ಸಚಿವ ಝಮೀರ್ ಅಹ್ಮದ್ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರೂಪೇಶ್ ರಾಜಣ್ಣ ಪೊಲೀಸ್ ವಶಕ್ಕೆ

ಬೆಂಗಳೂರು: ವಸತಿ ಸಚಿವ ಝಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿ ಸರ್ಫರಾಝ್ ಖಾನ್ ತನ್ನನ್ನು ನಿಂದಿಸಿದ್ದಾರೆ ಎಂದು ಆರೋಪಿಸಿ, ಸಚಿವರ ನಿವಾಸಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ಕನ್ನಡ ಪರ ಹೋರಾಟಗಾರ ರೂಪೇಶ್ ರಾಜಣ್ಣ ಹಾಗೂ ಅವರ ಸಂಗಡಿಗರನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಜರುಗಿತು.
ಮಂಗಳವಾರ ಬೆಳಗ್ಗೆ ನಗರದ ಗಾಲ್ಫ್ ಕ್ಲಬ್ ರಸ್ತೆಯಲ್ಲಿರುವ ಝಮೀರ್ ಅಹ್ಮದ್ ನಿವಾಸದ ಬಳಿ ಆಗಮಿಸಿದ ರೂಪೇಶ್ ರಾಜಣ್ಣ ಹಾಗೂ ಅವರ ಸಂಗಡಿಗರು ಮನೆಯ ಒಳಗೆ ಹೋಗಲು ಯತ್ನಿಸಿದರು. ಈ ವೇಳೆ ಅಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸ್ ಅಧಿಕಾರಿ, ಮನೆಯಲ್ಲಿ ಯಾರೂ ಇಲ್ಲ ಹೋಗಿ ಎಂದರು.
ಈ ವೇಳೆ ರೂಪೇಶ್ ರಾಜಣ್ಣ ನಮ್ಮನ್ನು ಯಾಕೆ ತಡೆಯುತ್ತೀರಿ. ನಾವು ಸಚಿವರ ಬಳಿ ಮಾತನಾಡಬೇಕು ಎಂದು ಏರು ಧ್ವನಿಯಲ್ಲಿ ಮಾತನಾಡಿದರು. ಆಗ ಪೊಲೀಸ್ ಅಧಿಕಾರಿ ಹಾಗೂ ರೂಪೇಶ್ ರಾಜಣ್ಣ ನಡುವೆ ಪರಸ್ಪರ ಏರು ಧ್ವನಿಯಲ್ಲೆ ಮಾತಿನ ಚಕಮಕಿ ನಡೆಯಿತು.
ಈ ಸಂದರ್ಭದಲ್ಲಿ ತಳ್ಳಾಟವು ನಡೆಯಿತು. ಆನಂತರ, ರೂಪೇಶ್ ರಾಜಣ್ಣ ಹಾಗೂ ಅವರ ಸಂಗಡಿಗರನ್ನು ವಶಕ್ಕೆ ಪಡೆದ ಪೊಲೀಸರು ವಾಹನದಲ್ಲಿ ಕರೆದೊಯ್ದರು. ಈ ವೇಳೆ ಸರ್ಫರಾಝ್ ಖಾನ್ ವಿರುದ್ಧ ರೂಪೇಶ್ ರಾಜಣ್ಣ ಘೋಷಣೆಗಳನ್ನು ಕೂಗಿದರು.
ಹಿನ್ನೆಲೆ ಏನು?: ತಮ್ಮ ವಿರುದ್ಧ ಅಕ್ರಮವಾಗಿ ರೆಸಾರ್ಟ್ ನಿರ್ಮಾಣ ಮಾಡಿರುವ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಸರ್ಫರಾಝ್ ಖಾನ್ ಸ್ಪಷ್ಟೀಕರಣ ನೀಡುವ ವಿಡಿಯೋದಲ್ಲಿ ರೂಪೇಶ್ ರಾಜಣ್ಣ ಕನ್ನಡ ಪರ ಹೋರಾಟಗಾರ ಎಂದು ಹೇಳಿಕೊಂಡು ಬ್ಲಾಕ್ ಮೇಲ್ ಮಾಡಿಕೊಂಡು, ಸರಕಾರಿ ಅಧಿಕಾರಿಗಳನ್ನು ಬೆದರಿಸುತ್ತಿರುತ್ತಾನೆ ಎಂದು ಹೇಳಿದ್ದರು.
ಕನ್ನಡದ ಶಾಲು ಹಾಕಿಕೊಂಡು ಸಮಾಜದಲ್ಲಿ ಕೆಟ್ಟ ಹೆಸರು ತರುತ್ತಿದ್ದಾರೆ. ಇವರ ವಿರುದ್ಧ ಮುಂದಿನ ದಿನಗಳಲ್ಲಿ ಕ್ರಮ ತೆಗೆದುಕೊಳ್ಳುತ್ತೇವೆ. ಕನ್ನಡ ಪರ ಹೋರಾಟ ಏನು ಎಂಬುದನ್ನು ಕರವೇ ಅಧ್ಯಕ್ಷ ನಾರಾಯಣಗೌಡ ಅವರನ್ನು ನೋಡಿ ಕಲಿಯಲಿ ಎಂದು ಸರ್ಫರಾಝ್ ಖಾನ್ ತಿಳಿಸಿದ್ದರು.







