ಕಲ್ಲು ಕ್ವಾರಿ ನಿಯಮ ಉಲ್ಲಂಘನೆ ಆರೋಪ: ದಂಡ ಹಾಕಿಲ್ಲ, ಬರೀ ನೋಟಿಸ್ ಬಂದಿದೆ : ರುದ್ರಪ್ಪ ಲಮಾಣಿ

ಬೆಂಗಳೂರು : ಕಲ್ಲು ಕ್ವಾರಿ ಮತ್ತು ಕ್ರಷರ್‍ಗಳ ಗುತ್ತಿಗೆ ನಿಯಮ ಸಂಬಂಧ ನನಗೆ ಯಾವುದೇ ರೀತಿಯ ದಂಡ ಹಾಕಿಲ್ಲ. ಬದಲಾಗಿ, ನೋಟಿಸ್ ಮಾತ್ರ ಬಂದಿದೆ ಎಂದು ಸಕ್ಕರೆ, ಜವಳಿ ಸಚಿವ ರುದ್ರಪ್ಪ ಲಮಾಣಿ ಹೇಳಿದ್ದಾರೆ.
ರವಿವಾರ ಹಾವೇರಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿರುವ ಬಹುತೇಕ ಕಲ್ಲು ಕ್ವಾರಿ ಮತ್ತು ಕ್ರಷರ್‍ಗಳ ಗುತ್ತಿಗೆದಾರರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಅದರಲ್ಲಿ ನಾನು ಒಬ್ಬ. ಅವರು ಯಾವುದೇ ದಂಡ ಹಾಕಿಲ್ಲ ಎಂದು ತಿಳಿಸಿದರು.
ಹಲವು ವರ್ಷಗಳಿಂದ ಕಲ್ಲು ಕ್ವಾರಿ ನಡೆಯುತ್ತಿದೆ. ಈಗ ಡ್ರೋನ್ ಸಮೀಕ್ಷೆ ಮಾಡಿ ನೋಟಿಸ್ ಕೊಟ್ಟಿದ್ದಾರೆ. ಇದು ಸಾಮಾನ್ಯ. ಇಲಾಖೆಯವರು ತಪ್ಪಾಗಿ ನೋಟಿಸ್ ನೀಡಿದ್ದಾರೆ. ಏನು ತಪ್ಪಾಗಿದೆ? ಎಂಬುದನ್ನು ಅವರಿಗೆ ಹೇಳಿದ್ದೇವೆ. ಇಲಾಖೆಯವರೂ ಒಪ್ಪಿಕೊಂಡಿದ್ದಾರೆ. ನೋಟಿಸ್ ನೀಡಿದ್ದು ದೊಡ್ಡ ವಿಷಯವಲ್ಲ. ರಾಜ್ಯದ ಎಲ್ಲ ಕಡೆಯೂ ಆಗಿದೆ. ಮುಂದಿನ ಕ್ರಮ ಕೈಗೊಳ್ಳಲು ನಮಗೂ ಅವಕಾಶವಿದೆ ಎಂದು ಅವರು ಹೇಳಿದರು.
ನೋಟಿಸ್ ಬಗ್ಗೆ ಇಲಾಖೆಯ ಸಚಿವರು ಹಾಗೂ ಕಾರ್ಯದರ್ಶಿ ಜೊತೆ ಮಾತನಾಡಲಾಗಿದೆ. ಪುನಃ ಪರಿಶೀಲನೆ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.






