ಜವಳಿ ಪಿಎಲ್ಐ ಯೋಜನೆ: ಹೂಡಿಕೆ-ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕಕ್ಕೆ ದೇಶದಲ್ಲೇ ಎರಡನೆ ಸ್ಥಾನ: ರುದ್ರಪ್ಪ ಲಮಾಣಿ
-ರಾಜ್ಯದಲ್ಲಿ 1,516 ಕೋಟಿ ರೂ.ಹೂಡಿಕೆ, 5,611 ಉದ್ಯೋಗ ಸೃಷ್ಟಿ

ಬೆಂಗಳೂರು : ಕೇಂದ್ರ ಸರಕಾರದ ಉತ್ಪಾದನೆ ಆಧಾರಿತ ಪ್ರೋ ತ್ಸಾಹಕ ಯೋಜನೆಯಡಿ ಜವಳಿ ಕ್ಷೇತ್ರದಲ್ಲಿ ಹೂಡಿಕೆ ಆಕರ್ಷಣೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನ ಪಡೆದಿದೆ. ಈ ಸಾಧನೆಯನ್ನು ಮತ್ತಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕೇಂದ್ರದ ಪರಿಷ್ಕೃತ ಪಿಎಲ್ಐ ಯೋಜನೆಯ ಪ್ರಯೋಜನವನ್ನು ರಾಜ್ಯದ ಅರ್ಹ ಜವಳಿ ಉದ್ಯಮಗಳಿಗೆ ತಲುಪಿಸಲು ವಿಶೇಷ ನೆರವು ಅಭಿಯಾನ ಆರಂಭಿಸಲಾಗುವುದು ಎಂದು ಜವಳಿ ಸಚಿವ ರುದ್ರಪ್ಪ ಲಮಾಣಿ ತಿಳಿಸಿದ್ದಾರೆ.
ಗುರುವಾರ ಈ ಸಂಬಂಧ ಪ್ರಕಟಣೆ ನೀಡಿರುವ ಅವರು, ಕೇಂದ್ರ ಜವಳಿ ಸಚಿವಾಲಯವು ಲೋಕಸಭೆಯಲ್ಲಿ ನೀಡಿರುವ ಮಾಹಿತಿಯ ಪ್ರಕಾರ, 2026ರ ಮಾರ್ಚ್ 31ರ ವರೆಗೆ ಪಿಎಲ್ಐ ಯೋಜನೆಯಡಿ ಕರ್ನಾಟಕದ ಆರು ಕಂಪೆನಿಗಳ ಮೂಲಕ 1,515.99 ಕೋಟಿ ರೂ.ಹೂಡಿಕೆಯಾಗಿದ್ದು, 5,611 ಉದ್ಯೋಗಗಳು ಸೃಷ್ಟಿಯಾಗಿವೆ. ಈ ಎರಡೂ ವಿಭಾಗಗಳಲ್ಲಿ ಕರ್ನಾಟಕ ರಾಷ್ಟ್ರಮಟ್ಟದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಹೇಳಿದ್ದಾರೆ.
ಜವಳಿ ಉದ್ಯಮಗಳಿಗೆ ಪಿಎಲ್ಐ ಯೋಜನೆಯ ಅರ್ಹತಾ ನಿಯಮಗಳನ್ನು ಸಡಿಲಗೊಳಿಸಿ, ಯೋಜನೆಯ ಅವಧಿಯನ್ನು ವಿಸ್ತರಿಸಿರುವ ಕೇಂದ್ರ ಸರಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ. ಇದರಿಂದ ರಾಜ್ಯದ ಜವಳಿ ಮತ್ತು ಸಿದ್ಧ ಉಡುಪು ತಯಾರಿಕಾ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ದೊರೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಜವಳಿ ಕ್ಷೇತ್ರದ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿರುವುದು ರಾಜ್ಯದ ಕೈಗಾರಿಕಾ ಸಾಮಥ್ರ್ಯ ಹಾಗೂ ಹೂಡಿಕೆದಾರರ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಕೇಂದ್ರದ ಪರಿಷ್ಕೃತ ಪಿಎಲ್ಐ ಯೋಜನೆಯಿಂದ ಮಧ್ಯಮ ಗಾತ್ರದ ಕೈಗಾರಿಕೆಗಳು ಸೇರಿದಂತೆ ಅರ್ಹ ಉದ್ಯಮಗಳಿಗೆ ಅವಕಾಶಗಳು ಲಭ್ಯವಾಗಲಿವೆ. ಈ ಅವಕಾಶಗಳನ್ನು ಜವಳಿ ಉದ್ಯಮಗಳು ಸಮರ್ಥವಾಗಿ ಬಳಸಿಕೊಳ್ಳಲು ಸರಕಾರ ನೆರವು ಅಭಿಯಾನವನ್ನು ಆರಂಭಿಸಲಿದೆ ಎಂದು ರುದ್ರಪ್ಪ ಲಮಾಣಿ ತಿಳಿಸಿದ್ದಾರೆ.
ಮಹತ್ವದ ಬದಲಾವಣೆ: ಕೇಂದ್ರ ಜವಳಿ ಸಚಿವಾಲಯವು ಪಿಎಲ್ಐ ಯೋಜನೆಯ ಎರಡನೆ ವಿಭಾಗದಲ್ಲಿ ಕನಿಷ್ಠ ವಹಿವಾಟಿನ ಮಿತಿಯನ್ನು 200 ಕೋಟಿ ರೂ.ಗಳಿಂದ 100 ಕೋಟಿ ರೂ.ಗಳಿಗೆ ಇಳಿಸಿದೆ. ನಾಲ್ಕನೇ ಸುತ್ತಿನಲ್ಲಿ ಅನುಮೋದನೆ ಪಡೆಯುವ ಕಂಪನಿಗಳಿಗೆ ಯೋಜನೆಯ ಅವಧಿಯನ್ನು 2033-34ನೇ ಹಣಕಾಸು ವರ್ಷದ ವರೆಗೆ ವಿಸ್ತರಿಸಲಾಗಿದೆ.
ಮಾನವ ನಿರ್ಮಿತ ನಾರಿನ ಸಿದ್ಧ ಉಡುಪುಗಳು, ಬಟ್ಟೆಗಳು ಹಾಗೂ ತಾಂತ್ರಿಕ ಜವಳಿ ಉತ್ಪನ್ನಗಳ ತಯಾರಿಕೆಗೆ ಸಂಬಂಧಿಸಿದ ಅರ್ಹ ಉದ್ಯಮಗಳು ನ.1ರಿಂದ ಡಿಸೆಂಬರ್ 31ರ ವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ರಾಜ್ಯದ ಜವಳಿ ಉದ್ಯಮಗಳಿಗೆ ಪರಿಷ್ಕೃತ ಮಾರ್ಗಸೂಚಿಗಳ ಕುರಿತು ಅರಿವು ಮೂಡಿಸುವುದು, ಅರ್ಹ ಕೈಗಾರಿಕೆಗಳನ್ನು ಗುರುತಿಸುವುದು ಹಾಗೂ ಅರ್ಜಿ ಸಲ್ಲಿಕೆ ಪ್ರಕ್ರಿಯೆಗೆ ಮಾರ್ಗದರ್ಶನ ನೀಡಲು ಕೈಮಗ್ಗ ಮತ್ತು ಜವಳಿ ಇಲಾಖೆಯ ಮೂಲಕ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
ಈ ಉಪಕ್ರಮವು ರಾಜ್ಯ ಸರಕಾರ ಇತ್ತೀಚೆಗೆ ಜಾರಿಗೆ ತಂದಿರುವ ‘ಕರ್ನಾಟಕ ಜವಳಿ ಮತ್ತು ಸಿದ್ಧ ಉಡುಪು ನೀತಿ 2026-31’ಕ್ಕೆ ಪೂರಕವಾಗಿರಲಿದೆ. 4ಸಾವಿರ ಕೋಟಿ ರೂ.ಅನುದಾನ ಒದಗಿಸುವ ಈ ನೀತಿಯ ಮೂಲಕ ಐದು ವರ್ಷಗಳಲ್ಲಿ 20ಸಾವಿರ ಕೋಟಿ ರೂ.ಹೂಡಿಕೆ ಆಕರ್ಷಿಸಿ, 5ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಈ ಕುರಿತು ಕೈಗಾರಿಕೆ ಇಲಾಖೆಯ ಕಾರ್ಯದರ್ಶಿ ರೋಹಿಣಿ ಸಿಂಧೂರಿ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳ ಯೋಜನೆಗಳ ಪ್ರಯೋಜನಗಳನ್ನು ಉದ್ಯಮಿಗಳಿಗೆ ತಲುಪಿಸುವ ಮೂಲಕ ಜವಳಿ ಕ್ಷೇತ್ರದ ಬೆಳವಣಿಗೆಗೆ ಆದ್ಯತೆ ನೀಡಲಾಗುವುದು. ಜವಳಿ ಪಿಎಲ್ಐ ಯೋಜನೆಯಡಿ ಕರ್ನಾಟಕ ಈಗಾಗಲೇ ಉತ್ತಮ ಸಾಧನೆ ಮಾಡಿದೆ. ಕೇಂದ್ರದ ಪರಿಷ್ಕೃತ ಅರ್ಹತಾ ನಿಯಮಗಳಿಂದ ಹೆಚ್ಚಿನ ಉದ್ಯಮಗಳಿಗೆ ಯೋಜನೆಯ ಪ್ರಯೋಜನ ಪಡೆಯುವ ಅವಕಾಶ ದೊರೆಯಲಿದೆ ಎಂದರು.
ವಿಶೇಷ ಅಭಿಯಾನದಡಿ ಉದ್ಯಮಿಗಳೊಂದಿಗೆ ಸಂವಾದ, ಜಾಗೃತಿ ಕಾರ್ಯಕ್ರಮಗಳು ಹಾಗೂ ಅರ್ಜಿ ಸಲ್ಲಿಕೆಗೆ ಮಾರ್ಗದರ್ಶನ ನೀಡುವ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಇತರ ಭಾಗಗಳಲ್ಲೂ ಜವಳಿ ಕೈಗಾರಿಕೆಗಳ ವಿಸ್ತರಣೆಗೆ ಆದ್ಯತೆ ನೀಡಲಾಗುವುದು. ಅರ್ಹ ಜವಳಿ ಉದ್ಯಮಿಗಳು ಕೇಂದ್ರದ ಅಧಿಕೃತ ವೆಬ್ಸೈಟ್ https://pli.texmin.gov.in ಮೂಲಕ ಡಿಸೆಂಬರ್ 31ರೊಳಗೆ ಅರ್ಜಿ ಸಲ್ಲಿಸುವ ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ಕೋರಲಾಗಿದೆ.






