದ್ದೇವೆ. ಅಂತ್ಯ ಸಂಸ್ಕಾರ ಹೇಗೆ ನಡೆಸಬೇಕು ಎಂಬುದು ನಮಗೆ ತಿಳಿದಿರಲಿಲ್ಲ. ನಮ್ಮ ಕುಟುಂಬಕ್ಕೆ ಆಸರೆಯಾದ ಮಗ ಹೋದನೆಂಬ ಚಿಂತನೆ ಇರುವಾಗ ಬೇರೆಯವರ ವಿರುದ್ಧ ದೂರು ಕೊಡುವ ಅಗತ್ಯವಿಲ್ಲ ಎಂದು ವಿಜಯಲಕ್ಷ್ಮೀ ಸ್ಪಷ್ಟಪಡಿಸಿದರು.
ಎಫ್ಐಆರ್ ದಾಖಲಿಸಿದ್ದರ ವಿರುದ್ಧ ಕಾನೂನು ಹೋರಾಟ: ಬೈರತಿ ಬಸವರಾಜ್
ರೌಡಿಶೀಟರ್ ಬಿಕ್ಲುಶಿವನ ಕೊಲೆ ಪ್ರಕರಣದಲ್ಲಿ ನನ್ನ ಪಾತ್ರ ಇಲ್ಲ. ರಾಜಕೀಯ ಷಡ್ಯಂತ್ರದಿಂದ ಈ ರೀತಿ ಏಕೆ ನಡೆದಿದೆ ಎಂಬುದು ಆಶ್ಚರ್ಯವುಂಟು ಮಾಡಿದೆ. ಕೊಲೆಯಾದವನ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ದೂರು ಕೊಟ್ಟ ತಕ್ಷಣ ಏಕಾಏಕಿ ನನ್ನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಯಾರೇ ದೂರು ಕೊಟ್ಟರೂ ಎಫ್ಐಆರ್ ದಾಖಲಿಸಬಹುದಾ? ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ಶಾಸಕ ಬೈರತಿ ಬಸವರಾಜ್ ಪ್ರತಿಕ್ರಿಯಿಸಿದರು.
ಎಸಿಪಿ ಹಂತದ ಅಧಿಕಾರಿಯಿಂದ ತನಿಖೆ:
‘ಈ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್ ಅವರ ಹೆಸರು ಕೇಳಿಬಂದಿರುವುದರಿಂದ ಅದು ಗಂಭೀರ ಸ್ವರೂಪ ಪಡೆದುಕೊಂಡಿದೆ. ಎಫ್ಐಆರ್ ನಲ್ಲಿ ದಾಖಲಾಗಿರುವ ಅಂಶಗಳ ಆಧಾರದ ಮೇಲೆ ಎಸಿಪಿ ಹಂತದ ಅಧಿಕಾರಿಯಿಂದ ತನಿಖೆ ನಡೆಯುತ್ತಿದೆ. ನಗರದ ಇತರ ಪೊಲೀಸ್ ಠಾಣೆಗಳಲ್ಲಿ ಬಂಧಿತ ಆರೋಪಿಗಳ ಮೇಲೆ ಅಪರಾಧ ಪ್ರಕರಣಗಳು ದಾಖಲಾಗಿದೆಯೇ ಎಂಬ ಅಂಶಗಳನ್ನು ಸಹ ಪರಿಗಣಿಸಲಾಗುತ್ತಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಸೀಮಂತ ಕುಮಾರ್ ಸಿಂಗ್ ಹೇಳಿದರು.







